ನಿರ್ಮಾಪಕ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಿಎಂರಿಂದ ಶಂಕು ಸ್ಥಾಪನೆ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರವೇರಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದ ಬಳಿ ನಿರ್ಮಾಪಕ ಸಂಘದ ನೂತನ ಕಟ್ಟಡ ತಲೆಎತ್ತಲಿದ್ದು, ಶಂಕು ಸ್ಥಾಪನೆ ವೇಳೆ ಕೃಷಿ ಸಚಿವ ಬಿಸಿ ಪಾಟೀಲ್, ನಟ-ನಿರ್ಮಾಪಕ ರವಿಚಂದ್ರನ್, ಹಿರಿಯ ನಟಿ ತಾರಾ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ''ಚಿತ್ರೋಧ್ಯಮಕ್ಕೆ ನಿರ್ಮಾಪಕ ಸಂಘದ ಕೊಡುಗೆ ಅಪಾರ. ಒಳ್ಳೆಯ ಚಿತ್ರಗಳನ್ನು ನೀಡಲಿ. ಕನ್ನಡ ಚಿತ್ರೋಧ್ಯಮ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯುವಂತಾಗಲಿ'' ಎಂದು ಹಾರೈಸಿದರು.

ಮುನಿರತ್ನ ಅವರು ನಿರ್ಮಾಪಕ ಸಂಘದ ಅಧ್ಯಕ್ಷರಾಗಿದ್ದ ವೇಳೆ ಸುಮಾರು 10 ಕೋಟಿ ನೀಡಿ ಗಾಂಧಿಭವನದ ಬಳಿ ಖಾಸಗಿ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಲಿಲ್ಲ. ಇದೀಗ, ಪ್ರವೀಣ್ ಕುಮಾರ್ ನಿರ್ಮಾಪಕ ಸಂಘದ ಅಧ್ಯಕ್ಷರಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಶಂಕು ಸ್ಥಾಪನೆ ಕೆಲಸ ಶುರುವಾಗಿದೆ.
ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರವಿಚಂದ್ರನ್ ''ನಿರ್ಮಾಪಕರು ಒಗ್ಗಟ್ಟಾಗಿ ಇರಬೇಕು, ಸ್ಟಾರ್‌ಗಳ ಹಿಂದೆ ಹೋಗುವುದನ್ನು ಬಿಡಬೇಕು, ಒಳ್ಳೆಯ ಕಥೆ ಆಯ್ಕೆ ಮಾಡ್ಕೊಂಡು ಸಿನಿಮಾ ಮಾಡ್ಬೇಕು. ಆಗಲೇ ನಿರ್ಮಾಪಕರು ಉದ್ಧಾರ ಆಗಲು ಸಾಧ್ಯ'' ಎಂದು ಹೇಳಿದರು.


Click it and Unblock the Notifications











