ಕನ್ನಡದ ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಅವರು ಗಂಭೀರ ವ್ಯಕ್ತಿತ್ವದವರು. ಅವರು ನಗುವುದು ಸಹ ಕಡಿಮೆಯೇ. ಸಿನಿಮಾಕ್ಕೂ ಯಡಿಯೂರಪ್ಪ ಅವರಿಗೂ ತುಸು ದೂರವೇ. ಆದರೆ ಕೆಲವು ಧಾರಾವಾಹಿಗಳನ್ನು ಅವರು ನೋಡುತ್ತಾರಂತೆ.
Recommended Video
ಆದರೆ ಇಂದು ಯಡಿಯೂರಪ್ಪ ಅವರೇ ನಾನು ಕನ್ನಡದ ಈ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದು, ಖಂಡಿತ ಸಿನಿಮಾ ನೋಡುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಆ ಸಿನಿಮಾ ಮತ್ಯಾವುದು ಅಲ್ಲ ದರ್ಶನ್ ಅಭಿನಯದ 'ರಾಬರ್ಟ್'.
ಹೌದು, ಯಡಿಯೂರಪ್ಪ ಅವರು ರಾಬರ್ಟ್ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಇಂದು ವಿಕಾಸಸೌಧದಲ್ಲಿ ನಡೆದ, ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿಮಾತನಾಡಿದ ಸಿಎಂ ಯಡಿಯೂರಪ್ಪ, 'ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ನೀವುಗಳು ಆ ಸಿನಿಮಾಕ್ಕಾಗಿ ಕಾಯುತ್ತಿದ್ದೀರಿ. ನಾನೂ ಸಹ ಆ ಸಿನಿಮಾ ನೋಡಿ ಸಂತೋಶ ಪಡುತ್ತೇನೆ' ಎಂದಿದ್ದಾರೆ ಯಡಿಯೂರಪ್ಪ.

ಯಡಿಯೂರಪ್ಪ ಅವರು ಸಿನಿಮಾ ನೋಡುವುದು ಅಪರೂಪ
ಯಡಿಯೂರಪ್ಪ ಅವರು ಸಿನಿಮಾಗಳನ್ನು ನೋಡುವುದು ಬಹಳ ಅಪರೂಪ. ನಿಖಿಲ್ ಕುಮಾರಸ್ವಾಮಿ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾದ ಪ್ರೀಮಿಯರ್ ಶೋ ಗೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಬಿಜೆಪಿ-ಕಾಂಗ್ರೆಸ್‌ನ ಹಲವು ನಾಯಕರು ಪ್ರೀಮಿಯರ್ ಶೋ ಗೆ ಹೋದರು ಆದರೆ ಯಡಿಯೂರಪ್ಪ ಹೋಗಿರಲಿಲ್ಲ.

ಮಹಾಭಾರತ ಧಾರಾವಾಹಿ ನೋಡುವಂತೆ ಹೇಳಿದ್ದ ಯಡಿಯೂರಪ್ಪ
ಇನ್ನು ಲಾಕ್‌ಡೌನ್ ಸಮಯದಲ್ಲಿ ಯಡಿಯೂರಪ್ಪ ಅವರು ಮನೆಯಲ್ಲಿ ಕೂತು ಮಹಾಭಾರತ ಧಾರಾವಾಹಿಯನ್ನು ಸಮಯ ಸಿಕ್ಕಾಗ ವೀಕ್ಷಣೆ ಮಾಡುತ್ತಿದ್ದರು. ಮಹಾಭಾರತ ಧಾರಾವಾಹಿ ನೋಡಿ ಮಕ್ಕಳಿಗೂ ತೋರಿಸಿ ಎಂದು ವಿಡಿಯೋ ಸಂದೇಶವನ್ನು ಸಹ ಯಡಿಯೂರಪ್ಪ ಆಗ ನೀಡಿದ್ದರು.

ದರ್ಶನ್ ಅನ್ನು ಹೊಗಳಿದ ಯಡಿಯೂರಪ್ಪ
ಇಂದು ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆಯೂ ಹೊಗಳಿಕೆಯ ಮಾತನ್ನಾಡಿದ ಸಿಎಂ ಯಡಿಯೂರಪ್ಪ, 'ದರ್ಶನ್ ಅವರು ಸಿನಿಮಾ ರಂಗದಲ್ಲಿ ಎತ್ತರಕ್ಕೆ ಏರಿದ್ದರೂ ಸಹ ಕೃಷಿಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ. ದರ್ಶನ್ ಅವರು ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಭಾರಿ ಆಗಿರುವುದಕ್ಕೆ ಅಭಿನಂದನೆ' ಎಂದರು ಯಡಿಯೂರಪ್ಪ.

ರಾಬರ್ಟ್ ಬಿಡುಗಡೆ ಯಾವಾಗ?
'ರಾಬರ್ಟ್' ಸಿನಿಮಾವು ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಚಿಕ್ಕಣ್ಣ, ಧರ್ಮಣ್ಣ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಸಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











