'ಕಾಂತಾರ- 1' ಚಿತ್ರದಲ್ಲಿ 'ಮೂರು ಮುತ್ತು' ನಾಟಕದ ಸತೀಶ್ ಪೈ, ಸಂತೋಷ್ ಪೈ..ಗುರುತು ಸಿಕ್ತಾ..?
ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರ ಮಾಡಿ ದಾಖಲೆ ಬರೆದಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ನಟಿಸಿ ಗೆದ್ದಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಹುತೇಕ ಕರ್ನಾಟಕದ ಕಲಾವಿದರನ್ನೇ ಚಿತ್ರದಲ್ಲಿ ಬಳಸಿಕೊಂಡು ಗೆದ್ದಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಬೇರೆ ಬೇರೆ ಚಿತ್ರರಂಗದ ಸ್ಟಾರ್ ಕಲಾವಿದರನ್ನು ಕರೆತರುವ ಪ್ರಯತ್ನ ನಡೆಯುತ್ತದೆ. 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಪ್ರೀಕ್ವೆಲ್‌ನಲ್ಲಿ ಪರಭಾಷೆಯ ಕಲಾವಿದರನ್ನು ಬಳಸಿಕೊಳ್ಳುವ ಅವಕಾಶ ರಿಷಬ್ ಶೆಟ್ಟಿ ಅವರಿಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಮಲಯಾಳಂ ನಟ ಜಯರಾಂ ಬಿಟ್ಟು ಬಹುತೇಕ ಕರಾವಳಿ ಭಾಗದ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಸಾವಿರಾರು ಸಹ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಶ್ರಮಿಸಿದ್ದಾರೆ.

ಒಳ್ಳೆ ಪ್ರತಿಭೆಗಳಿಗೆ ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿದ್ದಾರೆ. ಕೆಲವರಯ ಒಂದೊಂದೇ ಸನ್ನಿವೇಶದಲ್ಲಿ ಬಂದು ಹೋಗುತ್ತಾರೆ. 3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಕೂಡ ಚಾಪ್ಟರ್- 1ನಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಕರಾವಳಿ ಭಾಗದ ಜನಪ್ರಿಯ ಮೂರು ಮುತ್ತು ನಾಟಕದ ಕಲಾವಿದರು ಸಂತೋಷ್ ಪೈ ಹಾಗೂ ಸತೀಶ್ ಪೈ ಕೂಡ ಸಣ್ಣದೊಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ರೂಪಕಲಾ ನಾಟಕ ತಂಡದ 'ಮೂರು ಮುತ್ತು' ನಾಟಕ ಬಹಳ ಜನಪ್ರಿಯ. ಸಾವಿರಾರು ಪ್ರದರ್ಶನ ಕಂಡು ಈ ನಾಟಕ ಸದ್ದು ಮಾಡಿದೆ. ಸತೀಶ್ ಪೈ, ಸಂತೋಷ್ ಪೈ ಹಾಗೂ ಅಶೋಕ್ ಶಾನಭೋಗ್ ನಟನೆ ನೋಡಿ ನಗದವರಿಲ್ಲ. ಎರಡು ವರ್ಷಗಳ ಹಿಂದೆ ಅಶೋಕ್ ನಿಧನರಾಗಿದ್ದರು. ಇನ್ನು ಸತೀಶ್ ಪೈ ಹಾಗೂ ಸಂತೋಷ್ ಪೈ ಬೇರೆ ನಾಟಕಗಳಲ್ಲಿ ಕೂಡ ನಟಿಸಿದ್ದಾರೆ. ಹೊಸ ಪ್ರತಿಭೆಗಳ ನಡುವೆ ಇಂತಹ ಕಲಾವಿದರು ಹಿಂದೆ ಸರಿಯುವಂತಾಗಿದೆ. ಅಂತಹವರನ್ನು ಕರೆದು ರಿಷಬ್ ಶೆಟ್ಟಿ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಕೆಲವೇ ಕ್ಷಣಗಳು ಇವರಿಬ್ಬರು ತೆರೆಮೇಲೆ ಬಂದರೂ ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ.
ನೋಡಲು ಕೊಂಚ ಕುಬ್ಜರಾಗಿದರುವ ಸಂತೋಷ್ ಹಾಗೂ ಸತೀಶ್ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಮೋಡಿ ಮಾಡಿದವರು. 'ಕಾಂತಾರ- 1' ಚಿತ್ರದಲ್ಲಿ ರಾಜಕುಮಾರ ಕುಲಶೇಖರ(ಗುಲ್ಶನ್ ದೇವಯ್ಯ)ನಿಗೆ ಮದ್ಯ ತಂದು ಕೊಡುವ ಸನ್ನಿವೇಶ ಅದು. "ಗಂಗ ಸರ ನಾವೇ ಮಾಡಿದ್ದು" ಎಂದು ಇಬ್ಬರು ಹೇಳಿ ಹೋಗುತ್ತಾರೆ. ಕರಾವಳಿ ಭಾಗದ ಚಿತ್ರಮಂದಿರಗಳಲ್ಲಿ ಇವರಿಬ್ಬರು ತೆರೆಮೇಲೆ ಬಂದಾಗ ಪ್ರೇಕ್ಷಕರು ಓಹ್ ಎಂದು ಸಂಭ್ರಮಿಸುತ್ತಿದ್ದಾರೆ.
ಇದೇ ರೀತಿ ತಮ್ಮ ಊರಿನ ಸುತ್ತಾಮುತ್ತಲಿನ ಸಾಕಷ್ಟು ಪ್ರತಿಭೆಗಳಿಗೆ ರಿಷಬ್ ಶೆಟ್ಟಿ ಅವಕಾಶ ಕೊಟ್ಟಿದ್ದಾರೆ. ತಮ್ಮ ಊರನ್ನೇ ಒಂದು ಫಿಲ್ಮಿಸಿಟಿ ರೀತಿ ಬದಲಾಯಿಸಿಬಿಟ್ಟಿದ್ದಾರೆ. ತಮ್ಮ ಊರಿನ ಸುತ್ತಾಮುತ್ತಾ ಇಡೀ ಸಿನಿಮಾ ಚಿತ್ರೀಕರಣ ಮಾಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಸದ್ದು ಮಾಡ್ತಿದೆ. 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಮಗ, ಮಗಳು ಕೂಡ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಚ್ಯುತ್ ಕುಮಾರ್ ಕೂಡ ಅರಬ್ ವ್ಯಾಪಾರಿ ದಲಾಲ್ ಆಗಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ನವೀನ್ ಡಿ ಪಡೀಲ್, ಹರೀಪ್ರಶಾಂತ್ ಚಿತ್ರದಲ್ಲಿ ನಟಿಸಿದ್ದಾರೆ. ದಿವಂಗತ ನಟ ರಾಕೇಶ್ ಪೂಜಾರಿ ಕೂಡ ತೆರೆಮೇಲೆ ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ರಂಜಿಸುತ್ತಾರೆ.


Click it and Unblock the Notifications











