ಕನ್ನಡದ ಬಾಹುಬಲಿ ಆದ ಚಿಕ್ಕಣ್ಣನ ಮೊದಲ ದರ್ಶನ
ಸ್ಯಾಂಡಲ್ ವುಡ್ ನ ಕಾಮಿಡಿ ನಟ ಚಿಕ್ಕಣ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹಾಸ್ಯದ ಮೂಲಕ ಅಭಿಮಾನಿಗಳನ್ನು ನಗೆಕಡಲಲ್ಲಿ ತೇಲಿಸುವ ನಟ ಚಿಕ್ಕಣ್ಣ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಚಿಕ್ಕಣ್ಣ ಬಾಹುಬಲಿ ಅವತಾರವೆತ್ತಿದ್ದಾರೆ. ಅಂದ್ರೆ ಚಿಕ್ಕಣ್ಣ ಬಾಹುಬಲಿ ಆದ್ರ ಅಂತ ಅಚ್ಚರಿ ಪಡಬೇಡಿ. ಚಿಕ್ಕಣ್ಣ ಬಾಹುಬಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
ಹೌದು, ಚಿಕ್ಕಣ್ಣ 'ಶ್ರೀ ಭರತ ಬಾಹುಬಲಿ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಣ್ಣ ಬಾಹುಬಲಿ ಪಾತ್ರವನ್ನು ಮಾಡುತ್ತಿದ್ದಾರೆ. ಭರತನಾಗಿ ನಿರ್ದೇಶಕ ಮಂಜು ಮಾಂಡವ್ಯ ಕಾಣಿಸಿಕೊಳ್ಳುತ್ತಿದ್ದಾರೆ. 'ಮಾಸ್ಟರ್ ಪೀಸ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ಕೊಂಚ ಬ್ರೇಕ್ ನ ನಂತರ 'ಶ್ರೀ ಭರತ ಬಾಹುಬಲಿ' ಚಿತ್ರ ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶನ ಮಾಡುವ ಜೊತೆಗೆ ಮಂಜು ಅಭಿನಯ ಕೂಡ ಮಾಡುತ್ತಿರುವುದು ವಿಶೇಷ. ಇಂದು ಚಿಕ್ಕಣ್ಣ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಮೊದಲ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಈ ಚಿತ್ರದಲ್ಲಿ ಚಿಕ್ಕಣ್ಣ ರಾಯಲ್ ಲುಕ್ ನಲ್ಲಿ ಮಿಂಚಿದ್ದಾರೆ. ಮಂಜು ಮತ್ತು ಚಿಕ್ಕಣ್ಣ ಇಬ್ಬರು ಒಂದೇ ರೀತಿಯ ಕಾಸ್ಟ್ಯೂಮ್ ದರ್ಶನ ನೀಡಿದ್ದಾರೆ.
ಚಿತ್ರದ ಟೈಟಲ್ ನೋಡಿದ್ರೆ ಇದೊಂದು ಐತಿಹಾಸಿಕ ಚಿತ್ರವೇನೊ ಎಂದು ಎನಿಸುತ್ತೆ. ಆದ್ರೆ ಚಿಕ್ಕಣ್ಣನ ಸಿನಿಮಾ ಅಂದ್ಮೇಲೆ ಅದು ಪಕ್ಕ ಕಾಮಿಡಿ ಮನರಂಜನಾತ್ಮಕ ಸಿನಿಮಾ ವಾಗಿರುವುದ್ರಲ್ಲಿ ಯಾವುದೆ ಅನುಮಾನವಿಲ್ಲ. ಅದೇನೆ ಇರ್ಲಿ ಹುಟ್ಟುಹಬ್ಬದ ದಿನ ಚಿಕ್ಕಣ್ಣ ಬಾಹುಬಲಿ ಅವತಾರವೆತ್ತಿರುವುದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಇನ್ನು ಹೆಚ್ಚಾಗಿದೆ.


Click it and Unblock the Notifications











