ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮ*ಹತ್ಯೆ ಪ್ರಕರಣಕ್ಕೆ ತಿರುವು
ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಹೆಸರು ಮಾಡಿದವರು ಚಂದ್ರಶೇಖರ್ ಸಿದ್ದಿ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದಿಂದ ಬಂದು ತನ್ನ ಹಾಸ್ಯ ಪ್ರಜ್ಞೆಯ ಮೂಲಕ ಗಮನ ಸೆಳೆದಿದ್ದ ಚಂದ್ರಶೇಖರ್ ಸಿದ್ದಿ ರಂಗಭೂಮಿಯಲ್ಲಿ ಪಳಗಿದ್ದರು. ನೀನಾಸಂನಲ್ಲಿ ರಂಗ ತರಬೇತಿಯನ್ನು ಪಡೆದು ಬಣ್ಣದ ಸೆಳೆತಕ್ಕೆ ಸಿಲುಕಿದ್ದ ಚಂದ್ರಶೇಖರ್ ಸಿದ್ದಿ..
ಆತ್ಮ*ಹತ್ಯೆ ಮಾಡಿಕೊಂಡ ನಂತರ ಹಲವು ದಿಕ್ಕಿನಲ್ಲಿ ಚರ್ಚೆಗಳು ಶುರುವಾಗಿದ್ದವು.ಅವಕಾಶಗಳಿಲ್ಲದ ಅವಮಾನ .. ನೋವು .. ಸಂಕಟ .. ಚಂದ್ರಶೇಖರ್ ಸಿದ್ದಿ ಅವರನ್ನು ಖಿನ್ನತೆಗೆ ದೂಡಿತ್ತಾ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಇದೆಲ್ಲದರ ಪರಿಣಾಮ ಕೌಟಂಬಿಕ ಕಲಹ ಕೂಡ ಮೊಳೆತುಕೊಂಡು ಚಂದ್ರಶೇಖರ್ ಸಿದ್ದಿ ನೇಣಿಗೆ ಕೊರಳೊಡ್ಡಿದರಾ ಎನ್ನುವ ಅನುಮಾನ ಅನೇಕರಲ್ಲಿತ್ತು.

ಇದೆಲ್ಲದಕ್ಕೆ ಈಗ ಪೂರಕವಾಗಿ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಚಂದ್ರಶೇಖರ್ ಅವರ ಮೇಲೆ ಅವರ ಪತ್ನಿ ಕಮಲಾಕ್ಷಿ ಹಲ್ಲೆ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ.
ವೈರಲ್ ಆದ ವಿಡಿಯೋದಲ್ಲಿ ಚಂದ್ರಶೇಖರ್ ಸಿದ್ದಿ ಪತ್ನಿ ಕಮಲಾಕ್ಷಿ ಪೊರಕೆ, ಕಟ್ಟಿಗೆಯಿಂದ ಚಂದ್ರಶೇಖರ ಸಿದ್ದಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ನೋಡಬಹುದು. ಕಮಲಾಕ್ಷಿ ಮಾತ್ರವಲ್ಲದೇ ಸಂಬಂಧಿ ಕೂಡ ಚಂದ್ರಶೇಖರ್ ಅವರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.
ಈ ಹಿನ್ನೆಲೆ ಮೊದಲೇ ಅವಕಾಶ ವಂಚಿತರಾಗಿದ್ದ ಚಂದ್ರಶೇಖರ್ ಸಿದ್ದಿ ಅವರನ್ನು ಈ ಕೌಟಂಬಿಕ ಕಲಹ ಮಾನಸಿಕವಾಗಿ ಜರ್ಜರಿತನಾಗಿ ಮಾಡಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ಕೂಡ ಗೊತ್ತಾಗಿದೆ.
ಇನ್ನು, ಚಂದ್ರಶೇಖರ್ ಸಿದ್ದಿ ಆತ್ಮ*ಹತ್ಯೆಯ ಬೆನ್ನಲ್ಲಿಯೇ ಅನುಮಾನ ವ್ಯಕ್ತಪಡಿಸಿದ್ದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುವ ಚಂದ್ರಶೇಖರ್ ಸಿದ್ದಿ ಅವರ ತಾಯಿ ಲಕ್ಷ್ಮೀ ನನ್ನ ಮಗ ಮತ್ತು ಆತನ ಪತ್ನಿಯ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ಹೇಳಿದ್ದರು. ಮಗನ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಂದ್ಹಾಗೇ ಚಂದ್ರಶೇಖರ್ ಸಿದ್ದಿ ಆತ್ಮ*ಹತ್ಯೆಗೆ ಶರಣಾದ ನಂತರ ಕಮಲಾಕ್ಷಿ ''ಪಬ್ಲಿಕ್ ಟಿವಿ'' ಜೊತೆ ಮಾತನಾಡಿದ್ದರು. ''ನಾವು ಭಟ್ಟರ ಮನೆಯಲ್ಲಿ ಕೆಲಸಕ್ಕೆ ಇದ್ವಿ ಅಲ್ಲಿ ಎಲ್ಲ ಸರಿ ಇತ್ತು, ಅವತ್ತು ಬೆಳಗ್ಗೆ ಎಲ್ಲಾ ಚೆನ್ನಾಗಿಯೇ ಮಾತನಾಡಿದ್ದರು. ನಾನೇ ದೋಸೆ ಮಾಡಿಕೊಟ್ಟೆ, ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗ್ತಿದ್ದರು, ಅವತ್ತು ಕೂಡ ತೋಟದ ಕೆಲಸಕ್ಕೆ ಹೋದರು'' ಎಂದು ಹೇಳಿದ್ದರು ಎಂದು ಹೇಳಿದ್ದರು.
''ನಾನು ನನ್ನ ಮಗನನ್ನು ಶಾಲೆಗೆ ಕಳುಹಿಸಿ, 10ಕ್ಕೆ ಎಂದಿನಂತೆ ಅಂಗನವಾಡಿಯಲ್ಲಿ ಕೆಲಸ ಮಾಡುತ್ತೇನೆ, ಅವತ್ತು ಕೂಡ ನಾನು ಹೋಗಿದ್ದೇ, ನಮಗೆ ಅಲ್ಲಿಯೇ ಭಟ್ಟರ ಮನೆಯಲ್ಲಿ ಒಂದು ರೂಮ್ ಕೂಡ ಕೊಟ್ಟಿದ್ದಾರೆ. ನಾವು ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇವೆ, ಅವತ್ತು ಮಧ್ಯಾಹ್ನ 1.30ರ ಸಮಯಕ್ಕೆ ಮಗನನ್ನು ಸ್ಕೂಲಿನಿಂದ ಕರೆದುಕೊಂಡು ಬರಲು ನಾನು ಮನೆಗೆ ಬಂದೆ, ಆದರೆ ಅವರು, ನಾನೇ ಹೋಗ್ತಿನಿ ಎಂದರು. ನಿಮಗೆ ಸುಸ್ತಾಗಿದೆ ಎಂದು ಕೇಳಿದರೂ ಕೇಳಲಿಲ್ಲ ಅವರು ಬಟ್ಟೆ ಬದಲಾಯಿಸಿಕೊಂಡು ಹೊರಟರು. 2 ಗಂಟೆಗೆ ಸುಮಾರಿಗೆ ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದರು'' ಎಂದು ಹೇಳಿದ್ದರು. ''ಅವತ್ತು ಬೆಳಗ್ಗೆಯಿಂದಲೂ ಏನೋ ಒಂದು ಥರ ನೆಗೆಟಿವಿಟಿ ಯೋಚನೆ ಬರ್ತಿದೆ ಎಂದು ಹೇಳ್ತಿದ್ದರು ಎಂದು ಕೂಡ ಹೇಳಿದ್ದಾರೆ. ಯಾವ ಸಮಸ್ಯೆ ಕೂಡ ಇರಲಿಲ್ಲ ಸರಿಯಾಗಿಯೇ ಇದ್ದರು'' ಎಂದು ಕೂಡ ಹೇಳಿದ್ದರು. ''ಆಗಾಗ ಸ್ವಲ್ಪ ಕುಡಿತ ಇದ್ರು ಅಷ್ಟೇ ಅದು ಬಿಟ್ಟರೆ ಏನೂ ಇರಲಿಲ್ಲ ಎಂದು ಹೇಳಿದ್ದರು'' ಕಮಲಾಕ್ಷಿ.
Disclaimer - ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290


Click it and Unblock the Notifications











