»   » ಸ್ಯಾಂಡಲ್‌ವುಡ್‌ ಕುಳಗಳೇ ಇತ್ತ ಗಮನ ಹರಿಸಿ...

ಸ್ಯಾಂಡಲ್‌ವುಡ್‌ ಕುಳಗಳೇ ಇತ್ತ ಗಮನ ಹರಿಸಿ...

Posted By: Staff
Subscribe to Filmibeat Kannada

ನಾನು ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಯಲ್ಲ . ಆದರೆ ಕನ್ನಡ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿಯುಳ್ಳವನು ಅನ್ನುವುದನ್ನು ಮೊದಲಿಗೇ ಸ್ಪಷ್ಟಪಡಿಸುತ್ತೇನೆ. ಪ್ರಸ್ತುತ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿ ಕುರಿತಾದಂತೆ ನಾನು ಚರ್ಚಿಸ ಹೊರಟಿರುವ ಮೂರು ಮತ್ತೊಂದು ವಿಷಯಗಳಿಗೆ ಇದೇ ಪ್ರೀತಿ ಕಾರಣ. ಈ ಲೇಖನ ಬರೆಯಲಿಕ್ಕೆ ನನಗಿರುವ ಅನುಭವವೆಂದರೆ- ಸಿನಿಮಾಗಳನ್ನು ನೋಡುವುದು ಹಾಗೂ ಸಿನಿಮಾ ಸುದ್ದಿಗಳನ್ನು ಓದುವುದು.


ಈಗ ಚಿತ್ರೋದ್ಯಮದ ಪ್ರಗತಿಗೆ ಪೂರಕವಾಗಬಹುದೆಂದು ನಾನು ನಂಬಿರುವ ಮೂರು ಮತ್ತೊಂದು ವಿಷಯಗಳತ್ತ ಗಮನ ಹರಿಸೋಣ

 1. ನಾವು ಯಾರಿಗೇನು ಕಡಿಮೆ ಇಲ್ಲ ಎನ್ನುವ ಅಭಿಮಾನ

ಕನ್ನಡಿಗರ ಅಭಿಮಾನ ಶೂನ್ಯತೆ ವಿಶ್ವ ಪ್ರಸಿದ್ಧವಾದುದು. ಸಿನಿಮಾರಂಗವನ್ನೂ ಈ ಶೂನ್ಯತೆ ಆವರಿಸಿರುವುದು ನೋವಿನ ಸಂಗತಿ. ಮೊದಲಿಗೆ ನಮ್ಮ ಬಗ್ಗೆ ನಮಗೆ ಅಭಿಮಾನ, ಆತ್ಮ ವಿಶ್ವಾಸ ಮೂಡಿದಾಗಷ್ಟೆ ಏನನ್ನಾದರೂ ಸಾಧಿಸಲು ಸಾಧ್ಯ. ಅದನ್ನು ನೀವು ಅಹಂ ಅನ್ನ್ತುತೀರಾದರೆ ಅಡ್ಡಿಯಿಲ್ಲ . ಇದನ್ನು ಎರಡು ರೀತಿ ವಿವರಿಸಬಹುದು.

 • ಉತ್ತಮ ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡುವುದನ್ನು ವಿರೋಧಿಸಬೇಕು. ಈ ನಿಟ್ಟಿನಲ್ಲಿ ನಿರ್ಮಾಪಕರು, ತಂತ್ರಜ್ಞರು ಹಾಗೂ ಕಲಾವಿದರು ಒಗ್ಗಟ್ಟಾಗಬೇಕು.
 • ವಿಶಾಲ ಮಾರುಕಟ್ಟೆ ಎನ್ನುವ ಹುಸಿ ಕಲ್ಪನೆಯಲ್ಲಿ ಅನವಶ್ಯಕವಾಗಿ ತಮಿಳು, ತೆಲುಗು ಚಿತ್ರಗಳನ್ನು ಕನ್ನಡಿಗರ ಮೇಲೆ ಹೇರುವುದನ್ನು ನಿಲ್ಲಿಸಬೇಕು. ಬಾಲಕೃಷ್ಣ, ಪಾಂಡ್ಯನ್‌, ರಾಮರಾಜನ್‌ ಮುಂತಾದ ಭಯಂಕರ ನಟರ ಚಿತ್ರಗಳಿಗೆ 20-25 ಚಿತ್ರಮಂದಿರಗಳನ್ನು ನೀಡುವ ಅವಶ್ಯಕತೆ ಏನಿದೆ ಅನ್ನುವುದರ ಕುರಿತು ಹಂಚಿಕೆದಾರರೇ ಉತ್ತರಿಸಬೇಕು.

2. ಪತ್ರಕರ್ತರು ಕನ್ನಡಿಗರ ಪ್ರತಿನಿಧಿಗಳಂತೆ ವರ್ತಿಸುವುದನ್ನು ಬಿಡಲಿ!

ಕನ್ನಡ ಚಿತ್ರಗಳನ್ನು ಪತ್ರಕರ್ತಕರೇ ಕೊಲ್ಲುತ್ತಿದ್ದಾರೆ ಅನ್ನುವ ಆಪಾದನೆ ಅಷ್ಟು ಸುಳ್ಳೇನೂ ಅಲ್ಲ . ತಮ್ಮ ಅಭಿಪ್ರಾಯಗಳನ್ನು ಜನರ ಅಭಿಪ್ರಾಯ ಎಂಬಂತೆ ಬಿಂಬಿಸಿ, ಕೆಟ್ಟ ವಿಮರ್ಶೆ ಬರೆದು ಒಳ್ಳೆಯ ಚಿತ್ರಗಳನ್ನು ಕೊಂದಿರುವ ಪತ್ರಕರ್ತರ ಧೋರಣೆಗೆ ಧಿಕ್ಕಾರ. ಪತ್ರಕರ್ತರ ಧೋರಣೆಗಳನ್ನು ವಿವರಿಸುವುದಾದರೆ..

 • ಈ ಮಂದಿ ಕನ್ನಡೇತರ ಭಾಷೆಗಳಲ್ಲಿ ಬರುವ ಚಿತ್ರಗಳೆಲ್ಲ ಚೆನ್ನ ಎಂದುಕೊಂಡಂತಿದೆ. ಅವರ ವಿಮರ್ಶೆ ಕೂಡ ಅದೇ ಧಾಟಿಯಲ್ಲಿರುತ್ತದೆ. ತಮಿಳು, ಮಲೆಯಾಳಿ ಸಿನಿಮಾಗಳಿಗೆ ಒಳ್ಳೆಯ ವಿಮರ್ಶೆ ಬರೆಯುವ ಪತ್ರಕರ್ತರ ಲೇಖನಿ ಕನ್ನಡದ ಬಗ್ಗೆ ಬರೆಯುವಾಗ ಮಾತ್ರ ಕುಂಟುತ್ತದೆ.
 • ಇತರ ಭಾಷೆಗಳಲ್ಲೂ ಕೆಟ್ಟ ಸಿನಿಮಾಗಳು ಬರುತ್ತವೆ. ಇತರ ಭಾಷೆಗಳಲ್ಲೂ ವರ್ಷಕ್ಕೆ 10-15 ಸಿನಿಮಾಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸಿನಿಮಾಗಳೂ ಜೊಳ್ಳೇ ಅನ್ನುವುದನ್ನು ಪತ್ರಕರ್ತರು ಅರಿತುಕೊಳ್ಳಬೇಕು. ವಿಮರ್ಶೆ ಸಿನಿಮಾಕ್ಕೆ ಪೂರಕವಾಗಿರಬೇಕು ಅನ್ನುವುದನ್ನು ಪತ್ರಕರ್ತರು ಅರಿತುಕೊಳ್ಳುವುದು ಚಿತ್ರೋದ್ಯಮದ ಪ್ರಗತಿಗೆ ಒಳಿತಲ್ಲವೇ?
 • ನಮ್ಮಲ್ಲಿನ ನಟ, ನಟಿಯರು ಇತರ ಭಾಷೆಗಳಲ್ಲಿ ಮೆರೆಯುತ್ತಿರುವಾಗ ಪರಭಾಷಾ ನಟ, ನಟಿಯರು ಕನ್ನಡದಲ್ಲಿ ನಟಿಸಬಾರದೆಂದು ಕಡಿವಾಣ ಹಾಕಲು ಹೊರಡುವ ಪತ್ರಕರ್ತರ ಧೋರಣೆಯೂ ಅರ್ಥಹೀನವೇ.
 • ಇಂಗ್ಲೀಷ್‌ ಚಿತ್ರಗಳಿಂದ ಕದಿಯುವ ಮಣಿರತ್ನಂ ಅಂಥವರನ್ನು ಅಟ್ಟಕ್ಕೇರಿಸುವ ಪತ್ರಕರ್ತರಿಗೆ ನಮ್ಮ ಹಿತ್ತಲಿನ ಪ್ರತಿಭೆಗಳಾದ ಉಪೇಂದ್ರ, ದೇಸಾಯಿ, ನಾಗತಿಹಳ್ಳಿ ಏಕೆ ಕಾಣುತ್ತಿಲ್ಲ ? ಸ್ವಾಮಿ ಪತ್ರಕರ್ತರೇ.. ಹಿತ್ತಲು ನೆನಪಿರಲಿ! ಪೆನ್ನಿದೆ ಎಂದು ಮನಸ್ಸಿಗೆ ಬಂದಂತೆ ಬರೆಯುವುದು ಪತ್ರಿಕೋದ್ಯಮದ ನಿಯಮವಲ್ಲ .

3. ಡಬ್ಬಿಂಗ್‌ ಬೇಕೇ ಬೇಕು. ಏಕೆಂದರೆ-

 • ಆಂಧ್ರ, ತಮಿಳುನಾಡುಗಳಲ್ಲಿ ಬಿಡುಗಡೆಯಾದ ಎಲ್ಲ ಚಿತ್ರಗಳಿಗೆ ಕನ್ನಡ ಚಿತ್ರೋದ್ಯಮ ತಿಪ್ಪೇಗುಂಡಿಯಾಗುವುದು ತಪ್ಪುತ್ತದೆ.
 • ಇತರ ಭಾಷೆಯ ನಿರ್ಮಾಪಕರು ಉತ್ತಮ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡಲು ಯೋಚಿಸುತ್ತಾರೆ.
 • ಕೆಟ್ಟ ಚಿತ್ರಗಳನ್ನು ರಿಮೇಕ್‌ ಮಾಡುವುದು ತಪ್ಪುತ್ತದೆ. ರಿಮೇಕ್‌ ಅಂದಾಕ್ಷಣ ಒಂದು ಮಾತು ನೆನಪಿಗೆ ಬಂತು : ಸ್ವಾಮಿ ನಿರ್ಮಾಪಕ, ನಿರ್ದೇಶಕರೇ ನಿಮಗೆ ರಿಮೇಕ್‌ ಮಾಡಲೇ ಬೇಕು ಅಂತಿದ್ದರೆ ಇಂಗ್ಲೀಷ್‌ ಸಿನಿಮಾಗಳನ್ನು ಯಾಕೆ ರಿಮೇಕ್‌ ಮಾಡಬಾರದು. ಹಿಂದಿ, ತಮಿಳು, ತೆಲುಗು ನಿರ್ಮಾಪಕರು ಕದಿಯುವುದು ಅಲ್ಲಿಂದಲೇ.
 • ಇತರ ಭಾಷೆ ಸಿನಿಮಾಗಳನ್ನು ಡಬ್‌ ಮಾಡುವ ಪ್ರವೃತ್ತಿ ಪ್ರಾರಂಭವಾದರೆ, ಕನ್ನಡ ತಂತ್ರಜ್ಞರಿಗೆ ಒಂದಷ್ಟು ಉದ್ಯೋಗಾವಕಾಶಗಳು ದೊರೆಯತ್ತವೆ.
 • ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಕೇವಲ ಅವರವರ ಭಾಷೆಯ ಚಿತ್ರಗಳನ್ನು ಮಾತ್ರ ನೋಡಿಕೊಂಡು ಕನ್ನಡ ಕಲಿಯದಿರುವ ಖದೀಮರು, ಕನ್ನಡಕ್ಕೆ ಡಬ್‌ ಆದ ಅವರ ಮೂಲ ಭಾಷೆಯ ಚಿತ್ರಗಳನ್ನು ನೋಡಿಯಾದರೂ ಕನ್ನಡ ಕಲಿಯುತ್ತಾರೆ.

4. ಕನ್ನಡಿಗರು ಅಷ್ಟು ಬಡವರಲ್ಲ ಸ್ವಾಮಿ..

ಕನ್ನಡ ಪ್ರೇಕ್ಷಕರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವುದನ್ನು ಚಿತ್ರೋದ್ಯಮ ಇನ್ನಾದರೂ ಬಿಡಬೇಕು. ನಮಗೆ ಶೇ.50 ರ ತೆರಿಗೆ ವಿನಾಯಿತಿ ಬೇಡ ಸ್ವಾಮಿ, ಇನ್ನು 5 ರುಪಾಯಿ ಹೆಚ್ಚಿಗೆ ಬೇಕಾದರೂ ಕೊಡುತ್ತೇವೆ. ಮೊದಲಿಗೆ ಊರ್ವಶಿ, ಲಿಡೋ, ಪಲ್ಲವಿ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿ. ತಮಿಳು, ತೆಲುಗು ನಾಯಕರ ಚಿತ್ರಗಳನ್ನು ಧಾರಾಳವಾಗಿ ಪ್ರದರ್ಶಿಸುವ ಈ ಚಿತ್ರಮಂದಿರಗಳಲ್ಲಿ ಆಗೊಮ್ಮೆ ಈಗೊಮ್ಮೆ ರವಿಚಂದ್ರನ್‌, ರಾಮು ಮುಂತಾದವರ ಚಿತ್ರಗಳು ತೆರೆ ಕಾಣುವುದನ್ನು ಬಿಟ್ಟರೆ ಉಳಿದಂತೆ ಕನ್ನಡವೇ ಇಲ್ಲಿ ನಾಪತ್ತೆ.

ಓ ನಿರ್ಮಾಪಕರೇ,
ಕನ್ನಡ ಪ್ರೇಕ್ಷಕರು ಮೂರನೇ ದರ್ಜೆಯ ಪ್ರೇಕ್ಷಕರಲ್ಲ ಅನ್ನುವುದನ್ನು ಅರ್ಥ ಮಾಡಿಕೊಳ್ಳಿ. ಒಬ್ಬ ತಮಿಳಿಗ ಎಂಜಿಆರ್‌ ಸಿನಿಮಾವನ್ನು ಪಲ್ಲವಿ ಥಿಯೇಟರ್‌ನಲ್ಲಿ ನೋಡಬಹುದಾದರೆ, ಅಮೇರಿಕ ಅಮೆರಿಕ, ಉಪೇಂದ್ರ, ಅಮೃತ ವರ್ಷಿಣಿ, ಬೆಳದಿಂಗಳ ಬಾಲೆ, ನಿಷ್ಕರ್ಷ ಮುಂತಾದ ಉತ್ತಮ ಚಿತ್ರಗಳನ್ನು ಈ ಚಿತ್ರಮಂದಿರದಲ್ಲಿ ನೋಡುವ ಅದೃಷ್ಟ ನಮಗಿಲ್ಲವೇಕೆ? ರಾಜ್‌ ಬ್ಯಾನರ್‌ ಕೂಡ ಈ ವಿಷಯದಲ್ಲಿ ಮೌನವಾಗಿರುವ ಔಚಿತ್ಯ ಅರ್ಥವಾಗುತ್ತಿಲ್ಲ . ಕನ್ನಡ ಚಿತ್ರೋದ್ಯಮದ ಮಂದಿ ನನ್ನ ಈ ಸಲಹೆಗಳನ್ನು ಗಮನಿಸುತ್ತಾರಾ?

English summary
Ten commandments to guide Kannada film industry prosper

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada