'ಹುಲಿರಾಯ' ನಟ ಬಾಲು ನಾಗೇಂದ್ರ ವಿರುದ್ಧ ಪತ್ನಿ ದೂರು
ಸಿನಿಮಾ ಜಗತ್ತಿನಲ್ಲಿ ದಾಂಪತ್ಯ ಕಲಹ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗಾಗಲೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಎನಿಸಿಕೊಂಡಿರುವ ಕೆಲವರ ಮೇಲೆ ಪತ್ನಿ ಮೇಲೆ ಹಲ್ಲೆ ಮಾಡಿದ ಆರೋಪಗಳಿವೆ. ಇದೀಗ, ಈ ಪಟ್ಟಿಗೆ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ.
'ಹುಲಿರಾಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಬಾಲು ನಾಗೇಂದ್ರ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಾಲು ನಾಗೇಂದ್ರ ಅವರ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ ಪ್ರತಿ ತಿಂಗಳು ತವರು ಮನೆಗೆ ಒಂದಿಷ್ಟು ಹಣ ಕಳುಹಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ನಟ, ಪತ್ನಿ ಮೇಲೆ ಹಲ್ಲೆ ಮಾಡಿದ್ದಾರಂತೆ. ಬಲವಂತವಾಗಿ ಕೆಲಸಕ್ಕೆ ಹೋಗು ಎಂದು ಒತ್ತಡ ಹಾಕುತ್ತಿದ್ದ ನಟ ಕೆಲಸಕ್ಕೆ ಕರೆದುಕೊಂಡು ಹೋಗುವಾಗಲೂ ಥಳಿಸುತ್ತಿದ್ದ ಎಂದು ಪತ್ನಿ ದೂರಿದ್ದಾಳೆ.

ಕೆಲಸಕ್ಕೆ ಹೋಗುವುದಿಲ್ಲ, ನಾನು ಓದುತ್ತೇನೆ ಎಂದಾಗಲೂ, ಇಲ್ಲ ಕೆಲಸಕ್ಕೆ ಹೋಗಲೇಬೇಕು ಎಂದು ಒತ್ತಡ ಹಾಕಿ ಕಳುಹಿಸುತ್ತಿದ್ದ. ಈಗ ನನ್ನ ಮತ್ತು ಮಗು ಮೇಲೆ ಹಲ್ಲೆ ಮಾಡಿ ತವರು ಮನಗೆ ಕಳುಹಿಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಾಲು ನಾಗೇಂದ್ರ ಅವರ ಪತ್ನಿ ನೀಡಿದ ದೂರಿನ ಅನ್ವಯ ಬಸವನಗುಡಿ ಮಹಿಳಾ ಪೊಲೀಸರು ಸೆಕ್ಷನ್ 498ಎ ಪ್ರಕಾರ ಕೇಸ್ ದಾಖಲಿಸಿಕೊಂಡಿದ್ದಾರೆ. ಹುಲಿರಾಯ ಚಿತ್ರದ ಜೊತೆಗೆ ಕಪಟನಾಟಕ ಪಾತ್ರಧಾರಿ, ಕಡ್ಡಿಪುಡಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲು ನಾಗೇಂದ್ರ ನಟಿಸಿದ್ದಾರೆ.


Click it and Unblock the Notifications











