ಕಿಚ್ಚ ವರ್ಸ್: ಸುದೀಪ್ ಪ್ರಪಂಚದಲ್ಲಿ ನೀವೂ ಏನೆಲ್ಲಾ ಮಾಡಬಹುದು?
ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟ ಸುದೀಪ್ ಬ್ಯುಸಿಯಾಗಿದ್ದಾರೆ. ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ, ಪ್ರಚಾರ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ 'ವಿಕ್ರಾಂತ್ ರೋಣ' ಟೀಂ ದೆಹಲಿಯಲ್ಲಿ ಕಾಣಿಸಿಕೊಂಡಿತ್ತು. ಪ್ರಚಾರದ ಭಾಗವಾಗಿ ಮತ್ತೊಂದು ಯೋಜನೆಯನ್ನು ಕಿಚ್ಚ ಕೈಗೊಂಡಿದ್ದಾರೆ.
ಡಿಜಿಟಲ್ ಲೋಕದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ನಟ ಸುದೀಪ್. ಇನ್ನು ಮುಂದೆ ಅಭಿಮಾನಿಗನ್ನು ಭೇಟಿಯಾಗಲು, ಯಾವುದೋ ಒಂದು ದಿನಕ್ಕಾಗಿ ಕಾಯಬೇಕಾಗಿಲ್ಲ. ಅಭಿಮಾನಿಗಳಿಗೆ ಸುದೀಪ್ ಅವರನ್ನು ನೋಡಬೇಕು, ಅವರೊಂದಿಗೆ ಕಾಲ ಕಳೆಯಬೇಕು ಎನಿಸಿದರೆ ಅದು ಸಾಧ್ಯ.
ಹಾಗಂತ ಹೆಚ್ಚು ಆಯಾಸ ಮಾಡಿಕೊಂಡು, ಕಿಚ್ಚನನ್ನು ಹುಡುಕುತ್ತಾ ಊರಿಂದ ಊರಿಗೆ ಬರಬೇಕಿಲ್ಲ. ಕೂತ ಜಾಗದಿಂದಲೇ ಸುದೀಪ್ ಅವರನ್ನು ಭೇಟಿ ಆಗಿ ಅವರೊಂದಿಗೆ ಕಾಲ ಕಳೆಯ ಬಹುದು. ಹೇಗೆ ಎನ್ನುವುದನ್ನು ಮುಂದೆ ಓದಿ..

'ಕಿಚ್ಚ ವರ್ಸ್' ಎಂದರೇನು?
'ಕಿಚ್ಚ ವರ್ಸ್' ರಿಲೀಸ್ ಮಾಡುತ್ತಿರುವುದಾಗಿ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡ ಹೇಳಿಕೊಂಡಿದೆ. 'ಕಿಚ್ಚ ವರ್ಸ್' ಅನ್ನೋದು ಕೃತವಾಗಿ ಸೃಷ್ಟಿಯಾದ ಪ್ರಪಂಚ. ಈ ಪ್ರಪಂಚದಲ್ಲಿ ಕಿಚ್ಚ ಸುದೀಪ್‌ಗೆ ಸಂಬಂಧ ಪಟ್ಟ ವಿಚಾರಗಳು ಇರುತ್ತವೆ. ಕಿಚ್ಚನನ್ನು ಇಷ್ಟ ಪಡುವವರಿಗಾಗಿ ಈ ಲೋಕದ ಸೃಷ್ಟಿ ಮಾಡಲಾಗಿದೆ. ಕಿಚ್ಚ ವರ್ಸ್ ಲೋಕಕ್ಕೆ ಡಿವೈಸ್ ಮೂಲಕ ತಲುಪಬಹುದು. ನೀವು ಈ ಡಿವೈಸ್ ಅನ್ನು ಕಣ್ಣಿಗೆ ಹಾಕಿಕೊಂಡರೆ, ನೀವು ಕೂತಲ್ಲಿಂದಲೇ ಕಿಚ್ಚನ ಪ್ರಪಂಚದೊಳಗೆ ಪ್ರವೇಶ ಮಾಡಬಹುದು.

'ಕಿಚ್ಚ ವರ್ಸ್'ನಲ್ಲಿ ಏನೆಲ್ಲಾ ಮಾಡಬಹುದು?
ಇನ್ನು 'ಕಿಚ್ಚ ವರ್ಸ್' ಮೂಲಕ ಕಿಚ್ಚನ ಪ್ರಪಂಚಕ್ಕೆ ಎಂಟ್ರಿ ಕೊಟ್ಟರೆ ಅಲ್ಲಿ ನೀವೂ ಏನೆಲ್ಲಾ ಮಾಡಬಹುದು ಎನ್ನುವುದನ್ನು ಸುದ್ದಿಗೋಷ್ಟಿಯಲ್ಲಿ ಭಾಗಿ ಆಗಿದ್ದ ತಂತ್ರಜ್ಞರು ತಿಳಿಸಿದ್ದಾರೆ. " ಕಿಚ್ಚನ ಲೋಕದಲ್ಲಿ ನಮಗೆ ಇಷ್ಟ ಬಂದದ್ದನ್ನು ನೀವು ಮಾಡಬಹುದು. ಸುದೀಪ್ ಜೊತೆಗೆ ಶಾಪಿಂಗ್ ಮಾಡ ಬಹುದು. ಕಾಫಿ ಕುಡಿಯ ಬಹುದು. ಅವರೊಂದಿಗೆ ಮಾತನಾಡಬಹುದು, ಸುತ್ತಾಡ ಬಹುದು." ಎಂದು ಹೇಳಿದ್ದಾರೆ.

'ಕಿಚ್ಚ ವರ್ಸ್' ಬಗ್ಗೆ ಸುದೀಪ್ ಮಾತು!
ಕಿಚ್ಚ ವರ್ಸ್ ಬಗ್ಗೆ ಮಾತನಾಡಿದ ಸುದೀಪ್, ಮೊದಲು ಇದು ಅವರಿಗೂ ಅರ್ಥ ಆಗಿರಲಿಲ್ಲವಂತೆ. " ನಾನೆ ಇಲ್ಲಿದ್ದೀನಿ. ಇನ್ನು ಕೃತಕವಾಗಿ ಇರುವುದರಲ್ಲಿ ಏನು ಅರ್ಥವಿದೆ ಎನಿಸಿತು. ಆದರೆ ಒಮ್ಮೆ ಆ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಬಳಿಕ, ಚೆನ್ನಾಗಿದೆ ಎನಿಸಿತು. ನಾವು ಕೂತಲ್ಲಿಯೇ ಮತ್ತೊಬ್ಬರ ಜೊತೆಗೆ ಸುತ್ತಾಡ ಬಹುದು. ಇಬ್ಬರು ಸೇರಿ ಇನ್ಯಾವುದೋ ಪ್ರಪಂಚಕ್ಕೆ ಎಂಟ್ರಿ ಕೊಡಬಹುದು. ಎಂದರೆ ಇದು ಈಗ ಎಕ್ಸ್‌ಪ್ಲೋರ್ ಮಾಡಬೇಕಾದ ವಿಚಾರವೇ." ಎಂದಿದ್ದಾರೆ.

'ಕೆಜಿಎಫ್ ವರ್ಸ್' ಅಷ್ಟೇ ಸದ್ದು ಮಾಡಲಿಲ್ಲ!
ಇನ್ನು ಇದಕ್ಕೂ ಮುನ್ನ 'ಕೆಜಿಎಫ್ ವರ್ಸ್' ಪರಿಚಯಿಸಲಾಗಿತ್ತು. 'ಕೆಜಿಎಫ್ ವರ್ಸ್' ಲಾಂಚ್ ಆಗಿತ್ತು. ಮೆಟಾ ವರ್ಸ್ ಕೂಡ ಬಂದಿತ್ತು. ಆದರೆ ಅದೇನು ಅಷ್ಟರ ಮಟ್ಟಿಗೆ ದೊಡ್ಡದಾಗಿ ಸುದ್ದಿ ಆಗಿರಲಿಲ್ಲ. ಲಾಂಚ್ ಬಳಿಕ ಹೆಚ್ಚು ಮಂದಿ ರಾಕಿ ಲೋಕಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಈಗ ಕಿಚ್ಚ ವರ್ಸ್ ಯಾವ ರೀತಿ ಮೋಡಿ ಮಾಡಲಿದೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











