ಅಗಲಿದ ಅಂಬರೀಷ್ ಅವರಿಗೆ ಕಕ್ಯಪದವು ಕಂಬಳದಲ್ಲಿ ಶ್ರದ್ಧಾಂಜಲಿ
ಇಡೀ ಕರ್ನಾಟಕಕ್ಕೆ ಇಂದು ಕತ್ತಲು ಆವರಿಸಿದೆ. ಸ್ಯಾಂಡಲ್ ವುಡ್ ನ ಹಿರಿಯ ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿದ್ದು, ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಕರಾವಳಿಯಲ್ಲಿ ಕೂಡ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಕರಾವಳಿಯಲ್ಲಿ ಆರಂಭವಾದ ಮೊದಲ ಕಂಬಳದಲ್ಲಿ ಅಗಲಿದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತುಳುನಾಡಿನಲ್ಲಿ ಕಂಬಳದ ಋತು ಆರಂಭವಾಗಿದೆ. ಈ ವರ್ಷದ ಮೊದಲ ಕಂಬಳ ಬಂಟ್ವಾಳದ ಕಕ್ಯಪದವಿನ ಸತ್ಯ ಧರ್ಮ ಜೋಡುಕರೆ ಕಂಬಳಕ್ಕೆ ಚಾಲನೆ ದೊರೆತಿದೆ. ಈ ಸಂದರ್ಭದಲ್ಲಿ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಿಸಿ ಶ್ರದ್ಧಾಂಜಲಿ ಕೋರಲಾಯಿತು.
ಮೈರ ಬರ್ಕೆಜಾಲು ಎಂಬಲ್ಲಿ ನಡೆಯುವ 6 ನೇ ವರ್ಷದ ಸತ್ಯ-ಧರ್ಮ ಜೋಡುಕೆರೆ ಕಂಬಳಕ್ಕೆ ಕಂಬಳದ ಗೌರವಾಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಇವರ ನೇತೃತ್ವದಲ್ಲಿ ಕಂಬಳ ಚಾಲನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸಹಕಾರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆದ ಕಂಬಳವನ್ನು ಸುಂದರ ಪೂಜಾರಿ ಕೊರೆಂಜಿಕೊಡಿ ಉದ್ಘಾಟಿಸಿದರು.

ಕಕ್ಯಪದವಿನ ಸತ್ಯ ಧರ್ಮ ಕಂಬಳವನ್ನು ಬೆತ್ತ ಹಿಡಿಯದೆ ವಿಶಿಷ್ಟವಾಗಿ ನಡೆಸಲಾಯಿತು. ಕಂಬಳ ಸಂಘಟಕರ ಈ ನಿರ್ಧಾರ ಅತ್ಯಂತ ವಿಶೇಷವಾಗಿದ್ದು ಇದು ಕಂಬಳ ಇತಿಹಾಸದಲ್ಲೇ ಪ್ರಪ್ರಥಮ ಪ್ರಯೋಗವಾಗಿದೆ. ಪ್ರಥಮ ಪ್ರಯೋಗದಲ್ಲೇ ಸಂಘಟಕರು ಯಶಸ್ವಿಯಾಗಿದ್ದು ಕಂಬಳಾಭಿಮಾನಿಗಳ ಮನ್ನಣೆಗೆ ಪಾತ್ರವಾಯಿತು.


Click it and Unblock the Notifications











