ಚಿರು ಅಭಿಮಾನಿಗಳಿಗೆ ಶಾಕ್ ನೀಡಿದ ನಿರ್ದೇಶಕ ಪುರಿ
ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಚಿರಂಜೀವಿ ಅವರ 150ನೇ ಚಿತ್ರ 'ಆಟೋಜಾನಿ' ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಚಿತ್ರದ ನಿರ್ಮಾಪಕನಾಗಿ ರಾಮಚರಣ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಪುರಿ ಜಗನ್ನಾಥ್ ಅವರು ನಿರ್ದೇಶಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಅದರೆ, ಜಗನ್ನಾಥ್ ಈಗ ಯಾಕೋ ಆಕ್ಷನ್ ಕಟ್ ಹೇಳೋದು ಡೌಟ್ ಎನಿಸುತ್ತಿದೆ.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಅಭಿಮಾನಿಯೊಬ್ಬ 'ಆಟೋ ಜಾನಿ' ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಪುರಿ ಜಗನ್ನಾಥ್, ಚಿತ್ರದಿಂದ ಹೊರನಡೆದಿರುವುದಾಗಿ ಹೇಳಿದ್ದಾರೆ. ನಂತರ ಅಭಿಮಾನಿಗೆ ಟ್ವಿಟ್ಟರ್ ನಲ್ಲಿ ಖಾಸಗಿ ಸಂದೇಶ ಕಳಿಸಿ ಚಿರಂಜೀವಿ ಅವರ ಚಿತ್ರವನ್ನು ನಿರ್ದೇಶಿಸುತ್ತಿಲ್ಲ ಎಂದಿದ್ದಾರಂತೆ.

ಪುರಿ ಜಗನ್ನಾಥ್ ಅವರು ತಮ್ಮ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸಲಿ, ಚಿರಂಜೀವಿ ಚಿತ್ರವನ್ನು ಅವರೇ ನಿರ್ದೇಶಿಸಲಿ ಎಂದು ಚಿರು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಅದರೆ, ಪುರಿ ಅವರ ನಿರ್ಧಾರದಿಂದಾಗಿ ಚಿರಂಜೀವಿ ಅವರ ಚಿತ್ರ ಇನ್ನಷ್ಟು ವಿಳಂಬವಾಗಲಿದೆ.
ಪುರಿ ಅವರ ನಿರ್ಧಾರಕ್ಕೆ ಸರಿಯಾದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ನಡುವೆ ಹೊಚ್ಚ ಹೊಸ ಕಥೆಯೊಂದಿಗೆ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ವಿ.ವಿ. ವಿನಾಯಕ್ ನಿರ್ದೇಶನ ಹಾಗೂ ಚಿನ್ನಿಕೃಷ್ಣ ಅವರ ಕಥೆ ಇದಕ್ಕೆ ಸಿಗಲಿದೆ ಎಂಬ ಸುದ್ದಿಯೂ ಹಬ್ಬಿದೆ.
ಟೆಂಪರ್ ಚಿತ್ರದ ಯಶಸ್ಸಿನ ನಂತರ ಬ್ರೇಕ್ ತೆಗೆದುಕೊಳ್ಳದೆ ಜ್ಯೋತಿ ಲಕ್ಷ್ಮಿ ಮುಗಿಸಿರುವ ಪುರಿ ಜಗನ್ನಾಥ್ ಅವರು ತಮ್ಮ ಗುರು ರಾಮ್ ಗೋಪಾಲ್ ವರ್ಮಾರಂತೆ ಸರಣಿ ಚಿತ್ರಗಳನ್ನು ನೀಡಲು ಮುಂದಾಗಿದ್ದಾರೆ.
ನಿತಿನ್ ರೆಡ್ಡಿಗಾಗಿ ಒಂದು ಸಿನಿಮಾ ನಂತರ ಮೆಗಾ ಸ್ಟಾರ್ ಚಿರಂಜೀವಿ ಅವರ ವೃತ್ತಿ ಬದುಕಿನ 150ನೇ ಚಿತ್ರವನ್ನು ಜಗನ್ನಾಥ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯಿತ್ತು. ಅದರೆ, ಈಗ ಮೆಗಾಸ್ಟಾರ್ ಟೀಂನಿಂದ ಪುರಿ ಹೊರ ನಡೆದಿದ್ದಾರೆ.


Click it and Unblock the Notifications











