'ದೊಡ್ಮನೆ ಆಸ್ತಿ': ದರ್ಶನ್ ಕೇಳಿದ್ರು, ಉಮಾಪತಿ ಕೊಡಲ್ಲ ಅಂದಿದ್ರು
ಅರುಣಾ ಕುಮಾರಿ ಪ್ರಕರಣ ಬೆಳಕಿಗೆ ಬಂದ ನಂತರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ನಟ ದರ್ಶನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ 'ನಾನು ಮತ್ತು ದರ್ಶನ್ ಸರ್ ಚೆನ್ನಾಗಿದ್ದೇವೆ' ಎಂದು ಉಮಾಪತಿ ಹೇಳ್ತಾರೆ. 'ನಾನು ನನ್ನ ನಿರ್ಮಾಪಕರನ್ನು ಬಿಟ್ಟು ಕೊಡಲ್ಲ' ಎಂದು ದರ್ಶನ್ ಹೇಳ್ತಾರೆ. ಸ್ವಲ್ಪ ಆಳವಾಗಿ ಮಾಹಿತಿ ಕಲೆ ಹಾಕಿದಾಗ ದರ್ಶನ್ ಮತ್ತು ಉಮಾಪತಿ ನಡುವೆ ಆಸ್ತಿಯೊಂದಕ್ಕೆ ಸಂಬಂಧಪಟ್ಟಂತೆ ಮಾತುಕತೆ ಆಗಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಇದುವರೆಗೂ ಈ ವಿಷಯ ಎಲ್ಲಿಯೂ ಬಹಿರಂಗವಾಗಿ ಚರ್ಚೆಯಾಗಿಲ್ಲ. ಆದ್ರೆ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಉಮಾಪತಿ ಅವರೇ ಈ ಆಸ್ತಿ ವಿಷಯವನ್ನು ಉಲ್ಲೇಖಿಸಿ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದರು. ಈ ಆಸ್ತಿ ವಿಷಯ ಚರ್ಚೆಯಾಗಲು ಕಾರಣ ಅದು 'ದೊಡ್ಮನೆ ಆಸ್ತಿ'. ನಟ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಬಳಿ ಖರೀದಿ ಮಾಡಿದ ಆಸ್ತಿ. ಮುಂದೆ ಓದಿ...

ದೊಡ್ಮನೆ ಆಸ್ತಿ ಖರೀದಿ ಮಾಡಿದ ಉಮಾಪತಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಂದ ಪ್ರಾಪರ್ಟಿವೊಂದನ್ನು ನಿರ್ಮಾಪಕ ಉಮಾಪತಿ ಖರೀದಿ ಮಾಡಿದ್ದರು. ಈ ವಿಷಯವಾಗಿ ನಟ ದರ್ಶನ್ ಮತ್ತು ಉಮಾಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಇದರಿಂದಲೇ ಇಷ್ಟೆಲ್ಲಾ ಬೆಳವಣಿಗೆ ಆಗಿದೆ ಎಂಬ ಗೊಂದಲವೂ ಇದೆ. ಇದಕ್ಕೆ ಸ್ವತಃ ಉಮಾಪತಿ ಶ್ರೀನಿವಾಸ್ ಸ್ಪಷ್ಟನೆ ಕೊಟ್ಟಿದ್ದಾರೆ.

ದರ್ಶನ್ ಕೇಳಿದ್ರು, ನಾನು ಕೊಡಲ್ಲ ಅಂದೆ
''ದೊಡ್ಮನೆಯವರಿಂದ ಪ್ರಾಪರ್ಟಿಯೊಂದು ಖರೀದಿ ಮಾಡಿದ್ದೆ. ಅದನ್ನು ದರ್ಶನ್ ಸರ್ ಕೇಳಿದ್ರು, ನಿರ್ಮಾಪಕರೇ ಅದು ನನಗೆ ಕೊಡಿ, ತೆಗೆದುಕೊಳ್ಳುತ್ತೇನೆ ಅಂದ್ರು. ನನಗೆ ಯಾಕೋ ಕೊಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹಾಗಾಗಿ, ಆಗಲ್ಲ ಸರ್ ಅಂದೆ. ಆಮೇಲೆ ಅದನ್ನು ಅಲ್ಲಿಗೆ ಬಿಟ್ವಿ. ಮತ್ತೆ ಅವರು ಕೇಳಲಿಲ್ಲ, ಚರ್ಚೆನೂ ಆಗಿಲ್ಲ'' ಎಂದು ಉಮಾಪತಿ ತಿಳಿಸಿದರು.

ಆ ಪ್ರಾಪರ್ಟಿಗಾಗಿಯೇ ಈ ವಿವಾದ?
ಉಮಾಪತಿ ಅವರು ದೊಡ್ಮನೆಯಿಂದ ಖರೀದಿ ಮಾಡಿದ ಆಸ್ತಿ ಕೊಡಲು ನಿರಾಕರಿಸಿದರು. ಆ ಹಿನ್ನೆಲೆ ನಟ ದರ್ಶನ್ ಅವರು ಈ ರೀತಿ ವಿವಾದಗಳನ್ನು ಸೃಷ್ಟಿಸಿರಬಹುದು ಎನ್ನುವ ವಿಚಾರ ಚರ್ಚೆಯಲ್ಲಿದೆ. ಹಾಗಾಗಿ, ಈ ವಿಷಯದ ಬಗ್ಗೆ ಸ್ವತಃ ಉಮಾಪತಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಸ್ಪಷ್ಟನೆ ಕೊಡಿ ಅಂತ ದರ್ಶನ್ ಅವರೇ ಹೇಳಿದ್ರು ಎಂದು ಸಹ ಉಮಾಪತಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
Recommended Video

ಯಾವುದು ಆ ಪ್ರಾಪರ್ಟಿ?
ದೊಡ್ಮನೆಯವರಿಂದ ಖರೀದಿ ಮಾಡಿದ್ದಾರೆ ಎನ್ನುವ ಆ ಪ್ರಾಪರ್ಟಿ ಯಾವುದು ಎಂದು ಉಮಾಪತಿ ಅವರು ಹೇಳಿಲ್ಲ. ಒಬ್ಬ ನಟನಿಂದ ಖರೀದಿ ಮಾಡಿ, ಇನ್ನೊಬ್ಬ ನಟನಿಗೆ ಕೊಟ್ರೆ ಅದು ಚೆನ್ನಾಗಿರಲ್ಲ. ಅದಕ್ಕೆ ನನ್ನ ಮನಸಾಕ್ಷಿಯೂ ಒಪ್ಪಲಿಲ್ಲ. ಅದನ್ನು ಬಿಟ್ಟರೆ ಬೇರೆ ಯಾವ ಕಾರಣವೂ ಇಲ್ಲ ಎಂದು ಉಮಾಪತಿ ಮಾಹಿತಿ ನೀಡಿದ್ದಾರೆ.


Click it and Unblock the Notifications











