ಸುದೀಪ್ ಬಿಜೆಪಿ ಸೇರ್ಪಡೆ ಕುರಿತು ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದೇನು?
ಸಿನಿಮಾ ನಟರು ರಾಜಕೀಯ ಪ್ರವೇಶಿಸುವುದು ಹೊಸತೇನಲ್ಲ. ತಮ್ಮ ಸಿನಿಮಾ ಜರ್ನಿ ಮುಕ್ತಾಯದ ಹಂತಕ್ಕೆ ಬಂದಾಗ ಹಲವಾರು ನಟರು ಹಾಗೂ ನಟಿಯರು ರಾಜಕೀಯಕ್ಕೆ ಧುಮುಕಿದ ಹಲವಾರು ಉದಾಹರಣೆಗಳಿವೆ. ಈ ಸಾಲಿಗೆ ಇದೀಗ ಕಿಚ್ಚ ಸುದೀಪ್ ಹೊಸತಾಗಿ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಹೌದು, ನಿನ್ನೆಯಿಂದ ( ಏಪ್ರಿಲ್ 4 ) ಕಿಚ್ಚ ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ, ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದೆ.
ಇನ್ನು ಸುದೀಪ್ ಇಂದು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದು, ಈ ಬಾರಿ ತಮ್ಮ ಆಪ್ತ ಜಾಕ್ ಮಂಜು ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ ಈ ಬಾರಿ ಕೇವಲ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದು, ಮುಂದಿನ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು.

ಇನ್ನು ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳುವುದರಿಂದ ದೊಡ್ಡ ಸಂಖ್ಯೆಯ ಮತಗಳು ಬಿಜೆಪಿ ತೆಕ್ಕೆಗೆ ಬೀಳಲಿದ್ದು, ಉಳಿದ ಪಕ್ಷಗಳಿಗೆ ಹಿನ್ನಡೆ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ "ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿ ಸೇರಿಕೊಂಡರೆ ಸೇರಿಕೊಳ್ಳಲಿ ಬಿಡಿ. ನಮಗೇನು" ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಸಿದ್ದರಾಮಯ್ಯ ನವದೆಹಲಿಯಲ್ಲಿ ನೀಡಿದ್ದು, ಸುದೀಪ್ ಬಿಜೆಪಿಗೆ ಬಂದರೂ ತಮಗೆ ಭಯವಿಲ್ಲ ಎಂದಿದ್ದಾರೆ.
ಇನ್ನು ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ಮೇಲೆ ಸುದೀಪ್ ಜೆಪಿ ನಗರದ ತಮ್ಮ ನಿವಾಸದ ಎದುರು ಮಾಧ್ಯಮದವರ ಜತೆ ಮಾತನಾಡಿ ತಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ತನಗೆ ಚುನಾವಣೆ ಮೇಲೆ ಇಷ್ಟ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.


Click it and Unblock the Notifications











