ಡಾಲಿ ಧನಂಜಯ್ ಸಿನಿಮಾಗೆ 'ಬಡವ ರಾಸ್ಕಲ್' ಎಂಬ ವಿವಾದಿತ ಶೀರ್ಷಿಕೆ
Recommended Video
ನಾಡಿದ್ದು, ಅಂದರೆ ಶುಕ್ರವಾರ (ಆಗಸ್ಟ್ 23) ಕನ್ನಡ ಸಿನಿಮಾವೊಂದರ ಮುಹೂರ್ತ ಇದೆ. ಚಿತ್ರದ ಹೆಸರು 'ಬಡವ ರಾಸ್ಕಲ್'. ಹೀಗೊಂದು ಬಯ್ಗುಳವನ್ನು ರಾಜಕುಮಾರ್ ಅವರ ಚಿತ್ರದಲ್ಲಿ ಕೇಳಿದ್ದೀವಲ್ಲಾ ಅಂತ ನೀವಂದುಕೊಂಡರೆ, ಕ್ಷಮಿಸಿ, ನೀವು ಅರ್ಧ ಸರಿಯಾದ ದಾರಿಯಲ್ಲಿ ಇದ್ದೀರಿ. ಇನ್ನರ್ಧ ಇಲ್ಲ ಅಂತಲೇ ಅರ್ಥ.
ಈಗ ಮುಹೂರ್ತ ಕಾಣುತ್ತಿರುವ ಚಿತ್ರ 'ಬಡವ ರಾಸ್ಕಲ್'ನ ನಿರ್ದೇಶಕರು ಶಂಕರ್ ಗುರು. ಇನ್ನು ನಿರ್ಮಾಪಕರು ಗುಜ್ಜಲ್ ಪುರುಷೋತ್ತಮ್ ಹಾಗೂ ನಟ ಧನಂಜಯ್. ತಮ್ಮ ಸಿನಿಮಾಗೆ ಈ ಹೆಸರನ್ನು ಇಡುವ ಮುಂಚೆ ಬಳಕೆಯಲ್ಲಿ ಇರುವ ಪದ ಯಾವುದು? ಈ ರೀತಿಯಾಗಿ ಹೆಸರಿಟ್ಟರೆ ಅದು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಗಮನಿಸದಿದ್ದರೆ ಹೇಗೆ?
ಇನ್ನೂ ಮುಹೂರ್ತಕ್ಕೆ ಸಮಯ ಇದೆ. ಹೆಸರು ಬಡವ ಎಂದಾಗಬೇಕೆ ಅಥವಾ ಭಡವ ಅಂತಾಗಬೇಕೆ ಅನ್ನೋದನ್ನು ಒಮ್ಮೆ ವಿಚಾರಿಸಲಿ. ಕನಿಷ್ಠ ಪಕ್ಷ ರಾಜಕುಮಾರ್ ಅವರು ಹೇಳಿದ ಸಂಭಾಷಣೆಯನ್ನಾದರೂ ಒಮ್ಮೆ ಕಿವಿಗೊಟ್ಟು ಕೇಳಲಿ. ಏಕೆಂದರೆ, ಉಚ್ಚಾರಣೆಯಲ್ಲೇ ಅದು ಸ್ಪಷ್ಟವಾಗುತ್ತದೆ: 'ಬ' ನೋ ಅಥವ್ 'ಭ' ನೋ ಎಂಬ ಸಂಗತಿ.

ಬಡವ ಅಂದರೆ ಅದು ಖಂಡಿತಾ ಬಯ್ಗುಳ ಅಲ್ಲ. ಆರ್ಥಿಕವಾಗಿ ಸ್ಥಿತಿವಂತ ಅಲ್ಲ ಅಂತಷ್ಟೇ ಅರ್ಥ. ಅಂಥ ಪದವನ್ನು 'ಭಡವ' ಎಂಬ ಬಯ್ಗುಳದ ಬದಲಾಗಿ ಬಳಸುತ್ತಾರೆ ಅಂದರೆ ಇದೆಂಥ ಶಬ್ದ ದಾರಿದ್ರ್ಯ? ಇನ್ನು ಚಿತ್ರದ ಶೀರ್ಷಿಕೆಗೆ ಒಪ್ಪಿಗೆ ನೀಡಿದ ಪುಣ್ಯಾತ್ಮರಿಗೆ ಇನ್ನೇನು ಹೇಳಲು ಸಾಧ್ಯ?
ಇಲ್ಲ, ನಾವಿಟ್ಟಿರುವ ಸಿನಿಮಾ ಹೆಸರೇ ಸರಿಯಾಗಿದೆ ಎಂದು ವಾದಿಸುವುದಾದರೆ, ಅದು ಹೇಗೆ ಸರಿ ಎಂಬುದನ್ನು ನಿರ್ದೇಶಕರು ಸಮರ್ಥಿಸಿಕೊಳ್ಳಬೇಕು. ಇಲ್ಲದಿದ್ದರೆ ಇಂಥ ಅಸಂಬದ್ಧ ಶೀರ್ಷಿಕೆ ಕೊಟ್ಟ ತಪ್ಪಿಗೆ ಕ್ಷಮೆ ಕೇಳಬೇಕು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ ಇಲ್ಲಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಕೆ. ಜಗದೀಶ್ ಅವರನ್ನು ಈ ಬಗ್ಗೆ ಕೇಳಲು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಲಾಯಿತು.
"ಭಡವ ಎಂಬುದು ಮೂಲತಃ ಹಿಂದಿ ಮತ್ತು ಮರಾಠಿ ಪದ. ಇದೊಂದು ಬಯ್ಗುಳ. ವ್ಯಭಿಚಾರಕ್ಕಾಗಿ ಗಂಡು ಹೆಣ್ಣುಗಳನ್ನು ಹೊಂದಿಸುವವನು, ತಲೆಹಿಡುಕ, ಕುಂಟಣಿಗ ಹೀಗೆ ಅರ್ಥಗಳಿವೆ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಕೇಳಿರಬಹುದಾದ ಬಯ್ಗುಳ ಇದು. ಆ ಪದದ ಬದಲಿಗೆ 'ಬಡವ' ಎಂದು ಬಳಸಿದರೆ ಸಮಾಜದ ಒಂದು ವರ್ಗಕ್ಕೆ ಅವಮಾನ ಮಾಡಿದಂತೆ ಆಗುತ್ತದೆ" ಎಂದು ಅವರು ಹೇಳಿದರು.


Click it and Unblock the Notifications











