2014ರ ವಾದ ವಿವಾದ, ಜಗಳ ಒಳಜಗಳ ರೌಂಡಪ್

By Harshitha

2014 ರಲ್ಲಿ ಬರೀ ಸಿನಿಮಾಗಳು ಮಾತ್ರ ಸುದ್ದಿ ಮಾಡ್ಲಿಲ್ಲ. ಸಿನಿಮಾಗಳ ರಸವತ್ತಾದ ಸುದ್ದಿಗಳ ಜೊತೆ ದಿನಕ್ಕೊಂದರಂತೆ ವಿವಾದಗಳೂ ಸದ್ದು ಮಾಡಿದ್ವು. ಚಿತ್ರಗಳ ಮೂಲಕ ಪರದೆ ಮೇಲೆ ಮನರಂಜನೆ ಕೊಡ್ತಿದ್ದ ಗಾಂಧಿನಗರದ ಮಂದಿ, 2014 ರಲ್ಲಿ ಬೀದಿಗಿಳಿದು ಮಸ್ತ್ ಮಸ್ತ್ ಎಂಟರ್ ಟೇನ್ಮೆಂಟ್ ಕೊಟ್ಟರು.

ನಮ್ ಸಿನಿಮಾಗೆ ಥಿಯೇಟರ್ ಸಿಕ್ಕಿಲ್ಲ! ಆ ಚಿತ್ರದ ಟೈಟಲ್ ನಂದು, ಆ ಸಿನಿಮಾದ ಕಥೆ ನಾನು ಬರೆದದ್ದು, ನಮ್ ಸಿನಿಮಾ ಮೊದಲು ರಿಲೀಸ್ ಆಗ್ಬೇಕು, ಡಬ್ಬಿಂಗ್ ಬೇಕು, ಬೇಡ!...ಹೀಗೆ ಒಂದಲ್ಲಾ ಒಂದು ಏಟು-ಎದಿರೇಟು ಗಾಂಧಿನಗರದಲ್ಲಿ ಈ ವರ್ಷ ಸುಳಿದಾಡಿತ್ತು.

'ಇತರೆ' ವಿಷಯಗಳಿಗೆ ಸುದ್ದಿಯಾದ ಗಾಂಧಿನಗರದ ವಿವಾದಗಳ ಕಂಪ್ಲೀಟ್ ಕಹಾನಿ ಇಲ್ಲಿದೆ, ಸ್ಲೈಡ್ ಗಳನ್ನು ಕ್ಲಿಕ್ ಮಾಡಿ... [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಆರಂಭದಲ್ಲೇ 'ಅಯೋಧ್ಯೆಪುರಂ'ಗೆ ವಿಘ್ನ

ಆರಂಭದಲ್ಲೇ 'ಅಯೋಧ್ಯೆಪುರಂ'ಗೆ ವಿಘ್ನ

ಹಿಂದು-ಮುಸ್ಲಿಂ ಲವ್ ಸ್ಟೋರಿ ಮತ್ತು ಚಿತ್ರದ ಟೈಟಲ್ ನಿಂದ, ಹಿಂದು ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ 'ಕರ್ನಾಟಕ ಅಯೋಧ್ಯೆಪುರಂ' ಚಿತ್ರ ವರ್ಷಾರಂಭದಲ್ಲೇ ತೆರೆಗೆ ಬಂತು. ಆದ್ರೆ ಕೆಲವೇ ದಿನಗಳಲ್ಲಿ 10ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಪ್ರದರ್ಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯ್ತು. ಅದೆಲ್ಲವೂ ಬಗೆ ಹರಿಯುವ ಹೊತ್ತಿಗೆ, ಚಿತ್ರ ಎಲ್ಲಾಕಡೆ ಎತ್ತಂಗಡಿಯಾಗಿತ್ತು. [ಹೊಸ ವಿವಾದದಲ್ಲಿ ಕರ್ನಾಟಕ ಅಯೋಧ್ಯೆಪುರಂ ಚಿತ್ರ]

ನಿಂಬೆ'ಹುಳಿ' ಹಿಂಡಿದ ಹೇಮಂತ್ ಹೆಗಡೆ

ನಿಂಬೆ'ಹುಳಿ' ಹಿಂಡಿದ ಹೇಮಂತ್ ಹೆಗಡೆ

ಹೇಮಂತ್ ಹೆಗಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರದಲ್ಲಿರುವ ಒಂದು ಪಾತ್ರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಹೋಲುತ್ತದೆ ಅಂತ ಚೆನ್ನೈನಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಅದರೊಂದಿಗೆ ಚಿತ್ರದಲ್ಲಿದ್ದ 'ರಾಮ ರಾಮ' ಹಾಡು ಶ್ರೀರಾಮನ ಭಕ್ತರನ್ನ ಕೆಣಕಿತ್ತು. ಇಷ್ಟೆಲ್ಲಾ ವಿವಾದಗಳಿದ್ದರೂ, 'ನಿಂಬೆಹುಳಿ' ತೆರೆಮೇಲೆ ಮಿಂಚಿ ಮರೆಯಾಯ್ತು. [ಕನ್ನಡದ ನಿಂಬೆಹುಳಿಗೆ ಮದ್ರಾಸಿನಿಂದ ಅನುಮತಿ]

ಗಾಂಧಿನಗರವನ್ನೇ ಅಲುಗಾಡಿಸಿದ 'ಡಬ್ಬಿಂಗ್' ಭೂತ

ಗಾಂಧಿನಗರವನ್ನೇ ಅಲುಗಾಡಿಸಿದ 'ಡಬ್ಬಿಂಗ್' ಭೂತ

'ಡಬ್ಬಿಂಗ್' ಬೇಕು ಬೇಡ ಅನ್ನುವ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಎರಡು ಬಣಗಳೇ ಹುಟ್ಟಿಕೊಂಡ ವರ್ಷ 2014. ಡಬ್ಬಿಂಗ್ ಬೇಕು ಅಂತ ಕೆಲ ನಿರ್ಮಾಪಕರು ಪಟ್ಟು ಹಿಡಿದಿದ್ದರೆ, ಅಣ್ಣಾವ್ರ ಕುಟುಂಬ ಸೇರಿದಂತೆ ಇಡೀ ಕಲಾವಿದರ ಬಳಗ ಡಬ್ಬಿಂಗ್ ವಿರೋಧಿಸಿತ್ತು. ಅದಕ್ಕೆ ಬೃಹತ್ ರ್ಯಾಲಿಯನ್ನೂ ಹಮ್ಮಿಕೊಂಡಿತ್ತು. ಆದರೂ, ಡಬ್ಬಿಂಗ್ ಪರ ಧ್ವನಿಯೆತ್ತಿದವರಿಗೆ ಮೊದಲ ಜಯ ಇದೀಗ ಸಿಕ್ಕಿದೆ.

ಗಣಿ ಮೇಲೆ ಉಪ್ಪಿ 'ಬ್ರಹ್ಮಾಸ್ತ್ರ'

ಗಣಿ ಮೇಲೆ ಉಪ್ಪಿ 'ಬ್ರಹ್ಮಾಸ್ತ್ರ'

ಗಣೇಶ್ ಅಭಿನಯದ 'ಶ್ರಾವಣಿ ಸುಬ್ರಮಣ್ಯ' ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಹೀಗಿದ್ದರೂ, ಉಪ್ಪಿ ನಟನೆಯ 'ಬ್ರಹ್ಮ' ಚಿತ್ರಕ್ಕಾಗಿ 'ಶ್ರಾವಣಿ ಸುಬ್ರಮಣ್ಯ' ಚಿತ್ರವನ್ನ ಎತ್ತಂಗಡಿ ಮಾಡಲಾಗುತ್ತಿದೆ ಅಂತ ನಿರ್ಮಾಪಕ ಸುರೇಶ್ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದರು. ಸುರೇಶ್ ವಿರುದ್ಧ ಗರಂ ಆದ 'ಬ್ರಹ್ಮ' ಸೃಷ್ಟಿಕರ್ತ ಆರ್.ಚಂದ್ರು ಅದೇ ವಾಣಿಜ್ಯ ಮಂಡಳಿಯಲ್ಲಿ ಸುರೇಶ್ ವಿರುದ್ಧ ದೂರು ನೀಡಿದ್ದರು. ಪರಸ್ಪರ ಕಚ್ಚಾಟ-ಕೆಸರೆರಚಾಟದಲ್ಲಿ ಕೊನೆಗೆ 'ಬ್ರಹ್ಮ'ನಿಗೆ ಮುಕ್ತಿ ಸಿಕ್ತು. [ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಉಪೇಂದ್ರ 'ಬ್ರಹ್ಮಾಸ್ತ್ರ']

'ನೀರ್ ದೋಸೆ' ಕಿರಿಕಿರಿ

'ನೀರ್ ದೋಸೆ' ಕಿರಿಕಿರಿ

ಕಳೆದ ವರ್ಷ ಶುರುವಾದ ರಮ್ಯಾ 'ನೀರ್ ದೋಸೆ' ಕಿರಿಕಿರಿ ಈ ವರ್ಷ ಕಳೆದರೂ ಬಗೆಹರೆದಿಲ್ಲ. ನಿರ್ಮಾಪಕರಿಗಿನ್ನೂ ರಮ್ಯಾ ಮೇಡಂ ಕಾಲ್ ಶೀಟ್ ಸಿಕ್ಕಿಲ್ಲ. ರಾಗಿಣಿ 'ನೀರ್ ದೋಸೆ'ಗೆ ತುಪ್ಪ ಹಾಕೋಕೆ ರೆಡಿಯಿದ್ದರೂ, ಯಾವುದೂ ಕನ್ಫರ್ಮ್ ಆಗಿಲ್ಲ.

'ಹುಚ್ಚು ವೆಂಕಟ'ನ ಹುಚ್ಚಾಟ

'ಹುಚ್ಚು ವೆಂಕಟ'ನ ಹುಚ್ಚಾಟ

''ನಟಿ ರಮ್ಯಾ ನನ್ನ ಹೆಂಡತಿ'' ಅಂತ ಹೀರೋ ಕಮ್ ನಿರ್ದೇಶಕ ಹುಚ್ಚ ವೆಂಕಟ ಎಲ್ಲಾ ಮಾಧ್ಯಮಗಳಿಗೂ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಕಿರುತೆರೆ ಮೇಲೆ 'ಹುಚ್ಚು ವೆಂಕಟ'ನ ಹುಚ್ಚಾಟ 'ಕಾಮಿಡಿ ಶೋ' ಅಷ್ಟೇ ಜನಪ್ರಿಯವಾಗಿದ್ದು ಸುಳ್ಳಲ್ಲ. ['ರಮ್ಯಾ ನನ್ನ ಪತ್ನಿ' ಎಂದ ಹುಚ್ಚ ವೆಂಕಟ ಬಂಧನ]

ಪರ್ಯಾಯ 'ಒಕ್ಕೂಟ'ದ ತಲೆನೋವು

ಪರ್ಯಾಯ 'ಒಕ್ಕೂಟ'ದ ತಲೆನೋವು

ಈಗಾಗಲೇ ಚಾಲ್ತಿಯಲ್ಲಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟಕ್ಕೆ 'ಪರ್ಯಾಯ' ಒಕ್ಕೂಟ ನಿರ್ಮಾಣ ಮಾಡುವುದಕ್ಕೆ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಟೊಂಕ ಕಟ್ಟಿ ನಿಂತಿದ್ದರು. ಅವರಿಗೆ ನಿರ್ಮಾಪಕರ ಸಾಥ್ ಇದ್ದ ಕಾರಣ ವಾಣಿಜ್ಯ ಮಂಡಳಿಯಲ್ಲಿ ಈ ವರ್ಷ ನಡೆದ ನೂಕಾಟ, ತಳ್ಳಾಟ, ಕಿತ್ತಾಟದ ಪ್ರಸಂಗಗಳು ಒಂದೆರಡಲ್ಲ. ಒಂದು ದಿನದ ಮಟ್ಟಿಗೆ ಬೃಹತ್ ಪ್ರತಿಭಟನೆಯನ್ನ ಇಡೀ ಕಾರ್ಮಿಕರ ಒಕ್ಕೂಟ ಆಯೋಜಿಸಿದ್ದರೂ, ಸದ್ದಿಲ್ಲದೇ 'ಪರ್ಯಾಯ ಒಕ್ಕೂಟ' ಇಂದು ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. [ಫಿಲಂ ಚೇಂಬರ್ ನಲ್ಲಿ ನೂಕಾಟ, ತಳ್ಳಾಟ, ರಂಪಾಟ]

'ದುನಿಯಾ ವಿಜಿ' ಮೇಲೆ ನಿರ್ಮಾಪಕರು ಗರಂ

'ದುನಿಯಾ ವಿಜಿ' ಮೇಲೆ ನಿರ್ಮಾಪಕರು ಗರಂ

ಕಾರ್ಮಿಕರ ಒಕ್ಕೂಟದ ಪರ ದನಿಯೆತ್ತಿದ್ದ 'ದುನಿಯಾ ವಿಜಿ', ಆವೇಷದಲ್ಲಿ ಲೈಂಗಿಕ ಕಿರುಕುಳ ವಿಚಾರದ ಬಗ್ಗೆ ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕರು, ಬ್ಲಾಕ್ ಕೋಬ್ರಾನ ಬ್ಯಾನ್ ಮಾಡುವ ಮಟ್ಟಕ್ಕೆ ತೆರಳಿದ್ದರು. ನಂತ್ರ ಪರಸ್ಪರ ಕ್ಷಮೆ ಕೇಳಿ, ವಿವಾದಕ್ಕೆ ತೆರೆ ಎಳೆಯಲಾಯ್ತು. [ನಟ ದುನಿಯಾ ವಿಜಯ್ ಹೇಳಿದ್ದೇನು, ಆಗಿದ್ದೇನು?]

'ಟೈಟಲ್' ವಿವಾದಗಳು

'ಟೈಟಲ್' ವಿವಾದಗಳು

ಈ ವರ್ಷ, ಸ್ಯಾಂಡಲ್ ವುಡ್ ಅತಿ ಹೆಚ್ಚು ಸದ್ದು ಮಾಡಿದ್ದು 'ಟೈಟಲ್' ವಿವಾದಗಳಿಂದ. 'ಪಂಗನಾಮ' ಚಿತ್ರದ ಎರಡು ವೈಟು, ಒಂದು ರೆಡ್ಡು ಮ್ಯಾಟರ್ರು ಧಾರ್ಮಿಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನೂ 'ಬಸವಣ್ಣ' ಅನ್ನುವ ಟೈಟಲ್ ಬಿಟ್ಟು, ಬರೀ ಸಿಂಬಲ್ ಇಟ್ಟು, ಈಗ 'ಶಿವಂ' ಆಗಿರುವುದು ಟೈಟಲ್ ವಿವಾದದಿಂದಲೇ. ಇನ್ನೂ ಸುದೀಪ್-ಶಿವಣ್ಣ 'ಲೀಡರ್' ರೇಸ್ ಗೆ ಬಿದ್ದಿದ್ದು ನೆನಪಿದೆ ತಾನೆ. [ವಿಭೂತಿ, ತಿಲಕವೇ ಉಪೇಂದ್ರ ಚಿತ್ರದ ಶೀರ್ಷಿಕೆ]

'ಅಗ್ರಜ' ಬೆಡ್ ರೂಮ್ ಕಹಾನಿ

'ಅಗ್ರಜ' ಬೆಡ್ ರೂಮ್ ಕಹಾನಿ

'ಅಗ್ರಜ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ನಟಿಸಿದ್ದ ಸಂಜನಾ, ಚಿತ್ರದ ಬೆಡ್ ರೂಮ್ ಸೀನ್ ನಲ್ಲಿರುವುದು 'ನಾನಲ್ಲ' ಅಂತ ಗರಂ ಆಗಿದ್ದರು. ಆದ್ರೆ 'ನಮ್ಮದೇನು ತಪ್ಪಿಲ್ಲ' ಅಂತ ನಿರ್ದೇಶಕರು ತಿಪ್ಪೆ ಸಾರಿಸಿಬಿಟ್ಟರು. ['ಅಗ್ರಜ'ನ ಬೆಡ್ ರೂಂ ಸೀನ್ ಮೇಲೆ ಸಂಜನಾ ಗರಂ]

'ಡಿಸೆಂಬರ್ 1' ರ ಸುತ್ತ

'ಡಿಸೆಂಬರ್ 1' ರ ಸುತ್ತ

ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ 'ಡಿಸೆಂಬರ್ 1' ಚಿತ್ರ ಕೂಡ ಅನೇಕ ವಿವಾದಗಳಿಗೆ ಗುರಿಯಾಯ್ತು. ಪಿ.ಶೇಷಾದ್ರಿ ವಿರುದ್ಧ ಕಥೆ ಕಡ್ಡ ಆರೋಪ ಕೇಳಿಬಂತು. ಇದರೊಂದಿಗೆ ಚಿತ್ರದಲ್ಲಿನ 'ಗ್ರಾಮ ವಾಸ್ತವ್ಯ'ದ ಕುರಿತಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣು ಕೆಂಪಗೆ ಮಾಡಿಕೊಂಡಿದ್ದರು. [ನಿರ್ದೇಶಕ ಪಿ ಶೇಷಾದ್ರಿ ವಿರುದ್ದ ಹರಿಹಾಯ್ದ ಕುಮಾರಸ್ವಾಮಿ]

'ಅಭಿನೇತ್ರಿ' ಪೂಜಾ ಕಂಟಕ

'ಅಭಿನೇತ್ರಿ' ಪೂಜಾ ಕಂಟಕ

ಪೂಜಾ ಗಾಂಧಿ ನಟಿಸಿ, ನಿರ್ಮಾಣ ಮಾಡುತ್ತಿರುವ 'ಅಭಿನೇತ್ರಿ' ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದಲ್ಲಿ ನಟಿ ಕಲ್ಪನಾ ಮತ್ತು ಪುಟ್ಟಣ್ಣ ಕಣಗಾಲ್ ಅವರನ್ನ ಅಶ್ಲೀಲವಾಗಿ ತೋರಿಸಲಾಗಿದೆ ಅಂತ ಪುಟ್ಟಣ್ಣ ಕುಟುಂಬ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದರು. ಇನ್ನೂ 'ಅಭಿನೇತ್ರಿ' ಕಥೆ ನಂದು ಅಂತ ಲೇಖಕಿಯೊಬ್ಬರು ಕೋರ್ಟ್ ಮೆಟ್ಟಿಲನ್ನು ಏರಿ ಪೂಜಾ ಗಾಂಧಿಯ ನಿದ್ದೆ ಕೆಡಿಸಿದ್ದರು. ಅದೀಗೆಲ್ಲವೂ ಬಗೆಹರಿದಿದೆ. ['ಅಭಿನೇತ್ರಿ' ಪೂಜಾಗಾಂಧಿ ಮೇಲೆ ಕಥೆ ಕದ್ದ ಆರೋಪ]

ನಯನಕೃಷ್ಣ ಬ್ಲಾಕ್ ಮೇಲ್ ಕೇಸ್

ನಯನಕೃಷ್ಣ ಬ್ಲಾಕ್ ಮೇಲ್ ಕೇಸ್

ವೈದ್ಯರೊಬ್ಬರಿಗೆ ಬ್ಲಾಕ್ ಮೇಲ್ ಮಾಡಿದ್ದ ಕೇಸ್ ನಲ್ಲಿ 'ಕೊಟ್ಲಲ್ಲಪ್ಪೋ ಕೈ' ಚಿತ್ರದ ನಾಯಕಿ ನಯನಕೃಷ್ಣ ಬೇಜಾನ್ ಸದ್ದು ಮಾಡಿದ್ದು ಈ ವರ್ಷವೇ. [ಬ್ಲ್ಯಾಕ್ ಮೇಲ್ ಕೇಸ್ ನಲ್ಲಿ ನಟಿ ನಯನಾ ಕೃಷ್ಣ]

ಪ್ರಸಾದ್ ಕೊಟ್ಟ 'ಪ್ರಸಾದ'

ಪ್ರಸಾದ್ ಕೊಟ್ಟ 'ಪ್ರಸಾದ'

'ಅಧ್ಯಕ್ಷ' ಚಿತ್ರದ ಕಲೆಕ್ಷನ್ ವಿಚಾರದಲ್ಲಿ ತಪ್ಪು ಲೆಕ್ಕ ತೋರಿಸಿದ್ದಾರೆ ಅನ್ನುವ ಕಾರಣಕ್ಕೆ ರೊಚ್ಚಿಗೆದ್ದ ವಿತರಕ ಪ್ರಸಾದ್, ಥಿಯೇಟರ್‌ ಮಾಲೀಕರಿಗೆ ಗುನ್ನ ಕೊಟ್ಟು ಗಾಂಧಿನಗರದ ರಿಯಲ್ ಹೀರೋ ಆಗುವುದಕ್ಕೆ ಹೊರಟಿದ್ದರು. ಆದ್ರೆ, ಅಷ್ಟರಲ್ಲೇ ಪ್ರದರ್ಶಕರ ವಲಯ ತಿರುಗಿಬಿದ್ದಿದ್ದಕ್ಕೆ ಪ್ರಸಾದ್ ಕ್ಷಮೆ ಯಾಚಿಸಿದರು. ['ಅಧ್ಯಕ್ಷ'ನಿಗೆ ಗುನ್ನ ಇಡಲು ಹೋಗಿ ಹಿಗ್ಗಾಮುಗ್ಗಾ ಗೂಸಾ]

'ರಿಯಾಲಿಟಿ ಶೋ'ಗಳ ವಿರುದ್ಧ ಕಿಡಿ

'ರಿಯಾಲಿಟಿ ಶೋ'ಗಳ ವಿರುದ್ಧ ಕಿಡಿ

ಸ್ಟಾರ್ ನಟರು ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋಗಳಿಂದ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಡಲ್ ಆಗುತ್ತಿದೆ ಅಂತ ನಿರ್ಮಾಪಕರು ಹೊಸ ಕ್ಯಾತೆ ತೆಗೆದರು. ಇದು ಎಲ್ಲಿಯವರೆಗೆ ತಲುಪಿತು ಅಂದ್ರೆ, ಗಣೇಶ್, ಸುದೀಪ್ ಮತ್ತು ರಮೇಶ್ ರನ್ನ ಬ್ಯಾನ್ ಮಾಡಬೇಕು ಅಂತ ಕೆಲ ನಿರ್ಮಾಪಕರು ಹಠ ಹಿಡಿದಿದ್ದರು. [ಸುದೀಪ್, ರಮೇಶ್ ಅರವಿಂದ್ ನಿರ್ಬಂಧಕ್ಕೆ ಪ್ರತಿಕ್ರಿಯೆ]

ಮೈತ್ರಿಯಾ 'ಮದುವೆ' ಕಹಾನಿ

ಮೈತ್ರಿಯಾ 'ಮದುವೆ' ಕಹಾನಿ

ಗಾಂಧಿನಗರದಲ್ಲಿ ಸದ್ದೇ ಮಾಡದ ನಟಿ ಮೈತ್ರಿಯಾ, ಕೇಂದ್ರ ಸಚಿವ ಸದಾನಂದ ಗೌಡರ ಮಗನ ಮದುವೆ ವಿಷಯದಲ್ಲಿ ಗಲಾಟೆ ಮಾಡಿ ಭಾರತದಾದ್ಯಂತ ಸುದ್ದಿ ಮಾಡಿದ್ದು ಇದೇ ವರ್ಷ. ಇದೇ ಗ್ಯಾಪಲ್ಲಿ ''ಮೈತ್ರಿಯಾ ನನ್ನ ಹೆಂಡತಿ'' ಅಂತ ನಿರ್ದೇಶಕ ರಿಷಿ ಕೂಡ ಹೊಸ ರಾಗ ಎಳೆದಿದ್ದರು. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]

ಡೈವೋರ್ಸ್ ಡ್ರಾಮಕ್ಕೆ ಅಂತ್ಯ ಹಾಡಿದ ವಿಜಿ

ಡೈವೋರ್ಸ್ ಡ್ರಾಮಕ್ಕೆ ಅಂತ್ಯ ಹಾಡಿದ ವಿಜಿ

ಕಳೆದ ವರ್ಷ ವಿಚ್ಛೇಧನಕ್ಕೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ ದುನಿಯಾ ವಿಜಿ, ಈ ವರ್ಷ ಅರ್ಜಿಯನ್ನ ವಾಪಸ್ಸು ಪಡೆದರು. ಪತ್ನಿ ನಾಗರತ್ನ ಜೊತೆ ಸುಖ ದಾಂಪತ್ಯ ನಡೆಸುವುದಕ್ಕೆ ದುನಿಯಾ ವಿಜಿ ಸಮ್ಮತಿ ನೀಡಿದರು. ಆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ದುನಿಯಾ ಡೈವೋರ್ಸ್ ಡ್ರಾಮಾ ಅಂತ್ಯವಾಯ್ತು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

ಅಮರಜೀವಿ ರಾಜ್ ಹಬ್ಬದಲ್ಲಿ 'ಕಿಚ್ಚು-ದಚ್ಚು' ಕಿತಾಪತಿ

ಅಮರಜೀವಿ ರಾಜ್ ಹಬ್ಬದಲ್ಲಿ 'ಕಿಚ್ಚು-ದಚ್ಚು' ಕಿತಾಪತಿ

ಇಡೀ ಸ್ಯಾಂಡಲ್ ವುಡ್ ಒಂದಾಗಿ, ಡಾ.ರಾಜ್ ಸ್ಮಾರಕ ಅನಾವರಣವಾದ ಸಂಭ್ರಮದಲ್ಲಿ, ಅರಮನೆ ಮೈದಾನದಲ್ಲಿ ಮನರಂಜನಾ ಕಾರ್ಯಕ್ರಮ ಆಯೋಜಿಸಿತ್ತು. ಹಿರಿಯ ನಟರು, ಹೆಸರಾಂತ ಕಲಾವಿದರೆಲ್ಲರೂ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಆದ್ರೆ ದರ್ಶನ್ ಮತ್ತು ಸುದೀಪ್ ಬರೀ ಕೈಬೀಸಿ ಹೋಗಿದ್ದು ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟು ಮಾಡಿತ್ತು. [ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?]

ಅಂಬಿ 'ಮುತ್ತಿ'ನ ರಹಸ್ಯ

ಅಂಬಿ 'ಮುತ್ತಿ'ನ ರಹಸ್ಯ

ಜೈಜಗದೀಶ್ ಪುತ್ರಿ ವೈಭವಿಗೆ ಮುತ್ತು ಕೊಟ್ಟ ಅಂಬಿ ಫೋಟೋ, ಬೆಳಗಾವಿ ಸದನವನ್ನೇ ಅಲುಗಾಡಿಸಿ ಬಿಟ್ಟಿತ್ತು. 'ಯಾರೋ ಮಾಡೆಲ್ ಗೆ ಅಂಬಿ ಮುತ್ತು ಕೊಟ್ಟರು' ಅಂತ ಶುರುವಾದ ಸುದ್ದಿ, ಕಡೆಗೆ ಫೇಸ್ ಬುಕ್ ನಲ್ಲಿ ಸುಮಲತಾ ಅದರ ಹಿಂದಿನ ರಹಸ್ಯ ಬಯಲು ಮಾಡುವ ವರೆಗೂ ತಣ್ಣಗಾಗಲಿಲ್ಲ. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]

ಬಾಕಿ ವಿವಾದ

ಬಾಕಿ ವಿವಾದ

ಇದೆಲ್ಲದರೊಂದಿಗೆ 'ಬೆತ್ತಲೆ' ವಿವಾದ, ಅಂಬರೀಶ ಥಿಯೇಟರ್ ಸಮಸ್ಯೆ, ವಾಣಿಜ್ಯ ಮಂಡಳಿಯ ಅಧ್ಯಕ್ಷರ ವಿವಾದ ಆಗಾಗ ಹೆಡ್ ಲೈನ್ಸ್ ಮಾಡಿತ್ತು.

More from Filmibeat

English summary
Not only for movies, Kannada Film Industry made Headlines this year for many controversies. Here, is the detailed report of Controversies of Sandalwood in 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X