ಬೆಂಗಳೂರು ಚಿತ್ರೋತ್ಸವಕ್ಕೆ ಸಂಷಕ್ಟ; ಅಕಾಡೆಮಿಗೆ ಹೈಕೋರ್ಟ್ ನೋಟಿಸ್ ಜಾರಿ
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಮಾರ್ಚ್ 1 ರಿಂದ 8ರವರೆಗೆ ದೇಶ ವಿದೇಶದ ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಕನ್ನಡ ಸಿನಿಮಾಗಳು ಕೂಡ ಸ್ಪರ್ಧೆಯಲ್ಲಿ ಇರಲಿದ್ದು ಈ ಬಾರಿ 14 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಸದ್ಯ ಚಿತ್ರೋತ್ಸವದ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ.
ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಿರುವ ಸಿನಿಮಾಗಳ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಆಯ್ಕೆ ಪ್ರಕ್ರಿಯೆ ಬಗ್ಗೆಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ಪ್ರತಿ ವರ್ಷ ಚಿತ್ರೋತ್ಸದ ವೇಳೆ ಇಂತಹ ಆರೋಪ ಕೇಳಿಬರುತ್ತಿರುತ್ತದೆ. ಆದರೆ ಈ ಬಾರಿ ಚಿತ್ರೋತ್ಸವಕ್ಕೆ ಸಿನಿಮಾಗಳ ಆಯ್ಕೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. 9 ಸಿನಿಮಾ ನಿರ್ಮಾಣ ಸಂಸ್ಥೆಗಳು ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿವೆ.

ರಿಟ್ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಮಸ್ಯೆ ಬಗೆಹರಿಯುವರಿಗೂ ಚಿತ್ರೋತ್ಸವ ನಡೆಸಬಾರದು. ಅದನ್ನು ಮುಂಡೂಡಿ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಫೆಬ್ರವರಿ 24ರಂದು ಅರ್ಜಿಯ ವಿಚಾರಣೆ ನಡೆಯಲಿದ್ದು ಮುಂದೇನು ಆಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಚಿತ್ರೋತ್ಸವಕ್ಕೆ ಸಿನಿಮಾ ಆಯ್ಕೆ ವಿಚಾರ ಪ್ರಶ್ನಿಸಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನಿರ್ದೇಶಕ ಮನ್ಸೋರೆ ಪೋಸ್ಟ್ ಮಾಡಿ "ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಕೆಯಾಗಿರುವ ಸಿನಿಮಾಗಳನ್ನು ಪೂರ್ಣವಾಗಿ ವೀಕ್ಷಿಸದೇನೆ ತಿರಸ್ಕರಿಸಿರುವುದು ಗಂಭೀರ ಲೋಪ. ಚಿತ್ರೋತ್ಸವಕ್ಕೆ, ಸರ್ಕಾರ ಸಾರ್ವಜನಿಕರ ಹಣ ನೀಡುವುದು , ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ತಮ್ಮ ಮನಸೋ ಇಚ್ಛೆಯಂತೆ ವರ್ತಿಸಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸುವುದಕ್ಕಲ್ಲಾ, ಈ ಆರೋಪಕ್ಕೆ ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ವಿವರಣೆ ನೀಡಲೇಬೇಕು" ಎಂದು ಬರೆದುಕೊಂಡಿದ್ದಾರೆ.
ಈ ಬಾರಿ ಚಿತ್ರೋತ್ಸವಕ್ಕೆ 'ಕೆರೆಬೇಟೆ', 'ಮಿಕ್ಕ ಬಣ್ಣದ ಹಕ್ಕಿ', 'ಬೇಲಿ ಹೂ', 'ಅಂತಿಮಯಾತ್ರೆ', 'ದಸ್ಕತ್', 'ದಡ ಸೇರದ ದೋಣಿ', 'ಲಚ್ಚಿ', 'ಕಾಂಗರ ಮೂಡ್', 'ಪಿದಾಯಿ', 'ಮರ್ಯಾದೆ ಪ್ರಶ್ನೆ', 'ಆರಾಟ', 'ಮೈ ಹೀರೊ' ಸೇರಿ 14 ಚಿತ್ರಗಳು ಕನ್ನಡ ಸ್ಪರ್ಧಾ ವಿಭಾಗದಲ್ಲಿ ಆಯ್ಕೆ ಆಗಿವೆ.


Click it and Unblock the Notifications











