ರಿಯಲ್ ಸ್ಟಾರ್ ಉಪ್ಪಿಯ ಕಾಲೆಳೆಯುತ್ತಿರುವ ಅಭಿಮಾನಿಗಳು
Recommended Video

'ಎಲ್ಲರ ಕಾಲು ಎಳಿತದೆ ಕಾಲ....' ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರ ತಮ್ಮ ಸಿನಿಮಾದಲ್ಲಿ ಹೇಳಿದ್ದರು. ಆದ್ರೆ, ಈ ಮಾತು ನಿಜ ಜೀವನದಲ್ಲೂ ಅಷ್ಟೇ ಸತ್ಯ. ಯಾರಾದರೂ ಒಳ್ಳೆಯದನ್ನ ಮಾಡಲು ಹೋದ್ರೆ, ಅವರ ಕಾಲು ಎಳೆಯುವ ಜನರೇ ಹೆಚ್ಚಿರ್ತಾರೆ.
ರಾಜಕೀಯವನ್ನ ತೊಲಗಿಸಿ, ಪ್ರಜಾಕೀಯವನ್ನ ಸೃಷ್ಟಿಸಿ ಎಂದು ಹೋರಾಡುತ್ತಿರುವ ನಟ-ನಿರ್ದೇಶಕ ಉಪೇಂದ್ರ, ಜನಸಾಮಾನ್ಯರಿಗೆ ತಮ್ಮ ಗುರಿ, ಉದ್ದೇಶವೇನು ಎಂಬುದನ್ನ ಆಗಾಗ ಹೇಳುತ್ತಲೇ ಇದ್ದಾರೆ. ಉಪ್ಪಿಯ ಈ ನಡೆಯನ್ನ ಅನೇಕರು ಹೊಗಳಿರುವ ಉದಾಹರಣೆಯೂ ಇದೆ.
ಆದ್ರೀಗ, ಇಂತಹ ಉಪೇಂದ್ರಗೂ ಕೆಲವರು ಕಾಲೆಳೆಯುತ್ತಿದ್ದಾರೆ. ಸುಮ್ಮನೇ ಟ್ವಿಟ್ಟರ್ ನಲ್ಲಿ ಕಾಲ ಕಳೆಯುವುದನ್ನ ಬಿಟ್ಟು ಜನರ ಮಧ್ಯೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ. ಇದೆಲ್ಲ ಶುರುವಾಗಿದ್ದು ಈ ಒಂದು ಟ್ವೀಟ್ ನಿಂದ. ಅಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿತ್ತು.? ಮುಂದೆ ಓದಿ....

ಉಪೇಂದ್ರ ಮಾಡಿದ ಟ್ವೀಟ್ ನಲ್ಲಿ ಏನಿದೆ.?
''ಪ್ರಜಾಕೀಯ'' ವಿಚಾರಗಳ ಪ್ರಚಾರ ಮಾಡುತ್ತಿರುವ ಪ್ರತಿಯೊಬ್ಬರೂ 'ಪ್ರಜಾ ನಾಯಕರು' ಎಂದು ಕರೆಯಿರಿ. ಇಂತಹ ನಾಯಕರಲ್ಲಿ ಯಾರು ಚುನಾವಣೆಯಲ್ಲಿ ಸ್ಪರ್ದಿಸಿ ಗೆಲ್ಲುತ್ತಾರೋ ಅವರು 'ಪ್ರಜಾ ಕಾರ್ಮಿಕರು' ಎಂದು ಬರೆದುಕೊಂಡಿದ್ದರು.

ಪ್ರತಿಕ್ರಿಯಿಸಿದ ಅಭಿಮಾನಿ
''ಸನ್ಮಾನ್ಯ ಉಪ್ಪಿ ಸಾರ್ ರವರೆ ಒಂದು ಆನೆ ತನ್ನ ಮಾವುತ ಒಂದು ಚಿಕ್ಕ ಸರಪಳಿಯಿಂದ ಕಟ್ಟಿದರು ನಾನು ಬಂಧಿಯಾಗಿರುವೆನು ಎಂದು ಭಾವಿಸಿ ತಾನು ನಿಂತಲ್ಲೆ ಇರುತ್ತದೆ ಕಾರಣ ಆ ಆನೆಗೆ ತನ್ನ ಶಕ್ತಿಯ ಬಗ್ಗೆ ಗೊತ್ತಿರುವುದಿಲ್ಲ , ನೀವು ಹಾಗಾಗದಿರಿ- ಸಾಮಾಜಿಕ ಜಾಲತಾಣ ಬೇಕು, ಆದರೆ ಅದೇ ಮುಖ್ಯವಲ್ಲ, ಬನ್ನಿ ಜನಗಳ ಮಧ್ಯೆ ತೋರಿಸಿ ನೀವು ಯಾರೆಂದು'' ಎಂದು ಹರೀಶ್ ತುಂಗ ಎಂಬುವರು ಉಪ್ಪಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದರು.

ಆ ವ್ಯಕ್ತಿಗೆ ತಿರುಗೇಟು ನೀಡಿದ ಉಪ್ಪಿ
ಹೆಚ್ಚೇನೂ ಮಾತನಾಡದ ಉಪೇಂದ್ರ ಅವರು ಆ ವ್ಯಕ್ತಿ ಮಾಡಿದ ಪ್ರತಿಕ್ರಿಯೆಗೆ ''ಜನಗಳೇ ತೋರಿಸುತ್ತಾರೆ ತಾವು ಯಾರೆಂದು....ಕಾದು ನೋಡಿ...'' ಎಂದು ಉತ್ತರಿಸಿದರು.

ಸಿಡಿಮಿಡಿಗೊಂಡ ಮತ್ತೊರ್ವ ವ್ಯಕ್ತಿ
ಉಪ್ಪಿಯ ಈ ಉತ್ತರ ನೋಡಿ ಸಿಡಿಮಿಡಿಗೊಂಡು ಮತ್ತೋರ್ವ ವ್ಯಕ್ತಿ ''ಈ ಹ್ಯಾಂಡಲ್ ನಿರ್ವಹಿಸುತ್ತಿರುವ ಪುಣ್ಯಾತ್ಮನಿಗೆ ದೊಡ್ಡ ನಮಸ್ಕಾರ. ಅವರು ಹೇಳಿದ್ದರಲ್ಲಿ ತಪ್ಪಾದರು ಏನಿತ್ತು? ಅದಕ್ಕೆ ಕೌಂಟರ್ ಕೊಟ್ಟು ಸ್ಕ್ರೀನ್ ಶಾಟ್ ಹಾಕಿ ನಿಮ್ಮ ಬೆನ್ನು ನೀವೆ ತಟ್ಟಿಕೊಳ್ಳೋದು ಬೇರೆ. ಜನರ ಮಧ್ಯೆ ಬರದೆ ಜನರು ಏನು ತೋರಿಸುತ್ತಾರೆ. ಜನರ ಜೊತೆ ಬೆರೆತು ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗಿ'' ಎಂದು ಕಾಮೆಂಟ್ ಮಾಡಿದರು.

ಮತ್ತೆ ಪ್ರಶ್ನಿಸಿದ ಉಪ್ಪಿ
ಈ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಉಪೇಂದ್ರ ''ಈ ಮಾತನ್ನು ನೀವು ಚುನಾಯಿಸಿರುವ ಪ್ರತಿನಿದಿಗಳಿಗೆ ಏಕೆ ಕೇಳುವುದಿಲ್ಲ ?'' ಎಂದು ಮರು ಪ್ರಶ್ನಿಸಿದರು.

ಜನರ ಮಧ್ಯೆ ಬನ್ನಿ
''ಚುನಾಯಿತರಾದವರು ಮಾಡಬೇಕಾದ ಕೆಲಸಗಳನ್ನು ನೀವು ಮಾಡಿ ಎಂದು ನಾನು ಖಂಡಿತ ಹೇಳುತ್ತಿಲ್ಲ.ಬದಲಾಗಿ ನೀವು ಟ್ವಿಟರ್‌ನ ಪೋಸ್ಟ್‌ಗಳು, ಟ್ರೆಂಡ್ ಗಳು, ಫೋಟೋಶಾಪ್ ಮಾಡಿ ಒಂದೆರಡು ವಾಕ್ಯ ನಿಮ್ಮನ್ನು ಹೊಗಳಿ ಬರೆದ ಸಾಲುಗಳನ್ನು ದಾಟಿ ನೀವು ಜನರ ಜೊತೆ ಸಂಪರ್ಕ ಹೊಂದಬೇಕಿದೆ. ಅದು ನಿಮ್ಮ ಪ್ರಜಾಕೀಯದ ಉದ್ದೇಶಗಳನ್ನು ಈಡೇರಿಸಬಲ್ಲದು ಎನ್ನುವ ಅಭಿಪ್ರಾಯ'' ಎಂದು ಮತ್ತೆ ಅದೇ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











