ಪವನ್ ಕಲ್ಯಾಣ್ 'OG' ಚಿತ್ರಕ್ಕೆ ನನ್ನ 'ಕಬ್ಜ' ಸಿನಿಮಾನೇ ಸ್ಫೂರ್ತಿ - ಆರ್. ಚಂದ್ರು
ಬದಲಾದ ಈ ಕಾಲದಲ್ಲಿ ಸಿನಿಮಾ ಮಾಡುವುದು ಸುಲಭ ಅಲ್ಲ. ಯಾಕೆಂದರೆ.. ಒಂದು ಚಿತ್ರ ಆರಂಭ ಮಾಡಿ ಚಿತ್ರಮಂದಿರದವರೆಗೆ ಕರೆತರುವಷ್ಟರಲ್ಲಿ ಹಲವಾರು ಸವಾಲುಗಳು ಎದುರಾಗುತ್ತಾವೆ. ಈ ಸವಾಲುಗಳನ್ನು ಎದುರಿಸುವಲ್ಲಿ ಕನ್ನಡದಲ್ಲಿ ಬಹುತೇಕರು ಎಡವುತ್ತಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಮತ್ತೂ ಕೆಲವರು ಈ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವುದು ಅಲ್ಲದೇ ಚಿತ್ರವೊಂದು ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆಗೂ ಮೀರಿ...
ಮಾರ್ಕೆಟ್ ಮಾಡುವ ಮೂಲಕ ತಮ್ಮ ಬುದ್ದಿವಂತಿಕೆ ಪ್ರದರ್ಶನ ಮಾಡುತ್ತಾರೆ. ಬಂಡವಾಳ ಹೂಡಿದ ನಿರ್ಮಾಪಕರಿಗೆ ಮೋಸ ಆಗದಂತೆ ನೋಡಿಕೊಳ್ಳುತ್ತಾರೆ. ಆ ಪೈಕಿ ಜೋಗಿ ಪ್ರೇಮ್ ಮೊದಲಿಗರಾದರೆ.. ಆರ್,ಚಂದ್ರು ಎರಡನೇಯವರು.

ಹೌದು, ''ತಾಜ್ ಮಹಲ್''.. ''ಪ್ರೇಮ್ ಕಹಾನಿ''.. ''ಚಾರ್ ಮಿನಾರ್''ನಂಥಾ ಪ್ರೇಮಕಾವ್ಯಗಳನ್ನು ಮೊದ ಮೊದಲು ಪ್ರೇಕ್ಷಕರಿಗೆ ತೋರಿಸಿದ ಆರ್ ಚಂದ್ರು ಸದ್ಯ ಎಲ್ಲರಂತೆ ''ಪ್ಯಾನ್ ಇಂಡಿಯಾ'' ಎಂಬ ಕನಸೆಂಬ ಕುದುರೆಯ ಬೆನ್ನೇರಿದ್ದಾರೆ.
ಇನ್ನೂ ಇಂದಿನ ನಿರ್ದೇಶಕರು ಸೂಪರ್ ಸ್ಟಾರ್‌ಗಳ ಜೊತೆ ಒಂದು ಸಿನಿಮಾ ಮಾಡಿ ಮುಗಿಸುವ ಹೊತ್ತಿಗೆ ಉಸ್ಸಪ್ಪಾ ಎಂದು ಏದುಸಿರು ಬಿಡುತ್ತಾರೆ. ಚಿತ್ರ ನಿರ್ಮಾಣದ ಸಹವಾಸ ಬೇಡ ಎಂದು ಕೇವಲ ನಿರ್ದೇಶನದತ್ತ ಮಾತ್ರ ಗಮನ ಕೊಡುತ್ತಾರೆ. ಆದರೆ ಆರ್.ಚಂದ್ರು ಹಾಗಲ್ಲ.
ದೊಡ್ಡ ದೊಡ್ಡ ಸ್ಟಾರ್‌ಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿ ಸಿನಿಮಾ ಮಾಡುವ ಕಲೆ ಇವರಿಗೆ ಕರಗತವಾಗಿದೆ. ಇಷ್ಟೇ ಅಲ್ಲ ಖುದ್ದು ನಿರ್ಮಾಣ ಕ್ಷೇತ್ರಕ್ಕೂ ಚಂದ್ರು ಧುಮುಕಿಯಾಗಿದೆ. ಇವರ ನಿರ್ಮಾಣದ ಚಿತ್ರ ಅಂದರೆ ಕೇಳುವುದೇ ಬೇಡ. ಆ ಚಿತ್ರ ಎಲ್ಲಾ ರೀತಿಯಲ್ಲೂ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಇದಕ್ಕೆ ಒಂದು ಕೈಗನ್ನಡಿ ಎಂಬಂತೆ ಇರುವ ''ಕಬ್ಜ'' ಎರಡು ವರ್ಷದ ಹಿಂದೆ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾಗಿತ್ತು.
ಆದರೆ ದುರಾದೃಷ್ಟ ಕನ್ನಡ ಚಿತ್ರರಂಗದಲ್ಲಿ ''ಕೆಜಿಎಫ್'' ಚಿತ್ರದ ನಂತರ ಭಾರಿ ಸದ್ದು ಮಾಡಿದ್ದ ''ಕಬ್ಜ'' ಚಿತ್ರ ಆರ್.ಚಂದ್ರು ಅಂದುಕೊಂಡಂತೆ ಆಗಲಿಲ್ಲ. ಹಾಗಂಥ ''ಕಬ್ಜ'' ಸೋತು ಹೋಯ್ತು ಅಂತಾ ಕೂಡ ಅಲ್ಲ. ಯಾಕೆಂದರೆ ಇವತ್ತು ಕೂಡ ''ಕಬ್ಜ'' ಚಿತ್ರದ ಸೋಲನ್ನು ಚಂದ್ರು ಒಪ್ಪಿಕೊಂಡಿಲ್ಲ. ಬದಲಿಗೆ ''ಕಬ್ಜ'' ಗೆದ್ದಿದೆ ಎಂಬ ವಾದವನ್ನೇ ಚಂದ್ರು ಮಾಡುತ್ತಾ ಬಂದಿದ್ದಾರೆ.

ಇವರ ಮಾತುಗಳನ್ನು ಹಾಗೂ ಒಂದು ವೇಳೆ ನೀವು ನಂಬದೇ ಇದ್ದರೆ ಚಿತ್ರದ ಗಳಿಕೆಯ ಲೆಕ್ಕವನ್ನು ನೀಡಲು ಆರ್.ಚಂದ್ರು ಮುಂದಾಗುತ್ತಾರೆ. ಇಂಥಾ ಆರ್.ಚಂದ್ರು ಸದ್ಯ ಮತ್ತೊಮ್ಮೆ ''ಕಬ್ಜ'' ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ''OG'' ಚಿತ್ರಕ್ಕೆ ನನ್ನ ''ಕಬ್ಜ'' ಚಿತ್ರವೇ ಪ್ರೇರಣೆ ಎಂದು ಹೇಳಿದ್ದಾರೆ.
ಈ ಕುರಿತು ''ನ್ಯೂಸ್ ಹಂಟ್''ಗೆ ನೀಡಿರುವ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಆರ್.ಚಂದ್ರು, ಇವತ್ತು ನೀವು ''ಓಜಿ'' ಚಿತ್ರವನ್ನು ನೋಡುತ್ತಿರಬಹುದು. ನನ್ನ ಒಂದೊಂದು ಶಾಟ್‌ಗಳು ಕೂಡ ಅಲ್ಲಿವೆ ಎಂದು ಹೇಳಿದ್ದಾರೆ.
''ಓಜಿ'' ಚಿತ್ರ ನನ್ನ ''ಕಬ್ಜ'' ಚಿತ್ರದಿಂದ ಸ್ಫೂರ್ತಿ ಪಡೆದಿದ್ದು ಅಂತ ಯಾರಾದರೂ ಮಾತನಾಡಿದಾರಾ..? ಎಂದು ಪ್ರಶ್ನೆಯನ್ನು ಕೇಳಿರುವ ಆರ್.ಚಂದ್ರು ಇವತ್ತು ಅದೆಲ್ಲ ನೋಡಿ ಅಯ್ಯೋ ಹಂಗೆ "ಓಜಿ'' ಅಂತೆಲ್ಲಾ ಮಾತಾಡ್ತಿದ್ದೀರಾ. ನಾನು ನಾಲ್ಕು ವರ್ಷದ ಹಿಂದೆಯೇ ಅದನ್ನೆಲ್ಲಾ ತೆಗೆದೆ ಅಲ್ಲಾ ! ನೀವು ಯಾಕೆ ಸರ್ ಯಾರು ಮಾತನಾಡಲಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಒಂದು ಕಡೆ ''ಓಜಿ' ಟ್ರೇಲರ್ ನೋಡಿ ಮತ್ತೊಂದು ಕಡೆ ''ಕಬ್ಜ'' ಟ್ರೇಲರ್ ನೋಡಿ, ಒಂದೊಂದು ಶಾಟ್ ಕೂಡ ಅವರು ನಮ್ಮಿಂದ ಸ್ಫೂರ್ತಿ ಪಡೆದು ಮಾಡಿದ್ದಾರೆ ಎಂದು ಹೇಳಿರುವ ಆರ್.ಚಂದ್ರು ನಾನು ಅವರನ್ನು ದೂಷಿಸುತ್ತಿಲ್ಲ, ಬೈಯ್ಯುತ್ತಿಲ್ಲ, ಅವರು ನಮ್ಮಿಂದ ಪ್ರೇರಣೆ ಪಡೆದಿದ್ದಾರೆ ಎಂದು ನಾವು ಅಂದುಕೊಳ್ಳೋಣ ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ದೊಡ್ಡ ಸ್ಟಾರ್, ನನಗೂ ಕೂಡ ಅವರು ಇಷ್ಟ, ಅವರು ನನಗೆ ಶುಭ ಹಾರೈಸಿದ್ದರು, ''ಕಬ್ಜ'' ಚಿತ್ರದ ಸಿಕ್ವೆನ್ಸ್‌ಗಳನ್ನೆಲ್ಲಾ ಅವರು ನೋಡಿದ್ದಾರೆ, ಆ ನಿರ್ಮಾಪಕರಿಗೆ ಕೂಡ ನಾನು ಕೊಟ್ಟಿದ್ದೆ, ಹೀಗಾಗಿ ಅದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿರುವ ಆರ್.ಚಂದ್ರು ಎಲ್ಲರೂ ಕೆಲ ವಿಷಯಗಳಲ್ಲಿ ಸ್ಫೂರ್ತಿ ಪಡೆಯುತ್ತಾರೆ, ಅದು ಒಳ್ಳೆಯದು ಎಂದು ಹೇಳಿದ್ದಾರೆ. ನಮ್ಮನ್ನು ನೋಡಿ ಅವರು ಪ್ರೇರೆಪಿತರಾಗುತ್ತಿದ್ದಾರೆ ಅಂದಾಗ ನೀವೆಲ್ಲ ಖುಷಿ ಪಡಬೇಕಲ್ವಾ ..? ಅದರ ಬಗ್ಗೆ ಯಾರು ಮಾತನಾಡುವುದೇ ಇಲ್ವಲ್ಲಾ..? ಎಂದು ಹೇಳಿದ್ದಾರೆ.
ಸದ್ಯ ಆರ್ ಚಂದ್ರು ಅವರ ಈ ಮಾತುಗಳ ಕುರಿತು ಪಕ್ಕದ ಆಂಧ್ರಪ್ರದೇಶದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗೇ ನೋಡಿದರೆ ''ಕಬ್ಜ'' ಕೂಡ ''ಕೆಜಿಎಫ್''ನ ಸ್ಫೂರ್ತಿಯಿಂದನೇ ಆಗಿದ್ದು ಇದಕ್ಕೆ ಏನ್ ಹೇಳ್ತೀರಾ ಎಂಬ ಪ್ರಶ್ನೆಗಳನ್ನು ಕೂಡ ಆರ್.ಚಂದ್ರು ಅವರಿಗೆ ಒಂದು ವರ್ಗ ಕೇಳುತ್ತಿದೆ. ವಿಡಿಯೋ ವೈರಲ್ ಆಗಿದೆ.


Click it and Unblock the Notifications











