ಕಿಚ್ಚ ಸುದೀಪ್ ಮನೆ ಸಮೀಪದಲ್ಲಿಯೇ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ!
ಯಾವಾಗಲೂ ಸಿನಿಮಾ ಮತ್ತಿತರ ಚಟುವಟಿಕೆಗಳ ಸಲುವಾಗಿ ಹೊರಗೇ ಓಡಾಡುತ್ತಿದ್ದ ಸಿನಿಮಾ ತಾರೆಯರು ಕೊರೊನಾ ವೈರಸ್ ಕಾರಣದಿಂದ ಮನೆಯ ಒಳಗೇ ಇರುವಂತಾಗಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚುತ್ತಿದೆ. ನಟ ಕಿಚ್ಚ ಸುದೀಪ್ ಅವರಿಗೂ ಈ ಆತಂಕ ಎದುರಾಗಿದೆ.
Recommended Video
ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವ ಪ್ರಕರಣಗಳು ಕಂಡುಬರುತ್ತಿದ್ದು, ಅನೇಕ ಸ್ಥಳಗಳು, ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಪಾಸಿಟಿವ್ ಕಂಡುಬಂದ ವ್ಯಕ್ತಿಯ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚಿ ಅವರನ್ನು ಕ್ವಾರೆಂಟೈನ್ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಜನರು ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಓಡಾಡುತ್ತಿದ್ದಾರೆ. ಈ ಮಧ್ಯೆ ಸುದೀಪ್ ಅವರ ಮನೆಯ ಸಮೀಪವೇ ಪ್ರಕರಣ ಪತ್ತೆಯಾಗಿವೆ. ಮುಂದೆ ಓದಿ...

ಸುದೀಪ್ ನಿವಾಸದ ಪಕ್ಕ
ಜೆ.ಪಿ ನಗರದಲ್ಲಿರುವ ಸುದೀಪ್ ಅವರ ನಿವಾಸಕ್ಕೆ ಹೊಂದಿಕೊಂಡಂತೆ ಇರುವ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗಿದೆ. ಇದರಿಂದಾಗಿ ಈ ಸ್ಥಳದ ಸುತ್ತಮುತ್ತ ಆತಂಕ ಉಂಟಾಗಿದೆ.

40 ಮಂದಿ ಸಂಪರ್ಕ
ಈ ಇಬ್ಬರೂ ವ್ಯಾಪಾರಿ ಕುಟುಂಬದವರಾಗಿರುವುದರಿಂದ ಈ ಪ್ರದೇಶದ ಜನರ ಭೀತಿ ಹೆಚ್ಚಾಗಿದೆ. ಸುಮಾರು 40ಕ್ಕೂ ಹೆಚ್ಚು ಮಂದಿ ಈ ಇಬ್ಬರು ಸೋಂಕಿತರೊಂದಿಗೆ ಸಂಪರ್ಕದಲ್ಲಿ ಇದ್ದರು ಎನ್ನುವುದು ತಿಳಿದುಬಂದಿದೆ. ಅವರೆಲ್ಲರನ್ನೂ ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡುವ ಕಾರ್ಯ ನಡೆಯುತ್ತಿದೆ.

ಚಿಕ್ಕಪೇಟೆಯಲ್ಲಿ ವ್ಯಾಪಾರ
ಈ ಸೋಂಕಿತರ ಕುಟುಂಬದವರು ಚಿಕ್ಕಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಈಗ ಕೆಲವು ದಿನಗಳ ಮಟ್ಟಿಗೆ ಚಿಕ್ಕಪೇಟೆಯನ್ನು ಸೀಲ್ ಡೌನ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಇಷ್ಟು ದಿನ ಅವರು ಅಲ್ಲಿ ವ್ಯಾಪಾರ ನಡೆಸಿದ್ದರಿಂದ ಆ ಪ್ರದೇಶದಲ್ಲಿಯೂ ಅವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ.

ರಸ್ತೆ ಸೀಲ್ ಡೌನ್
ಇಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿರುವುದರಿಂದ ಜೆ.ಪಿ. ನಗರದ ಆರನೇ ಹಂತದ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನಗಳ ಓಡಾಟ ಮತ್ತು ವ್ಯಾಪಾರ ವಹಿವಾಟಿನ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಹೈದರಾಬಾದ್‌ನಲ್ಲಿ ಚಿತ್ರೀಕರಣ
ಸುದೀಪ್ ನಟಿಸುತ್ತಿರುವ ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಚಿತ್ರೀಕರಣ ಜುಲೈನಿಂದ ಪ್ರಾರಂಭವಾಗಲಿದೆ. ಹೈದರಾಬಾದ್‌ಗೆ ಚಿತ್ರತಂಡ ತೆರಳಲಿದ್ದು, ಅಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸಲಾಗುತ್ತದೆ. ಚಿತ್ರದ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ.


Click it and Unblock the Notifications











