ಆ 2 ತಮಿಳು ಚಿತ್ರ ಹಿಟ್ ಆದ್ಮೇಲೂ ಅಲ್ಲೇ ಇರಬಹುದಿತ್ತು, ಕನ್ನಡದ ಮೇಲಿನ ಪ್ರೀತಿಗೆ ವಾಪಸ್ ಬಂದೆ: ರಮೇಶ್
ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ತ್ಯಾಗರಾಜ್ ಎಂದೇ ಹೆಸರನ್ನು ಹೊಂದಿರುವ ನಟ. ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಸಾಲು ಸಾಲು ಶತದಿನೋತ್ಸವದ ಸಂಭ್ರಮಾಚರಣೆಯನ್ನು ಕಂಡಿದ್ದ ನಟ ರಮೇಶ್ ಅರವಿಂದ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ತುಳು ಭಾಷೆಯ ಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ.
ಇಲ್ಲಿಯವರೆಗೂ 140ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಹೆಚ್ಚಾಗಿ ಕಾಣಿಸಿಕೊಂಡಿರುವುದು ಕನ್ನಡದ ಸಿನಿಮಾಗಳಲ್ಲಿಯೇ. 1986ರಲ್ಲಿ ಬಿಡುಗಡೆಯಾದ ಸುಂದರ ಸ್ವಪ್ನಗಳು ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ರಮೇಶ್ ಅರವಿಂದ್ ಪುಷ್ಪಕ ವಿಮಾನ ಚಿತ್ರದ ಮೂಲಕ ಶತ ಚಿತ್ರಗಳನ್ನು ಪೂರೈಸಿದರು.

ಹೀಗೆ ವಿವಿಧ ಭಾಷೆಗಳ ಚಿತ್ರರಂಗಗಳಲ್ಲಿ ಕೆಲಸ ಮಾಡಿ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಕನ್ನಡ ಹೊರತುಪಡಿಸಿದರೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ತಮಿಳು ಸಿನಿಮಾಗಳಲ್ಲಿಯೇ. ಕೇವಲ ನಟನಾಗಿ ಮಾತ್ರವಲ್ಲದೇ ಕನ್ನಡ ಹಾಗೂ ತಮಿಳು ಚಿತ್ರರಂಗಗಳಲ್ಲಿ ರಮೇಶ್ ಅರವಿಂದ್ ನಿರ್ದೇಶಕನಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಇನ್ನು ತಮಿಳಿನಲ್ಲಿ ಸಾಲು ಸಾಲು ಹಿಟ್ ಬಂದಾಗಲೂ ಸಹ ರಮೇಶ್ ಅರವಿಂದ್ ಕಾಲಿವುಡ್‌ನಲ್ಲಯೇ ಉಳಿಯದೇ ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದರು.
ಹೀಗೆ ಹಿಟ್ ಜೋನ್‌ನಲ್ಲಿ ಇರುವಾಗ ತಮಿಳು ಚಿತ್ರರಂಗವನ್ನು ಬಿಟ್ಟು ಕನ್ನಡಕ್ಕೆ ವಾಪಸ್ ಆಗಿದ್ದೇಕೆ ಎಂಬ ಪ್ರಶ್ನೆಗೆ ಇದೀಗ ರಮೇಶ್ ಅರವಿಂದ್ ಟಿವಿ 9 ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಹೌದು, ಶಿವಾಜಿ ಸುರತ್ಕಲ್ 2 ಚಿತ್ರದ ಪ್ರಚಾರದ ಸಲುವಾಗಿ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಮೇಶ್ ಅರವಿಂದ್ ತಮಿಳು ಚಿತ್ರರಂಗದಿಂದ ಬಂದಿದ್ದೇಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೂ ಸಹ ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಸಿನಿಮಾಗಳನ್ನು ಆರಂಭದ ದಿನಗಳಲ್ಲಿ ಮಾಡಿದ ನೀವು ಅಲ್ಲಿಯೇ ಉಳಿಯಬಹುದಿತ್ತು, ಆದರೆ ನೀವು ಆ ರೀತಿ ಮಾಡಲಿಲ್ಲ, ಇದಕ್ಕೆ ಯಾರಾದರೂ ಕಾರಣನಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಅರವಿಂದ್ "ನಾನು ನಮ್ಮ ಅಪ್ಪನ ತರಹ, ಯಾರ ಮಾತನ್ನೂ ಕೇಳುವವನಲ್ಲ. ಎಲ್ಲರಿಗೂ ಗೌರವ ಕೊಡುತ್ತೇನೆ. ಆದರೆ ನನಗನಿಸಿದ್ದನ್ನೇ ಮಾಡುತ್ತೇನೆ. ಆ ಟೈಮ್‌ನಲ್ಲಿ ನನಗೆ ಸತಿ ಲೀಲಾವತಿ ಹಾಗೂ ಡುಯೆಟ್ ಎಂಬ ಎರಡು ಚಿತ್ರಗಳು ಎಕ್ಸ್ಟ್ರಾರ್ಡಿನರಿ ಹಿಟ್. ನಾನು ತಮಿಳು ಚಿತ್ರರಂಗವನ್ನು ಬಿಟ್ಟು ಬರಬೇಕಾದರೆ. ಇಲ್ಲಿ ಏನಾಯಿತು ಅಂದರೆ ಇದು ನಮ್ಮ ಮನೆ. ನಾವು ಹುಟ್ಟಿ ಬೆಳೆದಿದ್ದೆಲ್ಲಾ ಇಲ್ಲೇ ಹಾಗಾಗಿ ಮನೆ ಎಂಬ ಪ್ರೀತಿಯಿಂದ ಬಂದೆ. ಅದರ ಮುಂದೆ ಯಾವುದೂ ದೊಡ್ಡದಾಗಲಿಲ್ಲ. ಇಲ್ಲಿ ಬೇರೆ ಸತತವಾಗಿ ಒಂಬತ್ತು ಹಿಟ್ ಚಿತ್ರಗಳು ಸಿಕ್ಕಿಬಿಟ್ಟವು. ಅಲ್ಲಿ ಇದ್ದಿದ್ದರೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು. ಆದರೆ ಇಲ್ಲಿ ಸಿಕ್ಕಂತ ಪ್ರೀತಿ ಇಷ್ಟವಾಯಿತು. ಎಲ್ಲದಕಿಂತ ಹೆಚ್ಚಾಗಿ ಮನೆ ಇದು. ವಾಪಸ್ ಹೋಗೋಕೆ ಚಾನ್ಸ್ ಸಿಗಲಿಲ್ಲ. ಕಮಲ್ ಜತೆ ಮಾತ್ರ ಸಿನಿಮಾ ಮಾಡ್ತಾ ಇದ್ದೆ. ಒಂದು ಹತ್ತು ಚಿತ್ರಗಳನ್ನು ಮಾಡಿದ್ದೆ. ಕಳೆದ ಆರು ವರ್ಷದಿಂದ ಆ ಕಡೆನೂ ಹೋಗಿಲ್ಲ" ಎಂದು ತಿಳಿಸಿದರು.
ಹೀಗೆ ರಮೇಶ್ ಅರವಿಂದ ತಾನು ದುಡ್ಡಿನ ಹಿಂದೆ ಓಡಲಿಲ್ಲ, ನನ್ನ ಊರು, ನನ್ನ ಮನೆ ಎಂಬ ಪ್ರೀತಿಯಿಂದ ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದೆ ಎಂದು ಹೇಳಿಕೊಂಡಿದ್ದು, ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕೆಲ ನಟ - ನಟಿಯರು ತೆಲು ಹಾಗೂ ತಮಿಳು ಆಫರ್ ಬಂದ ಕೂಡಲೇ ಕನ್ನಡ ಮರಿತಾರೆ, ಅಂತವರು ರಮೇಶ್ ಅರವಿಂದ್ ಅವರನ್ನು ನೋಡಿ ಕಲಿಯಬೇಕು ಎಂದರು.


Click it and Unblock the Notifications











