ನಟ ದುನಿಯಾ ವಿಜಯ್- ನಾಗರತ್ನ ಡಿವೋರ್ಸ್ ಕೇಸ್; ಅರ್ಜಿ ವಜಾ ಮಾಡಿ ಕೋರ್ಟ್ ಆದೇಶ
ಕನ್ನಡ ಚಿತ್ರರಂಗದಲ್ಲೀಗ ಡಿವೋರ್ಸ್ ಪ್ರಕರಣಗಳ ಸದ್ದು ಜೋರಾಗಿದೆ. ತಮ್ಮ ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡು ಬೆಂಗಳೂರು ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. 6 ವರ್ಷಗಳ ಹಿಂದೆ ದುನಿಯಾ ವಿಜಯ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಮೊದಲಿಗೆ 2013ರಲ್ಲಿ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಕೋರ್ಟ್‌ನಲ್ಲಿ ಅಲ್ಲಿ ಹಾಕಿದ್ದರು. ಆದರೆ ನಾಗರತ್ನ ಇದಕ್ಕೆ ನಿರಾಕರಿಸಿದ್ದರು. ಬಳಿಕ ರಾಜಿ-ಸಂಧಾನ ನಡೆದು ಎಲ್ಲವೂ ಸರಿ ಹೋಯಿತು ಎನ್ನುವಂತಾಗಿತ್ತು. ಒಂದಷ್ಟು ಷರತ್ತುಗಳ ಅನ್ವಯ ವಿಜಯ್-ನಾಗರತ್ನ ಜೊತೆ ಒಟ್ಟಿಗೆ ಜೀವನ ಸಾಗಿಸಲು ಒಪ್ಪಿಕೊಂಡಿದ್ದರು.

2019ರಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಪತ್ನಿ ನಾಗರತ್ನ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ವಿಚಾರಣೆಗೆ ಹಾಜರಾಗಿದ್ದ ವಿಜಯ್ "ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ" ಎಂದು ಹೇಳಿದ್ದಾಗಿ ವರದಿಯಾಗಿತ್ತು. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ಕೊಟ್ಟಿದ್ದೇನೆ ಎಂದು ದುನಿಯಾ ವಿಜಯ್ ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ನನಗೆ ಯಾವುದೇ ಜೀವನಾಂಶ ನೀಡಿಲ್ಲ ಎಂದು ನಾಗರತ್ನ ಹೇಳಿದ್ದರು.
ಮೊದಲ ಪತ್ನಿಗೆ ಡಿವೋರ್ಸ್ ನೀಡದೇ ದುನಿಯಾ ವಿಜಯ್ ಕೀರ್ತಿ ಗೌಡ ಎಂಬವವರನ್ನು ಮದುವೆ ಆಗಿದ್ದಾರೆ. ಇನ್ನು ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ವಿಜಯ್ ನ್ಯಾಯಾಂಗ ಬಂಧನದಲ್ಲಿದ್ದಾಗ ನಾಗರತ್ನ ಹಾಗೂ ಕೀರ್ತಿಗೌಡ ನಡುವೆ ಜಗಳವಾಗಿತ್ತು. ಕೀರ್ತಿ ಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು.
ಘಟನೆ ಬಳಿಕ ಕ್ರೌರ್ಯದ ನೆಪವೊಡ್ಡಿ ನಾಗರತ್ನರಿಂದ ವಿಚ್ಛೇದನ ಪಡೆಯಲು ವಿಜಯ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪ ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ವಿಚ್ಛೇದನ ಅರ್ಜಿ ವಜಾ ಆಗಿದೆ.


Click it and Unblock the Notifications










