81 ದಿನಗಳ ಬಳಿಕ 'ಡೆವಿಲ್'ಗೆ ಸೂರ್ಯನ ದರ್ಶನ ; ತನ್ನ ಮೇಲಿನ ಆರೋಪ ನಿರಾಕರಿಸಿದ ದಾಸ
ಹೆಚ್ಚೇನು ಇಲ್ಲ. ಎರಡು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು ಇದ್ದರು.
ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್‌ಗೆ ಸದ್ಯ ನೆಮ್ಮದಿ ಮರಿಚೀಕೆ.

ನೋ ಡೌಟ್.. ಪರಪ್ಪನ ಅಗ್ರಹಾರದ ಪಾಲಾಗಿರುವ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ.ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ. ಇಂಥಾ ದರ್ಶನ್ ವಿರುದ್ದ ಇಂದು ದೋಷಾರೋಪ ನಿಗದಿ ಮಾಡಲಾಗಿದೆ.
ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಐಪಿ ನಾಯ್ಕ್, ಕೋರ್ಟ್‌ನಲ್ಲಿ ಕಿಕ್ಕಿರದ ಜನರನ್ನು ಕಂಡು ಆರಂಭದಲ್ಲಿ ಎಲ್ಲರನ್ನು ಹೊರಗಡೆ ಹೋಗುವಂತೆ ಹೇಳಿದರು. ಹೀಗೆ ಆದರೆ ವಿಚಾರಣೆ ಮುಂದೂಡುವುದಾಗಿ ಎಚ್ಚರಿಕೆ ನೀಡಿದರು. ಆರೋಪಿಗಳನ್ನು ಕರೆದು ನಿಲ್ಲಿಸಲಾದರೂ ಜಾಗ ಬೇಕಲ್ವೇ..? ಸಹಕರಿಸಿ ಎಂದು ಹೇಳಿದರು.
ಆದರೂ ಕೂಡ ಜನಸಂದಣಿ ಕಡಿಮೆಯಾಗಲಿಲ್ಲ. ಈ ಹಿನ್ನೆಲೆ..ಜಡ್ಜ್ ಚೆಂಬರ್‌ನಲ್ಲಿ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಿದರು. ಆದರೆ..ಕೋರ್ಟ್ ಹಾಲ್‌ನಲ್ಲಿಯೇ ವಿಚಾರಣೆ ನಡೆಸಿದ ಜಡ್ಜ್ ಐಪಿ ನಾಯ್ಕ್ ಮೊದಲು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎ 1 ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಪಾತ್ರದ ಕುರಿತು ಸಾರಾಂಶ ಓದಿದರು.
ಪವಿತ್ರಾ ಗೌಡ ಮೇಲಿನ ಆರೋಪಗಳನ್ನು ಓದಿದ ಜಡ್ಜ್, ಅಪಹರಣ, ಒಳ ಸಂಚು, ಅಕ್ರಮಕೂಟ ಮಾಡಿದ್ದೀರಾ ಎಂದು ಹೇಳಿದರು. 2,3 ಮತ್ತು 10ನೇ ಆರೋಪಿ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದೀರಿ ಎಂದು ಹೇಳಿದರು. ದರ್ಶನ್ ಅಭಿಮಾನಿಗಳ ಅಕ್ರಮಕೂಟ ರಚಿಸಿಕೊಂಡು ಕಿಡ್ನ್ಯಾಪ್ ಮಾಡಿದ್ದೀರಿ ಎಂದು ಹೇಳಿದರು.
ಆ ನಂತರ ದರ್ಶನ್ ಸೇರಿ ಉಳಿದ ಆರೋಪಿಗಳ ಆರೋಪ ಪಟ್ಟಿಯ ಆರೋಪವನ್ನು ಒಮ್ಮೆಲೆ ಓದಿದ ಜಡ್ಜ್ ರೇಣುಕಾಸ್ವಾಮಿಯನ್ನು ಅಪಹರಿಸಿ ಆರ್ ಆರ್ ನಗರಕ್ಕೆ ಕರೆತರುವಾಗ, ಚಿನ್ನಾಭರಣ ಕಿತ್ತುಕೊಂಡು ಶೆಡ್‌ಗೆ ಕರೆದುಕೊಂಡು ಹಲ್ಲೆ ಮಾಡಿದ್ದೀರಾ ಮತ್ತು ರೇಣುಕಾಸ್ವಾಮಿಯನ್ನು ಮೇಲೆತ್ತಿ ಕುಕ್ಕಿ ಮಾರಣಾಂತಿಕ ಹಲ್ಲೆ ಮಾಡಿದೀರಾ ಎಂದು ಹೇಳಿದರು. ಪ್ಯಾಂಟ್ ಬಿಚ್ಚಿ ದರ್ಶನ್ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದರು.
ತಮ್ಮ ಮೇಲಿನ ಈ ಆರೋಪಗಳನ್ನು ದರ್ಶನ್ ಸೇರಿ ಎಲ್ಲಾ ಆರೋಪಿಗಳು ತಳ್ಳಿ ಹಾಕಿದರು. ನಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದರು. ಈ ಹಿನ್ನೆಲೆ ನವೆಂಬರ್ ಹತ್ತರಂದು ಕೋರ್ಟ್ ವಿಚಾರಣೆಯನ್ನು ಮುಂದೂಡಿತು. ಅಂದು ಅಂದರೆ ನವೆಂಬರ್ ಹತ್ತರಂದು ಮತ್ತೆ ವಿಚಾರಣೆ ನಡೆಸಲಿರುವ ಜಡ್ಕ್ ಆರೋಪಿಗಳ ಟ್ರಯಲ್‌ಗೆ ದಿನಾಂಕವನ್ನು ನಿಗದಿ ಮಾಡಲಿದ್ದಾರೆ.
ಆರೋಪಿಗಳ ದೋಷಾರೋಪ ಮುಕ್ತಾಯವಾದ ನಂತರ ಬೆಂಚ್ ಕ್ಲರ್ಕ್ ಎಲ್ಲಾ ಆರೋಪಿಗಳ ಸಹಿಯನ್ನು ಪಡೆದರು. ಪವಿತ್ರಾ ಗೌಡ, ದರ್ಶನ್ ಒಬ್ಬರಾದ ಮೇಲೊಬ್ಬರಂತೆ ಬಂದು ಸಹಿಯನ್ನು ಮಾಡಿದರು. ಒಟ್ನಲ್ಲಿ ತಮ್ಮ ಮೇಲಿನ ಆರೋಪವನ್ನು ಸದ್ಯ ದರ್ಶನ್ ನಿರಾಕರಿಸಿದ್ದಾರೆ. ನವೆಂಬರ್ 10ಕ್ಕೆ ಡೇಟ್ ಫಾರ್ ಟ್ರಯಲ್ ಫಿಕ್ಸ್ ಆಗಲಿದೆ. ಮುಂದೆ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











