ನಟ ಚೇತನ್‌ಗೆ ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ!
ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್ ಅವರಿಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ನಟ ಚೇತನ್ ಜೈಲು ವಾಸ ಕೊನೆಯಾಗಿದೆ. ಶೇಷಾದ್ರಿಪುರಂ ಪೊಲೀಸರು ಫೆ.22ರಂದು ಚೇತನ್ ರನ್ನು ಬಂಧಿಸಿದ್ದರು. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಫೆ.24 ರಂದು 32ನೇ ಎಸಿಎಂಎಂ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಒಂದು ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ನೀಡಲಾಗಿದೆ. ತನಿಖೆಗೆ ಸಹಕರಿಸುವಂತೆ ಚೇತನ್‌ಗೆ ಷರತ್ತು ವಿಧಿಸಲಾಗಿದೆ.
ಆದರೆ ಜಾಮೀನು ಸಿಕ್ಕರೂ ಕೂಡ ನಟ ಚೇತನ್‌ಗೆ ಬಿಡುಗಡೆಯ ಭಾಗ್ಯ ಇಲ್ಲ. ಇಂದು (ಫೆ.26)ಕ್ಕೆ ಚೇತನ್ ಬಿಡುಗಡೆ ಆಗುತ್ತಿಲ್ಲ. ಇನ್ನೂ ಎರಡು ದಿನ ಜೈಲಿನಲ್ಲಿ ಇರಬೇಕಾಗುತ್ತದೆ. ಇಂದು (ಫೆ.26) ನಾಲ್ಕನೇ ಶನಿವಾರ ಮತ್ತು ನಾಳೆ ಭಾನುವಾರ ಆಗಿರುವ ಕಾರಣ ಸರ್ಕಾರ ರಜೆ ಇದೆ. ಹೀಗಾಗಿ ಚೇತನ್ ಜಾಮೀನು ಸಿಕ್ಕರೂ ಬಿಡುಗಡೆ ಆಗುತ್ತಿಲ್ಲ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಜೈಲು ವಾಸದಿಂದ ಮುಕ್ತರಾಗುತ್ತಾರೆ.
ಫೆಬ್ರವರಿ 16ರಂದು ನಟ ಚೇತನ್ ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಟ್ವೀಟ್‌ನಲ್ಲಿ ಆಕ್ಷೇಪಾರ್ಹ ಅಂಶಗಳು ಇದೆ ಎನ್ನುವ ಆರೋಪದ ಮೇಲೆ ಚೇತನ್ ಬಂಧನಕ್ಕೆ ಒಳಗಾಗಿದ್ದರು. ನಂತರ ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದಿದ್ದು, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಯಾವುದೇ ಮಾಹಿತಿ ನೀಡದೆ, ಅಪಹರಣದ ರೀತಿಯಲ್ಲಿ ಪತಿಯನ್ನು ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದರು.

ಕಾರಣವಿಲ್ಲದೆ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು. ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಲೈವ್‌ನಲ್ಲಿ ಮೇಘಾ ಎಂದು ಅಳಲು ತೋಡಿಕೊಂಡಿದ್ದರು.
ಫೆ.24ರಂದು ಚೇತನ್ ಹುಟ್ಟಹಬ್ಬವಿತ್ತು. ಆದರೆ ಬಂಧನಕ್ಕೊಳಗಾಗಿದ್ದರಿಂದ ಜೈಲಿನಲ್ಲೇ ಹುಟ್ಟುಹಬ್ಬದ ದಿನವನ್ನು ಕಳೆಯುವಂತಾಯಿತು. ನಟನೆಯ ಜೊತೆಗೆ ನಟ ಚೇತನ್ ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್ ವಿವಾದಕ್ಕೊಳಗಾಗಿದೆ.


Click it and Unblock the Notifications











