Sruthi Hariharan: ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿಗೆ ಸಂಕಷ್ಟ; ಕೋರ್ಟ್‌ನಿಂದ ನೋಟಿಸ್ ಜಾರಿ!
2018ರಲ್ಲಿ ವಿವಿಧ ಚಿತ್ರರಂಗಗಳಲ್ಲಿ ಹುಟ್ಟಿಕೊಂಡಿದ್ದ ಮೀಟೂ ಅಭಿಯಾನ ದೊಡ್ಡ ಮಟ್ಟದ ವಿವಾದಗಳನ್ನು ಸೃಷ್ಟಿಸಿತ್ತು. ಅನೇಕ ನಟಿಯರು ಚಿತ್ರರಂಗದಲ್ಲಿ ತಮ್ಮ ಪುರುಷ ಸಹ ಕಲಾವಿದರಿಂದ ಹಾಗೂ ಮಹಿಳಾ ಸಹ ಕಲಾವಿದರಿಂದ ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನು ಬಿಚ್ಚಿಟ್ಟಿದ್ದರು.
ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಶೃತಿ ಹರಿಹರನ್ ಸಹ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಅಭಿಯಾನದಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಟಿ ಶೃತಿ ಹರಿಹರನ್ ಮಾಡಿದ್ದ ಈ ಆರೋಪ ಸಿನಿ ರಸಿಕರಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಆಶ್ಚರ್ಯದ ಜತೆ ಕೋಪವನ್ನೂ ಸಹ ಮೂಡಿಸಿತ್ತು.

ನಿರ್ದೇಶಕ ಅರುಣ್ ವೈದ್ಯನಾಥನ್ ನಿರ್ದೇಶಿಸಿದ್ದ ವಿಸ್ಮಯ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಾಯಕ ಹಾಗೂ ನಾಯಕಿಯಾಗಿ ಗಂಡ - ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಕೆಲ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ತನಗೆ ಅರ್ಜುನ್ ಸರ್ಜಾರಿಂದ ಲೈಂಗಿಕ ಕಿರುಕುಳ ಆಗಿತ್ತು ಎಂದು ಶೃತಿ ಹರಿಹರನ್ ಆರೋಪಿಸಿದ್ದರು.
ಈ ಪ್ರಕರಣದ ತನಿಖೆಯನ್ನೂ ಸಹ ಪೊಲೀಸರು ನಡೆಸಿದ್ದರು. ಸದ್ಯ ಈ ಪ್ರಕರಣದ ತನಿಖೆಗೆ ಮೂರು ವರ್ಷಗಳು ಕಳೆದಿದ್ದು, ಆದರೂ ಸಹ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ಹೀಗಾಗಿ ಪೊಲೀಸರು ಬಿ ರಿಪೋರ್ಟ್ ಅನ್ನು ಕೋರ್ಟಿಗೆ ಸಲ್ಲಿಸಿದ್ದರು.
ಪ್ರಕರಣವೊಂದರ ತನಿಖೆ ಕೈಗೊಳ್ಳುವ ಪೊಲೀಸರಿಗೆ ತನಿಖಾ ಅವಧಿಯಲ್ಲಿ ಆರೋಪಿಯ ವಿರುದ್ಧ ಆತನನ್ನು ವಿಚಾರಣೆಗೆ ಗುರುತುಪಡಿಸುವಷ್ಟು ಸಾಕ್ಷ್ಯಾಧಾರಗಳು ಸಿಗದಿದ್ದಾಗ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವ ವರದಿ ಈ ಬಿ ರಿಪೋರ್ಟ್ ಆಗಿರುತ್ತದೆ.
ಹೀಗೆ ಶೃತಿ ಹರಿಹರನ್ ಆರೋಪದ ಆಧಾರದ ಮೇಲೆ ತನಿಖೆ ಆರಂಭಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೂ ಸಹ ಅರ್ಜುನ್ ಸರ್ಜಾ ಅವರನ್ನು ವಿಚಾರಣೆಗೆ ಕರೆತರುವಷ್ಟು ಸಾಕ್ಷಿ ಆಧಾರಗಳು ಸಿಗದಿದ್ದ ಕಾರಣ ಬಿ ರಿಪೋರ್ಟ್ ಸಲ್ಲಿಸಿದ್ದರು.
ಇದೀಗ ಈ ಬಿ ರಿಪೋರ್ಟ್ ಅನ್ನು ಶೃತಿ ಹರಿಹರನ್ ಪ್ರಶ್ನಿಸಿ ಮೇಲ್ಮವಿಯನ್ನು ಸಲ್ಲಿಸಿದ್ದಾರೆ. ಈ ಮೇಲ್ಮನವಿಯನ್ನು ಕೋರ್ಟ್ ಒಪ್ಪಿದ್ದು, ಪೊಲೀಸರಿಗೆ ಸಾಕ್ಷಾಧಾರಗಳನ್ನು ಒದಗಿಸುವಂತೆ ಶೃತಿ ಹರಿಹರನ್‌ಗೆ ನೋಟಿಸ್ ಜಾರಿ ಮಾಡಿದೆ. ಈಗಲೂ ಸಹ ಸಾಕ್ಷಿ ಆಧಾರಗಳು ಸರಿಯಾಗಿ ಲಭಿಸದಿದ್ದರೆ ಶೃತಿ ಹರಿಹರನ್‌ಗೆ ಹಿನ್ನಡೆ ಆಗಲಿದ್ದು, ಸದ್ಯ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.


Click it and Unblock the Notifications











