»   » ಕಾನೂನು ಸಮರದಲ್ಲಿ ಗೆದ್ದ 'ಅಭಿನೇತ್ರಿ' ಪೂಜಾಗಾಂಧಿ

ಕಾನೂನು ಸಮರದಲ್ಲಿ ಗೆದ್ದ 'ಅಭಿನೇತ್ರಿ' ಪೂಜಾಗಾಂಧಿ

By: ಉದಯರವಿ
Subscribe to Filmibeat Kannada

ಮಳೆ ಹುಡುಗಿ ಪೂಜಾಗಾಂಧಿ ಕಾನೂನು ಸಮರದಲ್ಲಿ ಗೆದ್ದಿದ್ದಾರೆ. ಕಡೆಗೂ ತಮ್ಮ ಮಹತ್ವಾಕಾಂಕ್ಷಿ ಚಿತ್ರ ಅಭಿನೇತ್ರಿಯನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೃತಿಚೌರ್ಯ ವಿವಾದದ ಕಾರಣ 'ಅಭಿನೇತ್ರಿ' ಚಿತ್ರ ಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ಮೂರು ತಿಂಗಳಿಂದ ಪೂಜಾಗಾಂಧಿ ಈ ಚಿತ್ರದ ಬಿಡುಗಡೆಗಾಗಿ ಕೋರ್ಟ್ ಗೆ ಸಾಕಷ್ಟು ಅಲೆದಾಡಿದ್ದರು. ಇದೀಗ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ['ಅಭಿನೇತ್ರಿ' ಪೂಜಾಗಾಂಧಿ ಮೇಲೆ ಕಥೆ ಕದ್ದ ಆರೋಪ]


ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರು ತಮ್ಮ ಕೃತಿ 'ಅಭಿನೇತ್ರಿಯ ಅಂತಂರಂಗ' ಚಿತ್ರವನ್ನು ಕೃತಿಚೌರ್ಯ ಮಾಡಿ ಅಭಿನೇತ್ರಿ ಚಿತ್ರ ತೆರೆಗೆ ತರಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ನ್ಯಾಯಾಲಯ 'ಅಭಿನೇತ್ರಿ'ಯ ಚಿತ್ರಕಥೆ, ಚಿತ್ರೀಕರಣ ಮಾಡಿದ ರೀಲ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಬಳಿಕ ಎರಡನ್ನೂ ತಾಳೆಮಾಡಿ ನೋಡಿದಾಗ ಅಭಿನೇತ್ರಿಯ ಅಂತರಂಗ ಕೃತಿಗೂ ಅಭಿನೇತ್ರಿ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದಾರೆ. ಅಲ್ಲಿಗೆ 'ಅಭಿನೇತ್ರಿ' ಚಿತ್ರದ ವಿವಾದ ಇತ್ಯರ್ಥ್ಯಗೊಂಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪೂಜಾಗಾಂಧಿ, ನಾವು ಯಾವುದೇ ಕಥೆ ಕದ್ದಿಲ್ಲ. ಭಾಗ್ಯ ಕೃಷ್ಣಮೂರ್ತಿ ಅವರ ಕೃತಿಗೂ ನಮ್ಮ ಚಿತ್ರಕಥೆಗೂ ಯಾವುದೇ ಸಂಬಂಧ ಇರಲಿಲ್ಲ. ನ್ಯಾಯಾಲಯದ ಮೇಲೆ ನನಗೆ ಅಪಾರ ನಂಬಿಕೆ ಇತ್ತು ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಲಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಪೂಜಾಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಚಿತ್ರದ ಪ್ರಚಾರಕಾರ್ಯ ಭರದಿಂದ ಸಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

English summary
Bangalore city civil court lifts stay on actress Pooja Gandhi much expected Kannada movie Abhinetri. Now the decks are clear for the release of the movie.
Please Wait while comments are loading...