ಸುದೀಪ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ಮಧ್ಯಂತರ ಆದೇಶ
ಕಾಲ್‌ಶೀಟ್ ವಿವಾದಕ್ಕೆ ಸಂಬಂಧಿಸಿ ನಟ ಸುದೀಪ್ ಹಾಗೂ ನಿರ್ಮಾಪಕರಾದ ಎಂ. ಎನ್ ಕುಮಾರ್, ಎನ್. ಎಂ ಸುರೇಶ್ ನಡುವಿನ ಕಾನೂನು ಸಮರ ಮುಂದುವರೆದಿದೆ. ನಟ ಸುದೀಪ್ ಹೂಡಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಇನ್ನು ಮುಂದೆ ಎಂ. ಎನ್ ಕುಮಾರ್ ಹಾಗೂ ಸಂಗಡಿಗರು, ನಟ ಸುದೀಪ್ ವಿರುದ್ದ ಎಲ್ಲಿಯೂ ತೇಜೋವಧೆ ಮಾಡದಂತೆ ಕೋರ್ಟ್ ಆದೇಶಿಸಿದೆ.
ಸುದೀಪ್ ತೇಜೋವಧೆ ಮಾಡದಂತೆ, ಮಾಧ್ಯಮಗಳಲ್ಲಿ ಸುದೀಪ್ ವಿರುದ್ಧ ಹೇಳಿಕೆ ನೀಡದಂತೆ ತಿಳಿಸಲಾಗಿದೆ. ಕೇಸ್ ಇತ್ಯರ್ಥ ಆಗುವವರೆಗೂ ಸುದೀಪ್ ಬಗ್ಗೆ ಮೌಖಿಕ ಅಥವಾ ಲಿಖಿತ ಹೇಳಿಕೆಗಳನ್ನು ನೀಡದಂತೆ ಸಿಟಿ ಸಿವಿಲ್ ಕೋರ್ಟ್‌ನಿಂದ ನಟ ಸುದೀಪ್ ಪರ ಮಧ್ಯಂತರ ಆದೇಶ ಬಂದಿದೆ.

ಮಧ್ಯಂತರ ಆದೇಶ ಪ್ರಶ್ನಿಸುವುದಾದರೆ ಸೆಪ್ಟೆಂಬರ್ 9ರ ಒಳಗೆ ಮೇಲ್ಮನವಿ ಸಲ್ಲಿಸಲು ಎಂ. ಎನ್ ಕುಮಾರ್ ಅವರಿಗೆ ಕೋರ್ಟ್ ಅವಕಾಶ ನೀಡಿದೆ. ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸುದೀಪ್ ವರ್ಷಸ್ ಎಂ.ಎನ್ ಕುಮಾರ್ ಕಾಲ್‌ಶೀಟ್ ಫೈಟ್ ತಾರಕಕ್ಕೇರಿತ್ತು. ನಟ ಸುದೀಪ್ ಹಣ ಪಡೆದು ಸಿನಿಮಾ ಮಾಡಿಕೊಡುವುದಾಗಿ ಹೇಳಿ ಈಗ ಕಾಲ್‌ಶೀಟ್ ಕೊಡದೇ ವಂಚಿಸಿದ್ದಾರೆ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಆರೋಪಿಸಿದ್ದರು.
ಮತ್ತೊಬ್ಬ ನಿರ್ಮಾಪಕ ಎನ್. ಎಂ ಸುರೇಶ್ ಕೂಡ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಈ ಬಗ್ಗೆ ಸುದೀಪ್ ತಮ್ಮ ಆಪ್ತರ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ಬಳಿಕ ಜುಲೈ 15ರಂದ ನಗರದ ಜೆಎಂಎಫ್‌ಸಿ ಕೋರ್ಟ್‌ಗೆ ಆಗಮಿಸಿ ಸುದೀಪ್, ನಿರ್ಮಾಪಕರಾದ ಎಂ.ಎನ್ ಕುಮಾರ್ ಹಾಗೂ ಎನ್. ಎಂ ಸುರೇಶ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಕಾನೂನು ಹೋರಾಟದ ಮೂಲಕವೇ ಈ ವಿವಾದ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು.
ಇತ್ತೀಚೆಗಷ್ಟೆ ಸುದೀಪ್ ಕೋರ್ಟ್‌ಗೆ ಹಾಜರಾಗಿ ಮೊಕದ್ದಮೆ ಸಂಬಂಧ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಕೋರ್ಟ್ ವಿಚಾರಣೆ ನಡೆಸಿ ಈಗ ಮಧ್ಯಂತರ ಆದೇಶ ನೀಡಿದೆ. ಒಂದ್ಕಾಲದಲ್ಲಿ ಸುದೀಪ್ ಹಾಗೂ ಎಂ. ಎನ್ ಕುಮಾರ್ ಬಹಳ ಆಪ್ತರಾಗಿದ್ದರು. ಸಹೋದರರ ರೀತಿ ಇದ್ದರು. ಕಿಚ್ಚನ ಸಿನಿಮಾಗಳನ್ನು ಕುಮಾರ್ ನಿರ್ಮಿಸಿದ್ದರು. ವಿತರಣೆ ಮಾಡಿದ್ದರು. ಆದರೆ ಆ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು.
ತಮ್ಮಿಬ್ಬರ ವ್ಯವಹಾರದಲ್ಲಿ ಸುದೀಪ್ ನಿರ್ಮಾಪಕ ಎಂ. ಎನ್ ಕುಮಾರ್ ಅವರಿಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿದ್ದರು. ಬಳಿಕ ಕಾಲ್‌ಶೀಟ್ ಕೊಡದೇ ಸತಾಯಿಸಿದ್ದರು. ಇದೀಗ ತಮಿಳು ಬ್ಯಾನರ್‌ನಲ್ಲಿ ನಟಿಸುತ್ತಿದ್ದಾರೆ. ನನಗೆ ಕಾಲ್‌ಶೀಟ್ ಕೊಡುತ್ತಿಲ್ಲ ಎಂದು ಎಂ. ಎನ್ ಕುಮಾರ್ ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಇದು ಸುದೀಪ್ ಬೇಸರಕ್ಕೆ ಕಾರಣವಾಗಿತ್ತು. ಈ ಸಂಬಂಧ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಕುಮಾರ್ ಬಳಿಕ 'ಹುಚ್ಚ' ಸಿನಿಮಾ ನಿರ್ಮಾಪಕ ರಹಮಾನ್ ಸಹ ಸುದೀಪ್ ವಿರುದ್ಧ ಆರೋಪ ಮಾಡಿದ್ದರು.
ಸುದೀಪ್ ಅವರನ್ನು ನಂಬಿ 2 ಸಿನಿಮಾ ರೀಮೆಕ್ ರೈಟ್ಸ್ ತಂದಿದ್ದೆ. ಆ ಸಿನಿಮಾಗಳು ನಿರ್ಮಾಣವಾಗಲಿಲ್ಲ. ಆ ನಷ್ಟವನ್ನು ಸುದೀಪ್ ಭರಿಸಿಕೊಡಬೇಕು ಎಂದು ರಹಮಾನ್ ಮನವಿ ಮಾಡಿದ್ದರು. ಹೀಗೆ ಒಬ್ಬೊಬ್ಬರಾಗಿ ನಿರ್ಮಾಪಕರು ತಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದರಿಂದ ಬೇಸತ್ತು ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರ ಕೇಳಿದ್ದರು. ಕಾನೂನು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು.
ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿರ್ಮಾಪಕ ಎಂ.ಎನ್ ಕುಮಾರ್ ಫಿಲ್ಮ್ ಚೇಂಬರ್‌ನಲ್ಲೇ ಈ ವಿವಾದ ಬಗೆಹರಿಸುವಂತೆ ಪಟ್ಟು ಹಿಡಿದರು. ಫಿಲ್ಮ್ ಚೇಂಬರ್ ಕಚೇರಿ ಎದುರು ಧರಣಿ ನಡೆಸಿದರು. ಕೆಲ ನಿರ್ಮಾಪಕರು ಅವರ ಪರ ನಿಂತರು. ಆ ಬಳಿಕ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಬಳಿ ವಿವಾದ ಬಗೆಹರಿಸುವಂತೆ ಕುಮಾರ್ ಮನವಿ ಮಾಡಿದ್ದರು. ರವಿಚಂದ್ರನ್ ಕೂಡ ಇಬ್ಬರನ್ನು ಕರೆಸಿ ಮಾತನಾಡುವ ಪ್ರಯತ್ನ ಮಾಡಿದ್ದರು. ಆದರೆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುದೀಪ್ ಕಾನೂನು ಹೋರಾಟ ಮುಂದುವರೆಸಿದ್ದಾರೆ.


Click it and Unblock the Notifications











