For Quick Alerts
  ALLOW NOTIFICATIONS  
  For Daily Alerts

  ಕವಿತಾ ಕ್ರೇಜಿಲೋಕ 'ರಮ್ಯಾ ಲೋಕ'ವಾಗಿದೆಯೇ?

  |

  ನಾಳೆ (ಜೂನ್ 8, 2012) ರಂದು ಬಿಡುಗಡೆಯಾಗಲಿರುವ 'ಕ್ರೇಜಿಲೋಕ' ಚಿತ್ರದ ಪ್ರಚಾರ ಕಾರ್ಯವನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಕ್ರೇಜಿ ಲೋಕ ಚಿತ್ರತಂಡ ಪ್ರಚಾರಕ್ಕೆ ರಮ್ಯಾರನ್ನೇ ಅವಲಂಬಿಸಿದೆ. ಬಿಸಿನೆಸ್ ದೃಷ್ಟಿಯಿಂದ ಕವಿತಾ ಲಂಕೇಶ್ ರಮ್ಯಾರನ್ನು ಓಲೈಸಲು ತೊಡಗಿದ್ದಾರೆ. ಸಂಶಯಕ್ಕೆ ಸಾಕ್ಷಿಗಳು ಸಾಕಷ್ಟಿವೆ.

  ಕ್ರೇಜಿಲೋಕ ಚಿತ್ರದ ಪ್ರಮೋಶನ್ ಕಾರ್ಯ ಭರ್ಜರಿಯಾಗಿದೆ. ಅದರಲ್ಲೂ ರಮ್ಯಾ ಪ್ರಚಾರದ್ದೇ ಭರಾಟೆ. ವಾಲ್ ಪೋಸ್ಟರ್ಸ್, ಹೋರ್ಡಿಂಗ್ಸ್ ಅಥವಾ ಚಿತ್ರದ ಟ್ರೈಲರ್ ಎಲ್ಲೆಡೆಯೂ ರಮ್ಯಾ ಮಾತ್ರ ಕಾಣಿಸುತ್ತಿದ್ದಾರೆ. ಈ ಮೊದಲೇ ಪ್ರಚಾರವಾದಂತೆ, ರಮ್ಯಾರ 'ಗಲಭೆ...ಗಲಭೆ...' ಹಾಡು ಎಲ್ಲೆಡೆಯಲ್ಲೂ ಕೇಳಿಬರುತ್ತಿದೆ.

  ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು ಪ್ರಮುಖ ಪಾತ್ರ ಎನ್ನಲಾಗುತ್ತಿದೆ. ಆದರೆ ಇನ್ನೊಂದು ಸುದ್ದಿಮೂಲದ ಪ್ರಕಾರ, ರವಿಚಂದ್ರನ್ ಅವರದ್ದು ಅತಿಥಿ ಪಾತ್ರ. ರವಿಚಂದ್ರನ್ ಜೋಡಿಯಾಗಿ ಡೈಸಿ ಬೋಪಣ್ಣ ನಟಿಸಿದ್ದಾರೆ. ಯುವ ಜೋಡಿಗಳಾಗಿ ನವನಟ ಸೂರ್ಯ ಹಾಗೂ ಹರ್ಷಿಕಾ ಪೂಣಚ್ಚ ಇದ್ದಾರೆ.

  ಆದರೆ, ಇಡೀ ಚಿತ್ರ ಪ್ರಚಾರಕ್ಕೆ ನೆಚ್ಚಿಕೊಂಡಿರುವುದು ಒನ್ ಅಂಡ್ ಓನ್ಲಿ ರಮ್ಯಾರನ್ನು. ರಮ್ಯಾ ಹೋದಲೆಲ್ಲಾ ಗಲಭೆ ಎಂಬ ಹಾಡಿನ ಅರ್ಥವೂ ವಿಶೇಷ ಅರ್ಥ ನೀಡುತ್ತಿದೆ. ಅದು ರಮ್ಯಾರನ್ನು ಕಾಲೆಳೆಯಲು ಮಾಡಿದ ಹಾಡೋ ಅಥವಾ ರಮ್ಯಾ ಪಬ್ಲಿಸಿಟಿಗೋ ಎಂಬುದು ರಹಸ್ಯವಾಗಿದ್ದರೇ ಒಳ್ಳೆಯದು.

  ಈ ಮೊದಲು ರಮ್ಯಾ, 'ತಾವು ಕ್ರೇಜಿಲೋಕ ಚಿತ್ರದ ಗಲಭೆ ಹಾಡಿನಲ್ಲಿ ಕಾಣಿಸಿಕೊಳ್ಳುವುದಿಲ್ಲ' ಎಂದು ದೊಡ್ಡ ಗಲಭೆಯನ್ನೇ ಮಾಡಿದ್ದರು. ನಂತರ ಇದ್ದಕ್ಕಿದ್ದಂತೆ ತಣ್ಣಗಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದು ಐಟಂ ಸಾಂಗ್ ಎಂದು ಪ್ರಚಾರ ಮಾಡಿದ್ದ ಕವಿತಾಗೆ, 'ಐಟಂ ಸಾಂಗ್ ಅಲ್ಲ' ಎಂದು ಬದಲಿ ಹೇಳಿಕೆ ನೀಡುವಂತೆ ಮಾಡಿದ್ದರು ರಮ್ಯಾ.

  ನಂತರ ಕವಿತಾ ಕೂಡ "ಈ ಹಾಡು ಐಟಂ ಸಾಂಗ್ ಅಲ್ಲ, ಸಾಂದರ್ಭಿಕ ಹಾಡು" ಮಾದ್ಯಮದೆದುರು ಹೇಳುವ ಮೂಲಕ ರಮ್ಯಾರನ್ನು ಅನುಸರಿಸಿದ್ದರು. ಈಗ ಚಿತ್ರ ಬಿಡುಗಡೆಗೆ ಒಂದು ವಾರ ಇರಬೇಕಾದರೆ ಎಲ್ಲೆಲ್ಲೂ ಚಿತ್ರದ ಪ್ರಚಾರದಲ್ಲಿ ಕೇವಲ ರಮ್ಯಾ ಹಾಗೂ ರಮ್ಯಾ ಹಾಡುಗಳು ಮಾತ್ರ ಬಳಕೆಯಾಗುತ್ತಿವೆ.

  ಇದಕ್ಕೆಲ್ಲಾ ಕಾರಣವೇನು ಎಂದು ಹುಡುಕುತ್ತಾ ಹೋದರೆ, ಇವೆಲ್ಲಾ ಕೇವಲ ಪಬ್ಲಿಸಿಟಿ ತಂತ್ರವಲ್ಲ, ಜೊತೆಗೆ ವ್ಯವಹಾರದ ಚತುರತೆಯೂ ಅಡಗಿದೆ ಎಂಬುದು ಕಂಡುಬರುತ್ತದೆ. ಕ್ರೇಜಿಲೋಕ ಚಿತ್ರದ ಒಂದು ಹಾಡಿಗೆ ರಮ್ಯಾರನ್ನು ಕವಿತಾ ಲಂಕೇಶ್ ಕರೆಸಿದ್ದೇ ರಮ್ಯಾಗಿರುವ ಫೇಸ್ ವ್ಯಾಲ್ಯೂ ನಂಬಿ.

  ಈಗಲೂ ಅಷ್ಟೇ, ಚಿತ್ರದಲ್ಲಿರುವ ಅಷ್ಟೂ ನಟ-ನಟಿಯರಿಗಿಂತ ಜನಪ್ರಿಯತೆ ಇರುವ ಸ್ಟಾರ್ ಎಂದರೆ ಅದು ರಮ್ಯಾ ಮಾತ್ರ. ಚಿತ್ರಕ್ಕೆ ಓಪನಿಂಗ್ ಸಿಗಬೇಕೆಂದರೆ ಅದು ರಮ್ಯಾರಿಂದ ಮಾತ್ರ ಸಾಧ್ಯ. ಅದನ್ನರಿತಿರುವ ಜಾಣೆ ಕವಿತಾ, ರಮ್ಯಾರನ್ನು ಕ್ರೇಜಿಲೋಕದ ನಾಯಕಿಗಿಂತ ಮೇಲಕ್ಕೇರಿಸಿದ್ದಾರೆ.

  ಸಾಕಷ್ಟು ಮೊದಲೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರಗಳ ಸಮಸ್ಯೆಯಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ ಎಂದು ಬಹಳಷ್ಟು ಬಾರಿ ಹೇಳಿದ್ದರು ಕವಿತಾ ಲಂಕೇಶ್. ಅಂತೂ ಈಗ ಬಿಡುಗಡೆಯಾಗುತ್ತಿದೆ, ಜನರ ನಿರೀಕ್ಷೆಗೆ ಉತ್ತರ ಸಿಗುವಂತಾಗಿದೆ.

  ಸಿನಿಮಾ ಹೆಸರೇನೋ ಕ್ರೇಜಿಲೋಕ. ಜೊತೆಗೆ, 'ಅಂದು ಪ್ರೇಮ ಲೋಕ, ಇಂದು...ಎಂಬ ಮೇಲ್ಬರಹ ಬೇರೆ. ಆದರೆ, ಪ್ರಚಾರ ನೋಡಿದರೆ ಇದು ಅಪ್ಪಟ 'ರಮ್ಯಾ ಲೋಕ' ಎನ್ನಬಹುದು. ಆದರೆ ಇದು ರಮ್ಯಾ ಚಿತ್ರವಲ್ಲ ಎಂಬುದನ್ನು ಒಳಹೋಗುವ ಪ್ರೇಕ್ಷಕರು ಮೆಯಲಾರರರು ಎಂಬುದು ಕವಿತಾ ಮರೆಯಬಾರದು. ಒಮ್ಮೆ ಹೋದರೂ, ಹೊರಹೋಗುವ ಮುನ್ನ ಸತ್ಯ ಗೊತ್ತಾಗಿಬಿಡುತ್ತದೆ!

  ಒಟ್ಟಿನಲ್ಲಿ ಮುಹೂರ್ತದ ಮಟ್ಟಿಗೆ ಕ್ರೇಜಿಲೋಕವಾಗಿದ್ದ ಕವಿತಾ ಲಂಕೇಶ್ ಚಿತ್ರ, ಬಿಡುಗಡೆಯಾಗುವ ಹೊತ್ತಿಗೆ 'ರಮ್ಯಾ ಲೋಕ'ವಾಗಿದೆ. ಅಥವಾ ಇನ್ನೂ ಸ್ಪಷ್ಟವಾಗಿ ಪ್ರಚಾರದ ಹೊತ್ತಿಗೆ ರಮ್ಯಾ ಲೋಕವೇ ಆಗಿದೆ ಎನ್ನಬಹುದು. ಆದರೆ ಚಿತ್ರತಂಡಕ್ಕೆ ಯಶಸ್ಸು, ಬಿಜಿನೆಸ್ ಮುಖ್ಯವಾಗಿದ್ದಾಗ ಉಳಿದದ್ದೆಲ್ಲಾ ಸಹಜವಾಗಿ ಗೌಣ ತಾನೆ?

  ಒಟ್ಟಿನಲ್ಲಿ, ಚಿತ್ರ ನಾಳೆಯೇ ಬಿಡುಗಡೆಯಾಗುತ್ತಿದೆ. ಚಿತ್ರತಂಡದ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಇದೆ. ಚಿತ್ರಕ್ಕೆ ಓಪನಿಂಗ್ ಸಿಗಲು ರಮ್ಯಾ ಇದ್ದಾರೆ. ಚಿತ್ರ ಚೆನ್ನಾಗಿದ್ದರೆ ನೋಡಲು ಖಂಡಿತವಾಗಿಯೂ ಕನ್ನಡ ಪ್ರೇಕ್ಷಕರಿದ್ದಾರೆ. ಎಲ್ಲವೂ ಇದ್ದ ಮೇಲೆ ಕವಿತಾ ಲಂಕೇಶ್ ಸಿನಿಮಾ ಗೆಲ್ಲದಿರುತ್ತದೆಯೇ? ಕ್ರೇಜಿಲೋಕ ಗೆಲ್ಲುತ್ತದೆ ಎಂಬುದು ಎಲ್ಲರ ಸದ್ಯದ ಲೆಕ್ಕಾಚಾರ. (ಒನ್ ಇಂಡಿಯಾ ಕನ್ನಡ)

  English summary
  Kavitha Lankesh movie Crazy Loka releases on tomorrow (June 08, 2012). Ramya acted in a Dance in this movie. But, in the movie Promotions, every where only Ramya. Daisy Boppanna and Harshika Poonachcha are missing from the promotions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X