ಇನ್ನೆರಡು ತಿಂಗಳಲ್ಲಿ ಡಿಬಾಸ್ ಜೈಲಿನಿಂದ ಬಿಡುಗಡೆ ಆಗಿ ಬರ್ತಾರೆ; ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿರುವ ಆರೋಪಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಬಿಡುಗಡೆ ಆಗಿದ್ದವರಿಗೆ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಶಾಟ್ ಕೊಟ್ಟಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುವಂತಾಯಿತು.
ಇಂದು(ಫೆಬ್ರವರಿ 16) ದರ್ಶಬ್ 49ನೇ ವರ್ಷದ ಹುಟ್ಟುಹಬ್ಬ. ಇದೇ ಮೊದಲ ಬಾರಿಗೆ ಹುಟ್ಟುಹಬ್ಬದ ಸಮಯದಲ್ಲಿ ದರ್ಶನ್ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಅಭಿಮಾನಿಗಳು ಹಾಗೂ ಆಪ್ತರಿಗೆ ಇದು ಬಹಳ ಬೇಸರ ಮೂಡಿಸಿದೆ. ದರ್ಶನ್ ಯಾವಾಗ ಜೈಲಿನಿಂದ ಹೊರ ಬರುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನೆರಡು ತಿಂಗಳಲ್ಲಿ ಡಿಬಾಸ್ ಬಿಡುಗಡೆ ಆಗಿ ಹೊರಬರ್ತಾರೆ ಎಂದು ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆಯು ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸಾಕ್ಷಿಗಳ ವಿಚಾರಣೆ ಮತ್ತು ಕ್ರಾಸ್ ಎಕ್ಸಾಮಿನೇಷನ್ ನಡೆಯುತ್ತಿದ್ದು, ದರ್ಶನ್ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದಾರೆ. ವಿಚಾರಣೆ ಮುಂದೂಡಲಾಗಿದೆ. ವಿಚಾರಣೆ ಆರಂಭವಾಗಿರುವ ಹಿನ್ನಲೆಯಲ್ಲಿ ಆದಷ್ಟು ಬೇಗ ದರ್ಶನ್ ಜಾಮೀನು ಪಡೆದು ಹೊರ ಬರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಗಂಭೀರ ಪ್ರಕರಣ ಆಗಿರುವುದರಿಂದ ಜಾಮೀನು ಸಿಗುವುದು ಕಷ್ಟ ಎನ್ನುವುದು ಕೆಲವರ ವಾದ.
ದರ್ಶನ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ಆತ್ಮೀಯ ಒಡನಾಟವಿದೆ. ತಂದೆ- ಮಗ ಎನ್ನುವಂತಹ ಬಾಂಧವ್ಯ ಇದೆ. ಕುಣಿಗಲ್ ಬಿದನಗೆರೆ ಪಂಚಮುಖಿ ಆಂಜನೇಯ ಶಿವರಾತ್ರಿ ಸ್ವರಾಭಿಷೇಕ ಸಮಾರಂಭದಲ್ಲಿ ರವಿಚಂದ್ರನ್ ಅತಿಥಿಯಾಗಿ ಭಾಗಿ ಆಗಿದ್ದರು. ವೇದಿಕೆ ಏರಿದಾಗ ಕೆಲ ಅಭಿಮಾನಿಗಳು ಡಿಬಾಸ್.. ಡಿಬಾಸ್ ಎಂದು ಕೂಗಲು ಆರಂಭಿಸಿದ್ದರು. ಕೂಡಲೇ ಅವರನ್ನು ಉದ್ದೇಶಿಸಿ "ಡಿಬಾಸ್ ಹೊರ ಬರ್ತಾರೆ ಬಿಡೋ.. ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರಂತೆ" ಎಂದಿದ್ದಾರೆ. ರವಿಚಂದ್ರನ್ ಮಾತು ಕೇಳಿ ನೆರೆದಿದ್ದ ಜನ ಓಹ್ ಎಂದು ಕೂಗಿದ್ದಾರೆ.
ಮಾತು ಮುಂದುವರೆಸಿರುವ ರವಿಚಂದ್ರನ್ "ಈ ಬಾಯಲ್ಲಿ ಹೇಳಿದ್ದೀನಿ. ಬರ್ತಾರೆ ನೆನಪಿಟ್ಕೊ. ನಿನಗೇನೋ ಡಿಬಾಸ್.. ಆ ಡಿಬಾಸ್ ನನಗೆ ಮಗ ನೆನಪಿರಲಿ.. ಬರ್ತಾರೆ.. ನೋಡ್ತಾಯಿರಿ.. ಒಂದು ಕೆಟ್ಟ ಘಳಿಗೆ.. ಅದು ಮನುಷ್ಯನನ್ನು ಕುಗ್ಗಿಸುತ್ತೆ.. ಅಷ್ಟು ಆಳಕ್ಕೆ ಕುಗ್ಗಿಸುವಾಗ ಯಾವಾಗಲೋ ಒಂದು ದಿನ ಮೇಲೆ ಎಬ್ಬಿಸಬೇಕು. ಅದಕ್ಕೆ ಎಲ್ಲರೂ ಕಾಯೋಣ.. ಎಲ್ಲರೂ ಮನಸ್ಸಿನಲ್ಲಿಟ್ಟುಕೊಂಡು ಪೂಜೆ ಮಾಡಿ, ಬರ್ತಾರೆ" ಎಂದು ರವಿಚಂದ್ರನ್ ಭವಿಷ್ಯ ನುಡಿದಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಪಡೆದು ಹೊರಬರುವ ಪ್ರಯತ್ನ ಮುಂದುವರೆಸಿದ್ದಾರೆ. ಮಗಳ ಪರೀಕ್ಷೆ ನೆಪವೊಡ್ಡಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಆಕೆಯ ಮನವಿಯನ್ನು ಕೋರ್ಟ್ ನಿರಾಕರಿಸಿದೆ. ಹಾಗಾಗಿ ಆಕೆಯ ಜೈಲುವಾಸ ಮುಂದುವರೆಯಲಿದೆ. ಗಂಭೀರ ಪ್ರಕರಣ ಆಗಿರುವುದರಿಂದ ಆರೋಪಿಗಳಿಗೆ ಅಷ್ಟು ಸುಲಭವಾಗಿ ಜಾಮೀನು ಸಿಗಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ದರ್ಶನ್ ಜೊತೆ 'ಕುರುಕ್ಷೇತ್ರ' ಹಾಗೂ 'ಕ್ರಾಂತಿ' ಚಿತ್ರಗಳಲ್ಲಿ ರವಿಚಂದ್ರನ್ ನಟಿಸಿದ್ದರು. ದರ್ಶನ್, ರಕ್ಷಿತಾ ನಟನೆಯ 'ಅಯ್ಯ' ಚಿತ್ರಕ್ಕೆ ಕ್ರೇಜಿಸ್ಟಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್‌ಗೆ ಶುಭಾಶಯ ಕೋರುತ್ತಿದ್ದಾರೆ. ಕೆಲವರು ಆರ್‌ಆರ್ ನಗರದ ಮನೆ ಬಳಿ ಹೋಗಿ ಜೈಕಾರ ಕೂಗಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಸ್ಪೆಷಲ್ ಪೋಸ್ಟ್ ಮಾಡಿದ್ದಾರೆ. ಇನ್ನುಳಿದಂತೆ ನಟಿ ರಕ್ಷಿತಾ ಪ್ರೇಮ್, ನಿರ್ದೇಶಕ ತರುಣ್ ಸುಧೀರ್ ಸೇರಿ ದರ್ಶನ್ ಆಪ್ತರು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಯ ಕೋರಿದ್ದಾರೆ. ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.


Click it and Unblock the Notifications











