ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.!
Recommended Video

'ಕರಾಟೆ ಕಿಂಗ್' ಶಂಕರ್ ನಾಗ್ ನಮ್ಮನ್ನೆಲ್ಲ ಅಗಲಿ ಹತ್ತತ್ರ ಮೂರು ದಶಕಗಳು ಉರುಳುತ್ತಾ ಬಂತು. ಆದರೂ, ಶಂಕರ್ ನಾಗ್ ಇನ್ನೂ ಹಲವರ ಹೃದಯದಲ್ಲಿ ಜೀವಂತವಾಗಿದ್ದಾರೆ.
ಕೇವಲ ಚಿತ್ರ ನಟ, ನಿರ್ದೇಶಕನಾಗಿ ಮಾತ್ರ ಅಲ್ಲದೇ.. ಸಮಾಜಕ್ಕೆ ಒಳಿತು ಮಾಡುವ ಹಲವಾರು ಯೋಜನೆಗಳನ್ನು ಶಂಕರ್ ನಾಗ್ ರೂಪಿಸಿದ್ದರು. ಸದಾ ಮುಂದಾಲೋಚಿಸುತ್ತಿದ್ದ ಶಂಕರ್ ನಾಗ್ ಬಗ್ಗೆ ರವಿಚಂದ್ರನ್ ಮನಬಿಚ್ಚಿ ಮಾತನಾಡಿದ್ದಾರೆ.
ದೊಡ್ಡ ವಿವಾದವೊಂದರಲ್ಲಿ ರವಿಚಂದ್ರನ್ ಸಿಲುಕಿದ್ದಾಗ, ಅವರಿಗೆ ಧೈರ್ಯ ತುಂಬಿದ್ದು ಶಂಕರ್ ನಾಗ್. ಹೀಗಾಗಿ ಶಂಕ್ರಣ್ಣ ರವರನ್ನ ರವಿಚಂದ್ರನ್ ಸದಾ ನೆನಪಿಸಿಕೊಳ್ಳುತ್ತಾರೆ.
'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರ ಸ್ಪೆಷಲ್ ರೌಂಡ್ ನಲ್ಲಿ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್, ಶಂಕರ್ ನಾಗ್ ಬಗ್ಗೆ ಹೇಳಿದ್ದು ಹೀಗೆ....

ಮೈ ಜುಂ ಅನ್ನುತ್ತೆ
''ಶಂಕರ್ ನಾಗ್ ಬಗ್ಗೆ ಮಾತನಾಡುವಾಗ ಮೈ ಜುಂ ಅನ್ನುತ್ತೆ. He is the man who always chased time. ಸಮಯಕ್ಕೂ ಅವರನ್ನು ಕಂಡ್ರೆ ಹೊಟ್ಟೆ ಉರಿಯೋದು. ನಾನೊಂದು ಸಮಸ್ಯೆಯಲ್ಲಿ ಸಿಲುಕಿದ್ದೆ. ಭಾಷೆ ಬಗ್ಗೆ ಮಾತನಾಡಿದ್ದೆ ಅಂತ ತುಂಬಾ ದೊಡ್ಡ ಗೊಂದಲ ಆಗಿತ್ತು. ನನಗೆ ಅದು ತುಂಬಾ ಡಿಸ್ಟರ್ಬಿಂಗ್ ಪೀರಿಯಡ್. ಎಲ್ಲೂ ಹೊರಗೆ ಹೋಗಲು ಆಗುತ್ತಿರಲಿಲ್ಲ. ಆ ತರಹ ಪರಿಸ್ಥಿತಿ ಉಂಟಾಗಿತ್ತು'' - ರವಿಚಂದ್ರನ್

ಹುಡುಕಿಕೊಂಡು ಬಂದಿದ್ದ ಶಂಕರ್ ನಾಗ್
''ಸಮಸ್ಯೆ ಆದಾಗ ಪರಿಚಯದವರು ಕೂಡ ಹತ್ತಿರ ಬರಲ್ಲ. ದೂರ ಇರುತ್ತಾರೆ. ಭಾಷೆ ಸಮಸ್ಯೆ ಬಂದ್ರಂತೂ ಹೇಗೆ ಹ್ಯಾಂಡಲ್ ಮಾಡುವುದು ಎನ್ನುವುದೇ ದೊಡ್ಡ ಟೆನ್ಷನ್. ಆಗ ನಾನು ಮೈಸೂರಿನಲ್ಲಿ ಶೂಟಿಂಗ್ ನಲ್ಲಿದ್ದೆ. ಆಗ ಶಂಕರ್ ನಾಗ್ ನನ್ನನ್ನ ಹುಡುಕಿಕೊಂಡು ಬಂದಿದ್ದರು'' - ರವಿಚಂದ್ರನ್

ಧೈರ್ಯ ತುಂಬಿದ ಶಂಕರ್ ನಾಗ್
''ಯಾಕೆ ಹೆದರಿಕೊಳ್ಳುತ್ತೀಯಾ.. ಧೈರ್ಯವಾಗಿ ಬಾ ನೀನು.. ಜನ ನಿನ್ನನ್ನು ಇಷ್ಟ ಪಡುತ್ತಾರೆ. ನಿನ್ನಲ್ಲಿ ಏನಿದೆಯೋ, ಅದನ್ನ ಜನರ ಮುಂದೆ ಹೇಳು..'' ಅಂತ ಧೈರ್ಯ ತುಂಬಿದರು. ನಿರೀಕ್ಷೆ ಮಾಡಿದವರು ಬರಲಿಲ್ಲ. ಆದ್ರೆ, ಶಂಕರ್ ನಾಗ್ ಬಂದು ನನಗೆ ಧೈರ್ಯ ನೀಡಿದ್ದರು'' - ರವಿಚಂದ್ರನ್

ಶಂಕರ್ ನಾಗ್ ಬಗ್ಗೆ ರವಿಚಂದ್ರನ್ ಮಾತು
''ಸಮಾಜಕ್ಕಾಗಿ ಅವರು ಅಹೆಡ್ ಆಗಿ ಥಿಂಕ್ ಮಾಡಿದವರು. ನಂದಿ ಹಿಲ್ಸ್ ಗೆ ಕೇಬಲ್ ಕಾರ್ ಕನೆಕ್ಷನ್ ಕೊಡಬೇಕು ಅಂತಿದ್ದರು. ಮೂವತ್ತು ಸಾವಿರದಲ್ಲಿ ಮನೆ ಕಟ್ಟುವ ಯೋಜನೆ ಮಾಡಿದ್ದರು. ಅವರ ಎಷ್ಟೋ ಒಳ್ಳೆಯ ವಿಷಯಗಳು ಹೊರಗೆ ಬರಲಿಲ್ಲ. ನಮಗೆಲ್ಲ ಅವರು ಪಾಠ ಮಾಡಿದವರು'' - ರವಿಚಂದ್ರನ್


Click it and Unblock the Notifications











