ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕನ್ನಡಕ್ಕೆ, ಚಂದನ್ ಶೆಟ್ಟಿ ಜೊತೆ ವಿಡಿಯೋ ಸಾಂಗ್
ಮನುಷ್ಯಕುಲದ ಸಕಲ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ರ್ಯಾಪ್ ಹಾಡುಗಳ ಮೂಲಕ ಅನೇಕರು ಗಮನ ಸೆಳೆದಿದ್ದಾರೆ. ಕನ್ನಡದಲ್ಲಿಯೂ ಕೂಡ ''ಆಲ್ ಓಕೆ''.. ''ರಾಹುಲ್ ಡೀಟೋ''.. ''ರಾಹುಲ್ ಡಿಟೋ'' ..''ಎಂಸಿ ಬಿಜ್ಜು''.. ''ರಾಕೇಶ್ ಅಡಿಗ'' ಸೇರಿ ಅನೇಕರು ಬದುಕು ರೂಪಿಸಿಕೊಂಡಿದ್ದಾರೆ. ಆ ಪೈಕಿ ''ಚಂದನ್ ಶೆಟ್ಟಿ'' ಕೂಡ ಒಬ್ಬರು.
ಹೌದು, ಚಂದನ್ ಶೆಟ್ಟಿ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ- ಗಾಯಕ. ನಾಯಕನಾಗಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಚಂದನ್ ಶೆಟ್ಟಿ ಸಂಗೀತ ಲೋಕದಲ್ಲಿ ಇಲ್ಲಿಯವರೆಗೆ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ''ಹಾಳಾಗೋದೇ''.. ''ಮೂರೇ ಮೂರು ಪೆಗ್ಗಿಗೆ''.. ''ಚಾಕ್ಲೇಟ್ ಗರ್ಲ್''.. ''ಟಕೀಲಾ''.. ''ಲಕ ಲಕ ಲ್ಯಾಂಬೋರಗೀನಿ''.. ''ಕಾಟನ್ ಕ್ಯಾಂಡಿ''.. ಹೀಗೆ ಹಲವು ರ್ಯಾಪ್ ಸಾಂಗ್‌ಗಳನ್ನು ಕನ್ನಡಿಗರ ಮಡಿಲಿಗೆ ಹಾಕಿದ್ದಾರೆ. ತಮ್ಮ ಈ ಹಾಡುಗಳಿಂದ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.

ಇನ್ನೂ ಚಂದನ್ ಶೆಟ್ಟಿ ಹಾಡುಗಳಂದರೆ ಅಲ್ಲಿ ಅದ್ಧೂರಿತನ ಇರುತ್ತೆ. ''ಐಂದ್ರೀತಾ ರೇ''.. ''ನೇಹಾ ಶೆಟ್ಟಿ''.. ''ರಚಿತಾ ರಾಮ್''.. ''ನಿಶ್ವಿಕಾ ನಾಯ್ಡು''.. ಹೀಗೆ ಸ್ಟಾರ್ ನಾಯಕಿಯರು ಚಂದನ್ ಶೆಟ್ಟಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಥಾ ಚಂದನ್ ಶೆಟ್ಟಿ ಇದೀಗ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಂತಕಥೆ ''ಕ್ರೀಸ್ ಗೇಲ್'' ಈ ಬಾರಿ ಚಂದನ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ.
''ಕ್ರಿಸ್ ಗೇಲ್'' ಖುದ್ದು ಈ ವಿಚಾರವನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ಚಂದನ್ ಶೆಟ್ಟಿ ಅವರನ್ನು ರಾಕ್ ಸ್ಟಾರ್ ಎಂದು ಕರೆದು ಪರಿಚಯ ಮಾಡಿಸಿದ್ದಾರೆ. ಆ ನಂತರ ಚಂದನ್ ಶೆಟ್ಟಿ ಮಾತನಾಡಿದ್ದು ನಾವು ಒಂದು ಹಾಡು ಮಾಡುತ್ತಿದ್ದೇವೆ. ಅದರ ಹೆಸರು ''ಲೈಫ್ ಈಸ್ ಕೆಸಿನೋ''. ಯೂನಿವರ್ಸಲ್ ಬಾಸ್ ಜೊತೆ ಈ ಹಾಡು ಮಾಡುತ್ತಿರುವುದಕ್ಕೆ ನಾನು ತುಂಬಾನೇ ಎಗ್ಸೈಟ್ ಆಗಿದ್ದೇನೆ. ರ್ಯಾಪ್ ಭಾಗವನ್ನು ಅದ್ಭುತವಾಗಿ ಅವರು ಮಾಡಿ ಕೊಟ್ಟಿದ್ದಾರೆ, ಇವರ ರ್ಯಾಪ್‌ಗೆ ನಾನು ಈಗಾಗಲೇ ಫ್ಯಾನ್ ಆಗಿದ್ದೇನೆ, ನಿಮ್ಮೆಲ್ಲರಿಗೆ ಕೂಡ ಈ ಹಾಡು ತುಂಬಾನೇ ಇಷ್ಟವಾಗುತ್ತೆ ಎಂದಿದ್ದಾರೆ.
ಇನ್ನು ಕ್ರಿಸ್ ಗೇಲ್ ಈ ಹಾಡಿನ ವಿಚಾರದಲ್ಲಿ ತುಂಬಾ ಖುಷಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಅಲ್ಲಿಯವರೆಗೆ ಕಾಯಿರಿ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆಯುತ್ತಿದ್ದು, ಹಲವಾರು ಜನ ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಏನ್ ಗುರು ನಿನ್ ಲೆವೆಲ್ ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮಿಬ್ಬರ ಕಾಂಬಿನೇಷನ್‌ನಲ್ಲಿ ಹಾಡನ್ನು ನಾವು ನಿರೀಕ್ಷೆಯೇ ಮಾಡಿರಲಿಲ್ಲ ಎನ್ನುತ್ತಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕಳೆದ ವರ್ಷ ತಮ್ಮ ದಾಂಪತ್ಯ ಜೀವನದಿಂದ ಸುದ್ದಿಯಾಗಿದ್ದವರು ಚಂದನ್ ಶೆಟ್ಟಿ. ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಸದ್ಯ ತಮ್ಮ ಬದುಕನ್ನು ತಮ್ಮ ಇಷ್ಟದಂತೆಯೇ ಬದುಕುತ್ತಿದ್ದಾರೆ. ಈ ಹಿನ್ನೆಲೆ ಹಲವರು ಚಂದನ್ ಶೆಟ್ಟಿ ಅವರ ಈ ಬೆಳವಣಿಗೆಯನ್ನು ಮೆಚ್ಚಿಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಚ್ಛೇದನದ ನಂತರ ಚಂದನ್ ಮತ್ತೆ ಮೊದಲಿನ ಲಯಕ್ಕೆ ಮರಳಿದ್ದಾರೆ. ಹೊಸ ಹೊಸ ಪ್ರಯತ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಖುಷಿಯನ್ನು ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಹಾಡಿನ ಚಿತ್ರೀಕರಣದ ಕುರಿತು ಚಂದನ್ ಶೆಟ್ಟಿ ಅಥವಾ ಕ್ರಿಸ್ ಗೇಲ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರು ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಹಾಡಿನ ಸುತ್ತ ಕುತೂಹಲ ಗರಿಗೇದರಿದೆ.


Click it and Unblock the Notifications











