ಶಿವರಾಂ ಬಗ್ಗೆ ಅಪರೂಪದ ಮಾಹಿತಿ ಹಂಚಿಕೊಂಡ ಅನಿಲ್ ಕುಂಬ್ಳೆ
ಶಿವರಾಂ ನಿಧನದ ಬಗ್ಗೆ ಸಿನಿಮಾ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ಗಣ್ಯರು ಶಿವರಾಂ ಅವರ ತ್ಯಾಗರಾಜನಗರದ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
ಹಲವು ಗಣ್ಯರು ಶಿವರಾಂ ಅವರೊಟ್ಟಿಗಿನ ತಮ್ಮ ಅನುಬಂಧದ ಬಗ್ಗೆ ಮಾತನಾಡಿದ್ದಾರೆ. ಶಿವರಾಂ ಅವರ ಬಗ್ಗೆ ಪ್ರೀತಿಯ ಮಾತನ್ನಾಡಿದ್ದಾರೆ. ಶಿವರಾಂ ಅವರ ಕುಟುಂಬಕ್ಕೆ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.
ಜನಪ್ರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಶಿವರಾಂ ಅವರೊಟ್ಟಿಗೆ ಬಹಳ ಆತ್ಮೀಯ ಗೆಳೆತನ ಹೊಂದಿದ್ದರು. ಹಾಗಾಗಿ ಅನಿಲ್ ಕುಂಬ್ಳೆಯವರು ಪತ್ನಿಯೊಟ್ಟಿಗೆ ಶಿವರಾಂ ನಿವಾಸಕ್ಕೆ ಆಗಮಿಸಿ ಅವರ ಅಂತಿಮ ದರ್ಶನ ಪಡೆದರು.

ಈ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅನಿಲ್ ಕುಂಬ್ಳೆ, ''ಶಿವರಾಮಣ್ಣ ನಮ್ಮ ಕುಟುಂಬಕ್ಕೆ ಬಹಳ ಬೇಕಾದ ವ್ಯಕ್ತಿ. ಸದಾ ಮನೆಗೆ ಬಂದಾಗ ತಮಾಷೆಯಾಗಿ ಮಾತನಾಡುತ್ತಾ, ತಾವೂ ನಗುತ್ತಾ, ನಮ್ಮನ್ನು ನಗಿಸುತ್ತಿದ್ದರು. ಶಿವರಾಂ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಜ್ಞಾನದ ಗಣಿಯಂತಿದ್ದರು. ಅವರ ಅಗಲಿಕೆ ಚಿತ್ರರಂಗಕ್ಕೆ ಬಹಳ ದೊಡ್ಡ ನಷ್ಟ'' ಎಂದರು ಅನಿಲ್ ಕುಂಬ್ಳೆ.
''ಯಾವುದೇ ಕಾರ್ಯಕ್ರಮವಾಗಲಿ, ಮನೆಯಲ್ಲಿ ಪೂಜೆಯಾಗಲಿ ಶಿವರಾಮಣ್ಣ ಅಲ್ಲಿರಬೇಕಿತ್ತು. ಕ್ರಿಕೆಟ್ ಬಗ್ಗೆಯೂ ಆಸಕ್ತಿವುಳ್ಳವರಾಗಿದ್ದ ಶಿವರಾಮಣ್ಣ, ಮ್ಯಾಚ್‌ಗಳನ್ನು ನೋಡಲು ಸಹ ಬರುತ್ತಿದ್ದರು. ನಮ್ಮನ್ನು ಹುರಿದುಂಬಿಸುತ್ತಿದ್ದರು. ಎಲ್ಲೇ ಸಿಗಲಿ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ನಿಧನ ನನಗೆ ತೀವ್ರ ಬೇಸರ ತಂದಿದೆ'' ಎಂದರು ಕುಂಬ್ಳೆ.
''ಅವರು ಫೋಟೊಗ್ರಫಿ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ನನ್ನನ್ನು ಸದಾ ಮನೆಗೆ ಆಹ್ವಾನಿಸುತ್ತಲೇ ಇದ್ದರು. ಅವರು ಸ್ವತಃ ಸ್ಟ್ಯಾಂಪ್ ಕಲೆಕ್ಷನ್ ಮಾಡುತ್ತಿದ್ದರು. ಪುಸ್ತಕಗಳನ್ನು ಸಂಗ್ರಹಿಸಿ ಓದುತ್ತಿದ್ದರು. ನಮ್ಮ ಮನೆಗೆ ಬನ್ನಿ ನನ್ನ ಗ್ರಂಥಾಲಯ ನೋಡಿ, ನಾನು ತೆಗೆದ ಚಿತ್ರಗಳನ್ನು ನೋಡಿ, ಸ್ಟ್ಯಾಂಪ್ ಕಲೆಕ್ಷನ್ ನೋಡಿ ಎನ್ನುತ್ತಿದ್ದರು. ಫೋಟೊಗ್ರಫಿ ಮಾಡಲು ಅರಣ್ಯಕ್ಕೆ ಹೋಗೋಣ ಎಂದು ಸಹ ನನಗೆ ಹೇಳಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ'' ಎಂದು ಅನಿಲ್ ಕುಂಬ್ಳೆ ಬೇಸರದಿಂದ ನುಡಿದರು.
ಶಿವರಾಂ ಅಗಲಿಕೆ ಬಗ್ಗೆ ಟ್ವೀಟ್ ಸಹ ಮಾಡಿರುವ ಅನಿಲ್ ಕುಂಬ್ಳೆ, ''ಶಿವರಾಮ ಅಣ್ಣನ ಅಗಲಿಕೆಯಿಂದ ಅತೀವ ದುಃಖವಾಗಿದೆ. ಅವರು ವಿಶ್ವಕೋಶವಾಗಿದ್ದರು, ಶ್ರೀಮಂತ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಸಂತಾಪಗಳು'' ಎಂದಿದ್ದಾರೆ.
ಸದಾ ಸಕ್ರಿಯರಾಗಿರುತ್ತಿದ್ದ ಶಿವರಾಂ ಅವರಿಗೆ ಫೋಟೊಗ್ರಫಿಯ ಮೇಲೆ ಬಹಳ ಆಸಕ್ತಿ ಇತ್ತು. ಫೊಟೊಗ್ರಾಫರ್‌ಗಳ ಗುಂಪು ಮಾಡಿಕೊಂಡು ಕಾಡು, ನೈಸರ್ಗಿಕ ತಾಣಗಳು, ಐತಿಹಾಸಿಕ ತಾಣಗಳಿಗೆ ಪ್ರವಾಸ ಹೋಗಿ ಅಲ್ಲಿ ಫೊಟೊಗ್ರಫಿ ಮಾಡುತ್ತಿದ್ದರು.


Click it and Unblock the Notifications











