'ಅಲ್ಟಿಮೇಟ್ ಬಾಸ್ ಅಂದ್ರೆ ಅದು ಕಿಚ್ಚ ಬಾಸ್ ಮಾತ್ರ' ಎಂದು ಹೊಗಳಿದ ಭಾರತದ ಕ್ರಿಕೆಟಿಗ!
ಕ್ರಿಕೆಟ್ ಕ್ಷೇತ್ರಕ್ಕೂ ಹಾಗೂ ಮನರಂಜನಾ ಲೋಕಕ್ಕೂ ಈ ಹಿಂದಿನಿಂದಲೂ ಏನೋ ಅವಿನಾಭಾವ ಸಂಬಂಧ. ಸಿನಿಮಾ ನಟರು ಕ್ರಿಕೆಟ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಭಾಗವಹಿಸುವುದು ಹಾಗೂ ಸಿನಿಮಾಗಳ ಟ್ರೈಲರ್ ಲಾಂಚ್ ಹಾಗೂ ಸೆಲೆಬ್ರಿಟಿ ಪ್ರೀಮಿಯರ್ ಶೋಗಳಿಗೆ ಕ್ರಿಕೆಟಿಗರು ಬಂದು ಸಿನಿಮಾ ವೀಕ್ಷಿಸುವುದು ಕಾಮನ್ ಆಗಿಬಿಟ್ಟಿದೆ.
ಇನ್ನು ಮನರಂಜನಾ ಕ್ಷೇತ್ರದಲ್ಲಿಯೂ ಸಹ ಕ್ರಿಕೆಟ್ ಫೀವರ್ ಜೋರಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾದಾಗಿನಿಂದಂತೂ ಈ ನಂಟು ತುಸು ದೊಡ್ಡ ಮಟ್ಟವನ್ನೇ ತಲುಪಿದೆ ಎನ್ನಬಹುದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಗಳು ಸದ್ದು ಮಾಡಲಾರಂಭಿಸಿದ ಬಳಿಕ ಸ್ಟಾರ್ ಆಟಗಾರರು ಹಾಗೂ ಸಿನಿಮಾ ಸ್ಟಾರ್‌ಗಳು ಆಗಾಗ ವಿವಿಧ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಹಾಗೂ ವಿವಿಧ ಊರುಗಳಿಗೆ ಬಂದಾಗ ಪರಸ್ಪರ ಭೇಟಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ.

ಇನ್ನು ಕನ್ನಡ ಚಿತ್ರರಂಗದ ವಿಚಾರದಲ್ಲಿ ಈ ರೀತಿ ಸ್ಟಾರ್ ಕ್ರಿಕೆಟಿಗರ ಜತೆ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿರುವುದು ಹಾಗೂ ಹೆಚ್ಚು ಕ್ರಿಕೆಟಿಗರ ಪರಿಚಯ ಇರುವುದು ಕಿಚ್ಚ ಸುದೀಪ್‌ಗೆ ಮಾತ್ರ ಎಂದೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್ ಕ್ರೇಜ್ ಅನ್ನು ಹೆಚ್ಚಿಸಿ, ಕನ್ನಡ ಚಲನಚಿತ್ರ ಕಪ್ ಸೇರಿದಂತೆ ಕೆಲವು ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಗಳು ನಡೆದಿವೆ ಎಂದರೆ ಅದಕ್ಕೆ ಸುದೀಪ್ ಬಹುಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
ಹೀಗೆ ಸ್ಟಾರ್ ಕ್ರಿಕೆಟಿಗರ ಜತೆ ಉತ್ತಮ ಒಡನಾಟ ಹೊಂದಿರುವ ಕಿಚ್ಚ ಸುದೀಪ್ ಎಂದರೆ ಆ ಕ್ರಿಕೆಟಿಗರಿಗೂ ಸಹ ಅಷ್ಟೇ ಪ್ರೀತಿ. ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಅನೇಕ ಕ್ರಿಕೆಟಿಗರು ತಪ್ಪದೇ ಕಿಚ್ಚನ ಮನೆಗೆ ಭೇಟಿ ನೀಡಿ, ಭೋಜನ ಸವಿದು ಒಳ್ಳೆಯ ಸಮಯ ಕಳೆದು ನಂತರ ಅದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಅದೇ ರೀತಿ ಇದೀಗ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಪೃಥ್ವಿ ಶಾ ಸಹ ಸಾಮಾಜಿಕ ಜಾಲತಾಣದಲ್ಲಿ ನಟ ಕಿಚ್ಚ ಸುದೀಪ್ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಹೌದು, ಬೆಂಗಳೂರಿಗೆ ಭೇಟಿ ನೀಡಿರುವ ಪೃಥ್ವಿ ಶಾ ಕಿಚ್ಚ ಸುದೀಪ್ ಭೇಟಿ ಮಾಡಿ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಿಚ್ಚನನ್ನು ಅಪ್ಪಿಕೊಂಡಿರುವ ಫೋಟೊವನ್ನು ಶೇರ್ ಮಾಡಿರುವ ಪೃಥ್ವಿ ಶಾ "ದ ಅಲ್ಟಿಮೇಟ್ ಬಾಸ್! ಕಿಚ್ಚ ಬಾಸ್! ಪ್ರೀತಿಯ ಮನುಜ. ಇವರನ್ನು ಭೇಟಿ ಮಾಡುವುದು ಹಾಗೂ ಒಟ್ಟಿಗೆ ಸಮಯ ಕಳೆಯುವುದು ಯಾವಾಗಲೂ ವಿಶೇಷ" ಎಂದು ಬರೆದುಕೊಂಡಿದ್ದಾರೆ.
ಇನ್ನು ಪೃಥ್ವಿ ಶಾ ಅವರ ಈ ಪೋಸ್ಟ್ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದು ಫೇಸ್‌ಬುಕ್ ಹಾಗೂ ಟ್ವಿಟರ್ ವೇದಿಕೆಗಳಲ್ಲಿ ಹಂಚಿಕೊಂಡು ಇದು ನಮ್ಮ ನಟನ ರೇಂಜ್ ಎಂದು ಹೆಮ್ಮಯಿಂದ ಬರೆದುಕೊಂಡಿದ್ದಾರೆ.
ಅಲ್ಲದೇ ವಿವಾದದ ನಡುವೆಯೂ ಕಿಚ್ಚ ಸುದೀಪ್ ಯಾವುದೇ ಟೆನ್ಷನ್‌ಗೆ ಒಳಗಾಗದೇ ಈ ರೀತಿ ಸಂತಸದಿಂದ ಇರುವುದನ್ನು ಕಂದು ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನಿಮ್ಮ ವಿರುದ್ಧ ಯಾರು ಏನೇ ಪಿತೂರಿ ಮಾಡಿದರೂ ನಿಮಗೆ ಯಾವುದೇ ಕೇಡು ತಾಕಲ್ಲ, ನೆಮ್ಮದಿಯಿಂದ ಇದೇ ರೀತಿ ಸಂತೋಷದಿಂದ ಇರಿ ಬಾಸ್ ಎಂದು ಕಿಚ್ಚ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











