ನಟ ದುನಿಯಾ ವಿಜಯ್ ಜೊತೆ ಭಾರತದ ಮಹಿಳಾ ಕ್ರಿಕೆಟರ್ ಪೋಸ್
'ಭೀಮ' ಸಿನಿಮಾ ಸಕ್ಸಸ್ ಬಳಿಕ ನಟ ದುನಿಯಾ ವಿಜಯ್ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ 'ಮಾರುತ' ಬಿಡುಗಡೆಗೆ ಸಜ್ಜಾಗಿದೆ. 'ಲ್ಯಾಂಡ್‌ಲಾರ್ಡ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು 'ಸಿಟಿ ಲೈಟ್ಸ್' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಸಲಗ' ಚಿತ್ರದ ಮೂಲಕ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 'ಭೀಮ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಇದೀಗ ವಿನಯ್ ರಾಜ್‌ಕುಮಾರ್ ಹಾಗೂ ತಮ್ಮ ಪುತ್ರಿ ಮೋನಿಷಾ ನಟನೆಯ 'ಸಿಟಿ ಲೈಟ್ಸ್' ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಮೊದಲಿನಿಂದಲೂ ವಿಜಯ್ ಫಿಟ್ನೆಸ್ ಫ್ರೀಕ್. ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುವುದನ್ನು ತಪ್ಪಿಸುವುದಿಲ್ಲ. ಎಷ್ಟೇ ಬ್ಯುಸಿ ಇದ್ದರೂ ಕಸರತ್ತು ಬಿಡಲ್ಲ.

ಭಾರತದ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಇತ್ತೀಚೆಗೆ ಜಿಮ್‌ನಲ್ಲಿ ನಟ ದುನಿಯಾ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು ಚಿಕ್ಕಂದಿನಿಂದಲೂ ದುನಿಯಾ ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಅವರ ದುನಿಯಾ ಚಿತ್ರದ 'ಕರಿಯ ಐ ಲವ್ ಯು' ಹಾಡು ಬಹಳ ಇಷ್ಟ ಎಂದು ಹೇಳಿದ್ದಾರೆ. ಬಲಗೈ ಬ್ಯಾಟ್ಸ್‌ವುಮನ್ ಹಾಗೂ ಎಡಗೈ ಬೌಲರ್ ಆಗಿ ಆಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಗುರ್ತಿಸಿಕೊಂಡಿದ್ದಾರೆ.
ರಾಜೇಶ್ವರಿ ವರ್ಕೌಟ್ ಮಾಡಲು ಹೋಗಿದ್ದ ಜಿಮ್‌ನಲ್ಲೇ ದುನಿಯಾ ವಿಜಯ್ ಸಹ ವರ್ಕೌಟ್ ಮಾಡುತ್ತಿದ್ದರು ಎನಿಸುತ್ತದೆ. ಹಾಗಾಗಿ ಅಲ್ಲೇ ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. "ನಾನು ಅವರನ್ನು ಬಾಲ್ಯದಿಂದಲೂ ಟಿವಿಯಲ್ಲಿ ನೋಡುತ್ತಿದ್ದೆ, ಈಗ ಅವರನ್ನು ಭೇಟಿಯಾಗುವುದು ಮತ್ತು ನನ್ನ ಪಕ್ಕದಲ್ಲಿ ನೋಡುವುದು ತುಂಬಾ ವಿಶೇಷವೆನಿಸುತ್ತದೆ. ಅವರು ನಿಜವಾಗಿಯೂ ಬಹಳ ಹಂಬಲ್ ವ್ಯಕ್ತಿತ್ವದವರು. ಅವರನ್ನು ಭೇಟಿ ಮಾಡಿದ್ದು ಒಳ್ಳೆ ಅನುಭವ. "ಕರಿಯಾ ಐ ಲವ್ ಯೂ" ನನ್ನ ಫೇವರಿಟ್ ಹಾಡುಗಳಲ್ಲಿ ಒಂದಾಗಿದೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ವಿಜಯಪುರ ಮೂಲದ ರಾಜೇಶ್ವರಿ ಗಾಯಕ್ವಾಡ್ ಜನವರಿ 19, 2014 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಪರ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2017ರ ವರ್ಲ್ಡ್ ಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸಿತ್ತು. ಆಗ ತಂಡದಲ್ಲಿ ರಾಜೇಶ್ವರಿ ಸಹ ಇದ್ದರು.
ಇನ್ನು ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಜಡೇಶ್ ಹಂಪಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಪೆಷಲ್ ಮೇಕಿಂಗ್ ವೀಡಿಯೋ ಸಹ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿ ಸದ್ದು ಮಾಡ್ತಿದೆ.
ಚಿತ್ರದಲ್ಲಿ ಒಂದು ಗಂಭೀರ ವಿಚಾರದ ಬಗ್ಗೆ ಚರ್ಚಿಸಲಾಗುತ್ತಿದೆ. ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿಸಿದ್ದಾರೆ. 'ಮೂಕುಟ್ಟಿ ಅಮ್ಮನ್-2' ಎಂಬ ತಮಿಳು ಚಿತ್ರದಲ್ಲಿ ಸಹ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ನಯನತಾರ ಸೇರಿ ದೊಡ್ಟ ತಾರಾಗಣ ಆ ಚಿತ್ರದಲ್ಲಿದೆ. ಸಿ. ಸುಂದರ್ ಸಾರಥ್ಯ ವಹಿಸಿಕೊಂಡಿದ್ದಾರೆ.


Click it and Unblock the Notifications











