ಅಂಬಿ ಅಂತ್ಯಕ್ರಿಯೆಗೆ ಗೈರು : ಡಿಕೆಶಿ ಬಳಿ ಕಾರಣ ಹೇಳಿಕೊಂಡಿದ್ದ ರಮ್ಯಾ
ಕರುನಾಡ ಜನ ತಮ್ಮ ಪ್ರೀತಿಯ ನಾಯಕನನ್ನ ಕಳೆದುಕೊಂಡ ನೋವಿನಲ್ಲಿ ಇದ್ದಾರೆ. ಬೇಸರ, ಕಣ್ಣೀರು, ದುಃಖದ ನಡುವೆ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ, ಅಂಬರೀಶ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿರುವುದು ನಟಿ ರಮ್ಯಾ. ಅಂಬರೀಶ್ ಅವರ ಅಂತಿಮ ದರ್ಶನ ಪಡೆಯದ ರಮ್ಯಾ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ. ಮಂಡ್ಯ ಪಾಲಿಗೆ ರಮ್ಯಾ ಸತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಅಂಬರೀಶ್ ಅಂತ್ಯಕ್ರಿಯೆ: ರಮ್ಯಾಗೆ ನಾನೇ ಕಾಲ್ ಮಾಡಿ ಕರೆದಿದ್ದೆ ಎಂದ ಡಿಕೆಶಿ
ಇದಕ್ಕೆ ಉತ್ತರವಾಗಿ ರಮ್ಯಾ ಅಭಿಮಾನಿಗಳು ರಮ್ಯಾ ಗೈರಿನ ಬಗ್ಗೆ ಕಾರಣ ನೀಡಿದ್ದರು. ಆದರೆ, ಈಗ ಸಚಿವ ಡಿಕೆ ಶಿವಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಡಿಕೆಶಿ ನೀಡಿದ ಪ್ರತಿಕ್ರಿಯೆ
''ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಕಾಲು ಮೂಳೆಯ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ನಡೆದಾಡದಂತಹ ಸ್ಥಿತಿಯಲ್ಲಿದ್ದಾರೆ ಹೀಗಾಗಿ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ'' ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾಲು ನೋವು ಇರುವ ಕಾರಣ
''ರಮ್ಯಾ ಅವರಿಗೆ ನಾನೇ ಖುದ್ದಾಗಿ ದೂರವಾಣಿ ಕರೆ ಮಾಡಿದ್ದೆ, ನನಗೆ ಬರಲು ಆಗುವುದಿಲ್ಲ ಎಂದು ಅವರೇ ತಿಳಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ರಮ್ಯಾ ಅವರು ಕಾಲು ಮುರಿದುಕೊಂಡಿದ್ದು ನಡೆದಾಡದಂತಹ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಬರಲು ಆಗಿಲಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ.

ವೈದ್ಯರ ಸಲಹೆ ಪಾಲಿಸಿದ್ದಾರೆ
''ರಮ್ಯಾ ಅವರು ವೈದ್ಯರ ಸಲಹೆ ಮೇರೆಗೆ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ರಮ್ಯಾ ಅಭಿಮಾನಿಗಳು ನೀಡಿರುವ ಕಾರಣ
ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದಲೇ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ ಎಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ದಿವ್ಯ ಸ್ಪಂದನ/ರಮ್ಯಾ ಅಭಿಮಾನಿಗಳ ಕ್ಲಬ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.
ರಮ್ಯಾ ಬಗ್ಗೆ ಜಗ್ಗೇಶ್ ಟ್ವೀಟ್
ಅಂಬಿ ಅಂತ್ಯಕ್ರಿಯೆ ರಮ್ಯಾ ಬರದೇ ಇರುವ ಬಗ್ಗೆ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ''ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ!'' ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











