D57: ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದರ್ಶನ್: ಸೂಪರ್ ಹಿಟ್ ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಗರಡಿ' ಚಿತ್ರದ ಅತಿಥಿ ಪಾತ್ರದಲ್ಲೂ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ದಸರಾ ವೇಳೆಗೆ 'ಕಾಟೇರ' ರಿಲೀಸ್ ಆಗುವ ಸಾಧ್ಯತೆಯಿದೆ. ಹಾಗಾದರೆ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸ್ವತಃ ದರ್ಶನ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಂಡಿರುತ್ತಾರೆ. ಅದೇ ರೀತಿ 'ಕಾಟೇರ' ಬಳಿಕ ದರ್ಶನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಈಗ ಪಕ್ಕಾ ಆಗಿದೆ. ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಐದಾರು ಸಿನಿಮಾಗಳು ಘೋಷಣೆಯಾಗಿತ್ತು. ತಮ್ಮ ಆಪ್ತರು ಮಾತ್ರವಲ್ಲ ತೆಲುಗು ಸಿನಿಮಾ ನಿರ್ಮಾಪಕರ ಜೊತೆಗೂ ಸಿನಿಮಾ ಮಾಡಲು ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಯಾವುದು ಮೊದಲು? ಯಾವುದು ನಂತರ? ಎನ್ನುವ ಚರ್ಚೆ ಮುಂದುವರೆದಿದೆ.

ಬಹಳ ದಿನಗಳಿಂದ ದರ್ಶನ್ ನಟಿಸಬೇಕಿರುವ ಸಿನಿಮಾವೊಂದು ಪದೇ ಪದೆ ಮುಂದಕ್ಕೆ ಹೋಗುತ್ತಲೇ ಇದೆ. ಕೊರೋನಾ ಹಾವಳಿ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ಆ ಸಿನಿಮಾ ತೆರೆಗೆ ಬರಬೇಕಿತ್ತು. ಅಂದಹಾಗೆ ಆ ಸಿನಿಮಾ ಮತ್ಯಾವುದೂ ಅಲ್ಲ, 'ಮಿಲನ' ಪ್ರಕಾಶ್ ನಿರ್ದೇಶನದ ಸಿನಿಮಾ. ಹೌದು ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದ 'ತಾರಕ್' ಸಿನಿಮಾ ಸಕ್ಸಸ್ ಕಂಡಿತ್ತು. ಆ ನಂತರ ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಕೆ. ಎಸ್ ದುಶ್ಯಂತ್ ಈ ಚಿತ್ರ ನಿರ್ಮಾಣ ಮಾಡಬೇಕಿತ್ತು.
ಈ ಸಿನಿಮಾ ಬಗ್ಗೆ ಸಾಕಷ್ಟು ಬಾರಿ ಚರ್ಚೆ ಆಗಿತ್ತು. ಪ್ರತಿಬಾರಿ ದರ್ಶನ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಸಮೇತ ಈ ಸಿನಿಮಾ ಮಾಡುವ ಬಗ್ಗೆ ಸುಳಿವು ಸಿಗುತ್ತಿತ್ತು. 'ಕಾಟೇರ' ಬಳಿಕ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಇದೀಗ ಸ್ವತಃ ದರ್ಶನ್ ಸ್ಪಷ್ಟಪಡಿಸಿದ್ದಾರೆ. 'ಕಾಟೇರ' ಶೂಟಿಂಗ್ ಕಂಪ್ಲೀಟ್ ಆಗುತ್ತಿದ್ದಂತೆ ಪ್ರಕಾಶ್ ಸಿನಿಮಾ ಶುರುವಾಗುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಹೇಳಿದ್ದಾರೆ.

2017ರಲ್ಲಿ ಪ್ರಕಾಶ್ ನಿರ್ದೇಶನದಲ್ಲಿ ಬಂದಿದ್ದ 'ತಾರಕ್' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ತಾತ ಹಾಗೂ ಮೊಮ್ಮಗನ ಬಾಂಧವ್ಯದ ಕತೆ ಹೇಳಲಾಗಿತ್ತು. ದರ್ಶನ್ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ತಾತನಾಗಿ ನಟಿಸಿದ್ದರು. ಎಮೋಷನ್ ಸೇರಿಸಿ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿತ್ತು. ಅಲ್ಲಿವರೆಗೂ ಬರೀ ಆಕ್ಷನ್, ಡೈಲಾಗ್ಸ್, ಸಾಂಗ್ಸ್ ಇರುವ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ದರ್ಶನ್ 'ತಾರಕ್' ಚಿತ್ರದಲ್ಲಿ ಪ್ರಯೋಗ ಮಾಡಿದ್ದರು. ಅದರಲ್ಲಿ ಗೆದ್ದಿದ್ದರು.
ಬಹಳ ಕಡಿಮೆ ದಿನಹಳ ಕಾಲ್‌ಶೀಟ್ ನೀಡಿ ಒಂದೊಳ್ಳೆ ಸಿನಿಮಾ ಮಾಡಿದ್ದಾಗಿ ದರ್ಶನ್ ಹೇಳಿದ್ದರು. ಚಿತ್ರದ ಆರಂಭದಲ್ಲಿ ರಗ್ಬಿ ಆಟಗಾರನ ಗೆಟಪ್‌ನಲ್ಲೂ ದರ್ಶನ್ ಮಿಂಚಿದ್ದರು. ಇನ್ನು ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯರಾಗಿ ಶ್ರುತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸಿದ್ದರು. ಭಾವನಾತ್ಮಕ ಸನ್ನಿವೇಶಗಳಲ್ಲಿ ಶಾನ್ವಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರವನ್ನು ಕೂಡ ದುಶ್ಯಂತ್ ನಿರ್ಮಿಸಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ ಕೂಡ ಬರಲಿದೆ.
ದರ್ಶನ್- ಪ್ರಕಾಶ್ ಜೋಡಿಯ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಸದ್ಯ D57 ಟೆಂಟಿಟೀವ್ ಟೈಟಲ್‌ನಲ್ಲಿ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಈ ಬಾರಿ ಕೂಡ ಪ್ರಕಾಶ್ ಒಂದೊಳ್ಳೆ ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡಲು ಹೊರಟಿದ್ದಾರೆ. ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











