ತೋತಾಪುರಿ ಬಳಿಕ ಜಮಾಲಿಗುಡ್ಡದಲ್ಲಿ ಅದಿತಿಪ್ರಭುದೇವ- ಧನಂಜಯ್!
ನಟ ಡಾಲಿ ಧನಂಜಯ್ ಮತ್ತು ನಟಿ ಅದಿತಿ ಪ್ರಭುದೇವ ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬ್ಯುಸಿ ಇರುವ ತಾರೆಯರು. ಈ ಜೋಡಿ ಈಗ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ಒಂದಾಗಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
Recommended Video

ಚಿತ್ರದ ಪೋಸ್ಟರ್ ನಲ್ಲಿ ನಟ ಧನಂಜಯ್ ಪಕ್ಕದಲ್ಲಿ ಒಂದು ಮಗು ಕುಳಿತುಕೊಂಡಿದೆ. ಎಲ್ಲೋ ಕುಳಿತು ಏನನ್ನೋ ನೋಡುವ ದೃಶ್ಯ ಪೋಸ್ಟರ್‌ನಲ್ಲಿ ಮೂಡಿ ಬಂದಿದೆ. ಈ ಪೋಸ್ಟರ್ ಸಿನಿಮಾ ಒಂದು ಸಸ್ಪೆನ್ಸ್ ಕಥೆ ಎಂಬುದನ್ನು ರಿವೀಲ್ ಮಾಡಿದೆ.
ಆದರೆ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು ಎನ್ನುವುದನ್ನೂ ಅದಿತಿ ಮತ್ತು ಧನಂಜಯ್ ಇಬ್ಬರೂ ರಿವೀಲ್ ಮಾಡಿದ್ದಾರೆ.

ಈ ಸಿನಿಮಾ ಒಪ್ಪಿಕೊಳ್ಳಲು ಭಯ ಆಗಿತ್ತು: ನಟ ಧನಂಜಯ್
ನಟ ಧನಂಜಯ್ ಅವರನ್ನು ಸಿನಿಮಾರಂಗದಲ್ಲಿ ನಟ ರಾಕ್ಷಸ ಎಂದೇ ಕರೆಯಲಾಗುತ್ತದೆ. ಆದರೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಭಯ ಆಗಿತ್ತಂತೆ. ಈ ಸಿನಿಮಾ ಹೇಗೆ ಮೂಡಿ ಬರುತ್ತದೋ ಎನ್ನುವ ಸಂದೇಹ ಧನಂಜಯ್ ಅವರಿಗೆ ಇತ್ತಂತೆ. ಈ ವಿಚಾರವನ್ನು ನಟ ಧನಂಜಯ್ ಸ್ವತಃ ತಾವೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಆದರೆ ಚಿತ್ರದ ನಿರ್ದೇಶಕ ಕುಶಾಲ್ ಅವರಿಗೆ ಈ ಪಾತ್ರಕ್ಕೆ ನಟ ಧನಂಜಯ್ ಅವರನ್ನು ಬಿಟ್ಟು ಮತ್ಯಾರು ಕಂಡಿಲ್ಲ. ಹಾಗಾಗಿ ಈ ಪಾತ್ರವನ್ನು ಅವರು ಮಾಡಿದರೇ ಮಾತ್ರ ಸೂಕ್ತ ಎಂದು ಧನಜಂಯ್ ಅವರನ್ನು ಪಾತ್ರಕ್ಕೆ ಒಪ್ಪಿಸಿದ್ದಾರೆ. ನಟ ಧನಂಜಯ್ ಕೂಡ ತಮ್ಮ ಪಾತ್ರದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಜಮಾಲಿಗುಡ್ಡಕ್ಕೆ ಚಿತ್ರಕ್ಕೆ ಲೆಕ್ಕಚಾರ ಹಾಕಲಿಲ್ಲ: ಅದಿತಿ ಪ್ರಭುದೇವ
ಇನ್ನು ನಟಿ ಅದಿತಿ ಪ್ರಭುದೇವ ಈ ಚಿತ್ರದ ಟೈಟಲ್‌ಗೆ ಮೊದಲು ಫಿದಾ ಆಗಿದ್ದಾರೆ. ನಂತರ ಇಡೀ ಟೀಂ ಅದಿತಿಗೆ ಇಷ್ಟ ಆಯ್ತಂತೆ. ಯಾಕೆಂದರೆ ಅದಿತಿ ಒಂದು ಸಿನಿಮಾ ಒಪ್ಪಿಕೊಳ್ಳಬೇಕಾದರೆ ತುಂಬಾ ಲೆಕ್ಕಾಚಾರ ಹಾಕುತ್ತಾರಂತೆ. ಸಿನಿಮಾದ ಕಥೆ, ತಾರಬಳಗ, ನಿರ್ದೇಶನ ಎಲ್ಲವನ್ನೂ ಅಳೆದು ತೂಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಆದರೆ ಈ ಚಿತ್ರದಲ್ಲಿ ಎಲ್ಲವೂ ಹೊಂದಾಣಿಕೆ ಆಗುವ ಹಾಗೆ ಸಿಕ್ಕಿದೆ ಎಂದು ಅದಿತಿ ಹೇಳಿಕೊಂಡಿದ್ದಾರೆ. ಧನಂಜಯ್ ಜೊತೆಗೆ ಅದಿತಿ ಪ್ರಭುದೇವ ಅವರಿಗೆ ಇದು ಎರಡನೇ ಸಿನಿಮಾ. ಈ ಮೊದಲು ಧನಂಜಯ್ ಅವರ ಜೊತೆಗೆ ತೋತಾಪುರಿ ಸಿನಿಮಾದಲ್ಲಿ ಅದಿತಿ ಅಭಿನಯಿಸಿದ್ದಾರೆ.

ಚಿತ್ರೀಕರಣದ ಹಂತದಲ್ಲಿ ಜಮಾಲಿಗುಡ್ಡ!
ಈ ಚಿತ್ರದ ನಿರ್ದೇಶಕ ಕುಶಾಲ್ ಗೌಡ ಈ ಹಿಂದೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಕೂಡ ಹಲವು ಕಾರಣಕ್ಕೆ ಸದ್ದು ಮಾಡಿತ್ತು. ಚಿತ್ರದ ಹಾಡುಗಳು ಹಿಟ್ ಲಿಸ್ಟ್ ಸೇರಿದ್ದವು. ಈಗ ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಅವರ ಜೊತೆಗೆ ಕುಶಾಲ್ ಕೆಲಸ ಮಾಡುತ್ತಿದ್ದಾರೆ. ಕುಶಾಲ್ ಅವರ ಮೊದಲ ಸಿನಿಮಾ ಈ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರ ತಂಡ ಎರಡು ತಿಂಗಳಿನಿಂದ ಚಿತ್ರ ಶೂಟಿಂಗ್‌ನಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಭಾವನಾ ಅಭಿನಯ ಮಾಡುತ್ತಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರಲಿದೆ. ಈ ಚಿತ್ರಕ್ಕೆ ಕಡ್ಡಿಪುಡಿ, ಸಲಗ, ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಶ್ರೀ ಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಜಮಾಲಿಗುಡ್ಡದಲ್ಲಿ ಹೇಗಿರುತ್ತೆ ಡಾಲಿ ಪಾತ್ರ?
ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಪಾತ್ರ ಹೇಗೆ ಇರಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಯಾಕೆಂದರೆ ನಟ ಧನಂಜಯ್ ಈಗ ಅಭಿನಯಿಸುತ್ತಿರುವ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳೇ ಆಗಿವೆ. ಡಾಲಿಯಾ ಅಬ್ಬರಿಸಿದ ಬಳಿಕ ಧನಂಜಯ್ ಪ್ರತಿ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಪಾತ್ರದ ಮೇಲೆ ನಿರೀಕ್ಷೆ ಹುಟ್ಟಿದೆ.


Click it and Unblock the Notifications











