ತಂದೆ-ತಾಯಿಯಾಗ್ತಿರುವ ಸಂಭ್ರಮದಲ್ಲಿ ಡಾಲಿ ಧನಂಜಯ್-ಡಾ.ಧನ್ಯತಾ ; ಬೇಬಿ ಬಂಪ್ ಫೋಟೊಶೂಟ್ ವೈರಲ್
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇಂತಹ ಪ್ರಶ್ನೆಗಳಿಗೆ ಹಲವು ಸಲ ಹಲವಾರು ತಾರೆಯರು ಉರಿದು ಬಿದ್ದಿದ್ದು ಇದೆ.
ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ.

ಆದರೂ ಕೂಡ ಈ ಪ್ರಶ್ನೆ ಎದುರಾಗಿಯೇ ಆಗುತ್ತೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಡಾಲಿ ಧನಂಜಯ್ ಈ ವರ್ಷದ ಆರಂಭದಲ್ಲಿ ಉತ್ತರ ನೀಡಿದ್ದರು.
''ಉದಯ ಕನ್ನಡಿಗ - 2025'' ಕಾರ್ಯಕ್ರಮದಲ್ಲಿ ಮದುವೆಯಾದ ಒಂದು ವರ್ಷದ ನಂತರ ತಾವು ತಂದೆಯಾಗುತ್ತಿರುವುದಾಗಿ ಎಲ್ಲರೆದುರು ಹೇಳಿದ್ದರು. ಎರಡು ಗುಲಾಬಿ ಹೂ ಇದೆ. ಇದರಲ್ಲಿ ಒಂದನ್ನು ಮನೆಗೆ ತಗೊಂಡು ಹೋಗಿ ನಾನು ನನ್ನ ಹೆಂಡ್ತಿಗೆ ಕೊಡ್ತೀನಿ. ಇನ್ನೊಂದನ್ನ ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗುತ್ತಿದೆ. ಅದಕ್ಕೆ ಅಂತ ಹೇಳಿ ಕೊಡುವುದಾಗಿ ಹೇಳಿ ವೇದಿಕೆಯಲ್ಲಿ ಸಂಭ್ರಮಿಸಿದ್ದರು.
ಈಗ ತಮ್ಮ ಪತ್ನಿ ಡಾ.ಧನ್ಯತಾ ಅವರ ಜೊತೆ ಸುಂದರವಾದ ಬೇಬಿ ಬಂಪ್ ಫೋಟೋಶೂಟ್ ಚಿತ್ರಗಳನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ಧಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈಗೀಗ ಪ್ರೆಗ್ನಿಂಟ್ ಆಗುವುದು ಒಂದು ಕಡೆಯಾದರೆ ಅದಾದ ಮೇಲೆ ಮಗು ಆಗುವವರೆಗೂ ತಮ್ಮ ಬೇಬಿ ಬಂಪ್ ನಲ್ಲಿ ಫೋಟೋಗೆ ಪೋಸ್ ಕೊಡುವುದು ಒಂದು ರೀತಿಯ ಟ್ರೆಂಡ್ ಆಗಿ ಹೋಗಿದೆ.

ಆದರೆ ಈ ಟ್ರೆಂಡ್‌ನ ಬಾಲಿವುಡ್‌ನವರು ಹಳ್ಳ ಹಿಡಿಸಿದ್ಧಾರೆ. ವಿಚಿತ್ರ ಫ್ಯಾಷನ್‌ನ ಮೊರೆ ಹೋಗಿದ್ಧಾರೆ. ಅರೆಬರೆ ಬಟ್ಟೆಯಲ್ಲಿ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿಕೊಂಡು ನೋಡುಗರಿಂದ ಮತ್ತು ಅಭಿಮಾನಿಗಳಿಂದ ಮಂಗಳಾರತಿಯನ್ನು ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ.
ಆದರೆ, ಧನಂಜಯ್ ಮತ್ತು ಧನ್ಯತಾ ಇದಕ್ಕೆ ತದ್ವಿರುದ್ದ. ಸರಳ ಮತ್ತು ಸುಂದರವಾದ ಫೋಟೊಶೂಟ್‌ನ ಇಬ್ಬರು ಮಾಡಿಸಿದ್ದಾರೆ.ಯಾವುದೇ ಅಬ್ಬರದ ಸೆಟ್ ಇಲ್ಲ. ಬದಲಿಗೆ ಪ್ರಕೃತಿಯ ಮಡಿಲಿನಲ್ಲಿ ಹೆಜ್ಜೆ ಹಾಕಿದ್ದಾರೆ. ತೆರೆಯ ಮೇಲೆ ರಗಡ್ ಪಾತ್ರಗಳಲ್ಲಿ ಮಿಂಚುವ ಧನಂಜಯ್, ತಮ್ಮ ಪತ್ನಿಯ ಮೇಲೆ ಈ ಫೋಟೊಶೂಟ್‌ನಲ್ಲಿ ತೋರುತ್ತಿರುವ ಪ್ರೀತಿ ಮತ್ತು ಕಾಳಜಿಯನ್ನು ನೋಡಿ ಸದ್ಯ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನುಳಿದಂತೆ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಕಳೆದ ವರ್ಷ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಕನ್ನಡ ಚಿತ್ರರಂಗದ ತಾರೆಯರು ಮಾತ್ರವಲ್ಲದೇ ರಾಜಕಾರಣಿಗಳು ಕೂಡ ಈ ಮದುವೆಗೆ ಸಾಕ್ಷಿಯಾಗಿದ್ದರು. ಅಭಿಮಾನಿಗಳು ಕೂಡ ಬಂದು ಶುಭ ಕೋರಿದ್ದರು.
ಮದುವೆ ಮುಂಚೆಯೇ ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಒಬ್ಬರ ಪರಿಚಯ ಒಬ್ಬರಿಗೆ ಇತ್ತು. ಜಯನಗರ 4ನೇ ಬ್ಲಾಕ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಇದಾದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಧನಂಜಯ್ ಅವರ ಯಾವುದಾದರೂ ಚಿತ್ರ ಬಿಡುಗಡೆಯಾದಾಗ ಅಥವಾ ಪ್ರಶಸ್ತಿ ಬಂದಾಗ ಧನ್ಯತಾ ಮೆಸೇಜ್ ಮಾಡುತ್ತಿದ್ದರು. ಡಾಲಿ ಕೂಡ ರಿಪ್ಲೈ ಮಾಡುತ್ತಿದ್ದರು.
ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹದ ಸ್ವರೂಪ ಪಡೆದು ಮದುವೆಯ ಹಂತದವರೆಗೆ ಕರೆದುಕೊಂಡು ಬಂತು. ಈಗ ಇಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದಾರೆ.


Click it and Unblock the Notifications