ಭಾವಿ ಪತ್ನಿ ಜೊತೆ ಪಬ್‌ನಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಂಡ ಡಾಲಿ ಧನಂಜಯ್ ..!
ಹೊಸ ವರುಷ ಎಂದರೇನೇ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತೆ. ಹೊಸ ಚೈತನ್ಯ, ಹೊಸ ಹುರುಪು ಬರುತ್ತೆ. ಇದು ಬರೀ ಕ್ಯಾಲೆಂಡರ್ ತಿರುವಿ ಹಾಕುವ ದಿನವಲ್ಲ. ಅದರಚಾಗೆ ಅನೇಕ ಸಂಗತಿಗಳಿವೆ. ಇದೇ ಕಾರಣಕ್ಕೆ ಹೊಸ ವರ್ಷಕ್ಕೆ ಅದರದ್ದೇ ಆದ ಮಹತ್ವ ಇದೆ. ಇಂತಹ ಮಹತ್ವದ ದಿನವನ್ನು ಅನೇಕರು ಅವರ ಬದುಕಿನ ಸಂಗಾತಿಗಳ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ನಿನ್ನೆ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆ ಪೈಕಿ ಡಾಲಿ ಧನಂಜಯ್ ಕೂಡ ಒಬ್ಬರು.
ಹೌದು, ಇನ್ನೇನು ಈ ಫೆಬ್ರವರಿಯಂದು ಗ್ರಹಸ್ಥಾಶ್ರಮಕ್ಕೆ ಕಾಲಿಡಲಿರುವ ಡಾಲಿ ಧನಂಜಯ್ ನಿನ್ನೆ ತಮ್ಮ ಭಾವಿ ಪತ್ನಿ ಡಾಕ್ಟರ್ ಧನ್ಯತಾ ಅವರ ಜೊತೆ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಪಬ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಮಸ್ತ್ ಆಗಿ ಕುಣಿದು ಸಖತ್ ಎಂಜಾಯ್ ಮಾಡಿದ್ದಾರೆ. ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಅವರ ಈ ಸಂಭ್ರಮವನ್ನು ಸ್ನೇಹಿತರು ಇಮ್ಮಡಿಯಾಗಿಸಿದ್ದಾರೆ.

ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಅವರ ಈ ಪಾರ್ಟಿ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಭಾವಿ ಪತ್ನಿ ಧನ್ಯತಾ ಅವರ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಡಾಲಿ ಧನಂಜಯ್ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆದಿದ್ದರು. ಆ ನಂತರ ಲಗ್ನ ಪತ್ರಿಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.
ಆ ನಂತರ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1065ನೇ ಜಯಂತಿಯಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್ ನಂದಿ ಧ್ವಜ ಹೊತ್ತು ಕುಣಿದು ಸಂಭ್ರಮಿಸಿದ್ದರು. ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಲಗ್ನ ಪತ್ರಿಕೆ ಕೊಡಲು ಶುರು ಮಾಡಿದ್ದೇವೆ, ಹಿರಿಯರಿಗೆ ಈಗಾಗಲೇ ಲಗ್ನ ಪತ್ರಿಕೆಯನ್ನು ನೀಡಿದ್ದೇವೆ ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಹೇಳಿದ್ದರು.
ಇನ್ನುಳಿದಂತೆ ಡಾಲಿ ಧನಂಜಯ್ ಮತ್ತು ಡಾ ಧನ್ಯತಾ ಅವರದ್ದು ಇಂದು ನಿನ್ನೆಯ ಸ್ನೇಹ ಅಲ್ಲ. ಇಬ್ಬರದ್ದು ಅನೇಕ ವರ್ಷಗಳ ಪರಿಚಯ. ಚಿತ್ರದುರ್ಗದ ಮೂಲದ ಧನ್ಯತಾ ಓದಿದ್ದೆಲ್ಲ ಮೈಸೂರಿನಲ್ಲಿ. ಇನ್ನೂ ಅರಸೀಕೆರೆ ಹುಡುಗ ಧನಂಜಯ್ ಕೂಡ ತಮ್ಮ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲಿಯೇ. ಹೀಗೆ ಮೈಸೂರಿನ ಜೊತೆ ವಿಶೇಷ ನಂಟು ಹೊಂದಿರುವ ಇಬ್ಬರು ಸ್ನೇಹಿತರಾಗಿದ್ದಾರೆ. ಆ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈಗ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯ ಬಂಧನಕ್ಕೊಳಗಾಗಲು ಇಬ್ಬರು ಮುಂದಾಗಿದ್ದಾರೆ.ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಧನ್ಯತಾ ಅವರ ಪೋಷಕರು ಸರ್ಕಾರಿ ನೌಕರರಾಗಿದ್ದವರು. ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಇನ್ನೂ ಕಳೆದ ನವೆಂಬರ್‌ನಲ್ಲಿ ಸರಳವಾಗಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.ಧನಂಜಯ್- ಧನ್ಯತಾ ಕುಟುಂಬ ಸದಸ್ಯರು, ಸ್ನೇಹಿತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇಬ್ಬರ ಮದುವೆ ಫೆಬ್ರವರಿ 15-16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಮದುವೆ ಹಿನ್ನೆಲೆ ಸ್ನೇಹಿತರು, ಚಿತ್ರರಂಗದ ಆಪ್ತರು ಮತ್ತು ರಾಜಕಾರಣಿಗಳಿಗೆ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೆಗೌಡ ಸೇರಿ ಅನೇಕರಿಗೆ ಮದುವೆಯ ಮಮತೆಯ ಕರೆಯೋಲೆಯನ್ನು ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.


Click it and Unblock the Notifications











