ಡಾಲಿ ಧನಂಜಯ್ ಹೃದಯ ಗೆದ್ದ ಈ ಚೆಲುವೆ ಯಾರು ? ಮದುವೆ ಯಾವಾಗ, ಎಲ್ಲಿ ?
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಹೀಗಾಗಿಯೇ ಮದುವೆ ಬೇಡ ಎಂದು ತೀರ್ಮಾನ ಮಾಡಿರುವವರು ಕೂಡ ಇವರ ಈ ಕಿರುಕುಳದಿಂದ ತಪ್ಪಿಸಿಕೊಳ್ಳಲಾದರೂ ಮದುವೆಗೆ ರೆಡಿಯಾಗಿ ಬಿಡುತ್ತಾರೆ. ಇದಕ್ಕೆ ಡಾಲಿ ಧನಂಜಯ್ ಸದ್ಯದ ಉದಾಹರಣೆ.
ಹೌದು, ಅಸಲಿಗೆ ವಿಕ್ಕಿಪೀಡಿಯಾ ಪ್ರಕಾರ ಡಾಲಿ ಧನಂಜಯ್ ಅವರಿಗೆ ಈಗ 38ರ ಹರೆಯ. ಆದರೂ ಡಾಲಿ ಇನ್ನೂ ಮದ್ವೆಯಾಗಿಲ್ಲ. ಹೀಗಾಗಿಯೇ ಇವರ ಮದುವೆಯ ಚಿಂತೆಯನ್ನು ಮಾಡುತ್ತಿರುವ ಅನೇಕರು ಈ ಹಿಂದೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎಂದು ಪುಕಾರು ಹಬ್ಬಿಸಿದ್ದರು. ಇದಕ್ಕೆ ಪೂರಕವಾಗಿ ಗಣೇಶ್ ನಡೆಸಿಕೊಡ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್ ಅವರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ''ಮಂಡಿಯೂರಿ ಬೇಡುವೆನು.. ಹೃದಯ ಕಾಲಡಿ ಇಡುವೆನು.. ತೆಗೆದು ಬಚ್ಚಿಟ್ಕೋ, ಇಲ್ಲ ತುಳಿದು ಕಾಲ್ ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ'' ಎಂದೆಲ್ಲ ಕವಿತೆಯನ್ನು ಹೇಳಿದ್ದರು. ಧನಂಜಯ್ ನೀಡಿದ್ದ ಗುಲಾಬಿ ಹೂ ಪಡೆದು ಅಮೃತಾ ಐಯ್ಯಂಗಾರ್ ನಾಚಿ ನೀರಾಗಿದ್ದರು.
ಆದರೆ, ಆ ನಂತರ ಅದೆಲ್ಲ ಕೇವಲ ಕಾರ್ಯಕ್ರಮಕ್ಕಷ್ಟೇ ಸೀಮಿತ, ನಾನು ಮತ್ತು ಅಮೃತಾ ಐಯ್ಯಂಗಾರ್ ಕೇವಲ ಉತ್ತಮ ಸ್ನೇಹಿತರಷ್ಟೇ ಎಂದು ಡಾಲಿ ಧನಂಜಯ್ ಹೇಳುತ್ತಾ ಬಂದರು. ಅಮೃತಾ ಐಯ್ಯಂಗಾರ್ ಕೂಡ ಮಾಧ್ಯಮದವರು ಈ ಕುರಿತು ಕೇಳಿದಾಗೆಲ್ಲ ಡಾಲಿ ಧನಂಜಯ್ ಹೇಳಿದ್ದ ಪಾಠವನ್ನೇ ಒಪ್ಪಿಸಿದರು. ಮಾಧ್ಯಮದವರ ಈ ಕಪೋಲಕಲ್ಪಿತ ವರದಿಗಳಿಂದ ಡಾಲಿ ಧನಂಜಯ್ ಅವರಿಗೆ ಯಾರು ಹೆಣ್ಣೇ ಕೊಡ್ತಿಲ್ಲವಂತೆ ಎಂದು ತಮಾಷೆಯನ್ನು ಮಾಡಿದ್ದರು. ಆದರೆ ಈಗ ಡಾಲಿ ಧನಂಜಯ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನಟರಾಕ್ಷಸನ ಹೃದಯ ಡಾ.ಧನ್ಯತಾ ಪಾಲಾಗಿದೆ.
ಹೌದು, ರಾಜ್ಯೋತ್ಸವದ ಪ್ರಯುಕ್ತ ಕವನ ಓದುತ್ತಾ ಡಾಲಿ ಧನಂಜಯ್ ತಮ್ಮ ಮನದರಸಿಯ ಪರಿಚಯ ಮಾಡಿಸಿದ್ದಾರೆ. ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಭಾವಿ ಪತ್ನಿಯ ಜೊತೆ ಚೆಂದದ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡಾಲಿ ಧನಂಜಯ್ ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು ಎಂದು ಹೇಳಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು ಕೋರಿ ನಾನು ಧನ್ಯ ಎಂದಿದ್ದಾರೆ.

ಅಂದ್ಹಾಗೇ ಡಾಲಿ ಧನಂಜಯ್ ಮತ್ತು ಡಾ ಧನ್ಯತಾ ಅವರದ್ದು ಇಂದು ನಿನ್ನೆಯ ಸ್ನೇಹ ಅಲ್ಲ. ಇಬ್ಬರದ್ದು ಅನೇಕ ವರ್ಷಗಳ ಪರಿಚಯ. ಚಿತ್ರದುರ್ಗದ ಮೂಲದ ಧನ್ಯತಾ ಓದಿದ್ದೆಲ್ಲ ಮೈಸೂರಿನಲ್ಲಿ. ಇನ್ನೂ ಅರಸೀಕೆರೆ ಹುಡುಗ ಧನಂಜಯ್ ಕೂಡ ತಮ್ಮ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲಿಯೇ. ಹೀಗೆ ಮೈಸೂರಿನ ಜೊತೆ ವಿಶೇಷ ನಂಟು ಹೊಂದಿರುವ ಇಬ್ಬರು ಸ್ನೇಹಿತರಾಗಿದ್ದಾರೆ. ಆ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈಗ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯ ಬಂಧನಕ್ಕೊಳಗಾಗಲು ಇಬ್ಬರು ಮುಂದಾಗಿದ್ದಾರೆ. ಇನ್ನೂ ಇಬ್ಬರ ಮದುವೆ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಇದೆ. ಅದೇ ದಿನ ಆರತಕ್ಷತೆ ಸಮಾರಂಭ ಕೂಡ ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ರಾಜಕೀಯದ ಗಣ್ಯರು ಮತ್ತು ಚಿತ್ರರಂಗ ಅನೇಕರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಸದ್ಯಕ್ಕೆ ತಮ್ಮ ಕೈ ಹಿಡಿಯಲಿರುವ ಹುಡುಗಿಯನ್ನು ಡಾಲಿ ಧನಂಜಯ್ ಪರಿಚಯಿಸಿದ್ದು ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











