'ಹೊಯ್ಸಳ' ಸಿನಿಮಾ ಟೈಟಲ್‌ನಲ್ಲಿ ಬದಲಾವಣೆ: ಕಾರಣ ತಿಳಿಸಿದ ನಟ ಧನಂಜಯ
'ಪಾಪ್‌ಕಾರ್ನ್ ಮಂಕಿ ಟೈಗರ್' ಹಾಗೂ 'ಬಡವ ರಾಸ್ಕಲ್' ನಂತರ ಧನಂಜಯ ಜೋಡಿಯಾಗಿ ಮತ್ತೊಮ್ಮೆ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಡಾಲಿ ಧನಂಜಯ ನಟನೆಯ 'ಹೊಯ್ಸಳ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಸಿನಿಮಾ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಚಿತ್ರದ ಪ್ರಮೋಷನ್ ಜೋರಾಗಿದ್ದು, ನಾಯಕ ಡಾಲಿ ಧನಂಜಯ್ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಖಾಕಿ ತೊಟ್ಟು ಡಾಲಿ ಅಬ್ಬರಿಸಿದ್ದಾರೆ.
ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಾಣದ 'ಹೊಯ್ಸಳ' ಸಿನಿಮಾ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚೆಗೆ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಟ ಧನಂಜಯ "ರತ್ನನ್ ಪ್ರಪಂಚ ನಂತರ ಕೆ.ಆರ್.ಜಿ ಸ್ಟುಡಿಯೋ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು. ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಂತರ ಗೊತ್ತಾಯ್ತು ಇದು ನನ್ನ ಅಭಿನಯದ 25ನೇ ಸಿನಿಮಾ ಅಂತ"

"ನನಗೂ ಸಮಾಜಕ್ಕೆ ಏನಾದರೂ ಸಂದೇಶ ಹೇಳುವ ಸಿನಿಮಾ ಮಾಡಬೇಕು ಎನಿಸಿತ್ತು. ಅದರಂತೆಯೇ ಫ್ಯಾಮಿಲಿ ಜೊತೆ ಕುಳಿತು ನೋಡುವ ಕಥೆ ನಂಗೆ 'ಹೊಯ್ಸಳ' ಚಿತ್ರದಲ್ಲಿ ಸಿಕ್ಕಿತು. ಇದರಲ್ಲಿ ಒಂದು ಸೀರಿಯಸ್ ಅಂಶವನ್ನು ಹೇಳುವ ಪ್ರಯತ್ನ ಮಾಡಿದ್ದು, ಒಳ್ಳೆ ಮೆಸೇಜ್ ಇರುವ ಕಮರ್ಷಿಯಲ್ ಸಿನಿಮಾ. ನಾವು ಸಿನಿಮಾ ಟೈಟಲ್ ಅನ್ನು ರಾಮು ಫಿಲ್ಮ್ಸ್ ಬಳಿ ಕೇಳಿ ಪಡೆದಿದ್ದೇವೆ. ಆದರೆ ಇದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ನಾನು ಚಿತ್ರದಲ್ಲಿ ಗುರುದತ್ ಹೊಯ್ಸಳ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ" ಎಂದಿದ್ದಾರೆ.
ಇನ್ನು 'ಹೊಯ್ಸಳ' ಸಿನಿಮಾ ಪೋಸ್ಟರ್‌ಗಳಲ್ಲಿ ಬದಲಾವಣೆ ಗೊತ್ತಾಗುತ್ತಿದೆ. ಇಷ್ಟು ದಿನ 'ಹೊಯ್ಸಳ' ಎಂದೇ ಸಿನಿಮಾ ಟೈಟಲ್ ಇತ್ತು. ಆದರೆ ಈಗ 'ಗುರುದೇವ್ ಹೊಯ್ಸಳ' ಎಂದು ಬದಲಿಸಲಾಗಿದೆ. ಗುರುದೇವ್ ಎನ್ನುವುದನ್ನು ಚಿಕ್ಕದಾಗಿ ಹಾಕಿ 'ಹೊಯ್ಸಳ' ಎನ್ನುವುದನ್ನು ದೊಡ್ಡದಾಗಿ ಹಾಕಲಾಗಿದೆ. 'ಪಾಪ್‌ಕಾರ್ನ್ ಮಂಕಿ ಟೈಗರ್' ಹಾಗೂ 'ಬಡವ ರಾಸ್ಕಲ್' ನಂತರ ಧನಂಜಯ ಜೋಡಿಯಾಗಿ ಮತ್ತೊಮ್ಮೆ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

"ಧನಂಜಯ ಜೊತೆ ನಂಗೆ ಇದು 3ನೇ ಸಿನಿಮಾ. ಇದರಲ್ಲಿ ನಾನು ಗಂಗಾ ಆಗಿ ಪೊಲೀಸ್ ಆಫೀಸರ್ ಹೆಂಡತಿ ಪಾತ್ರ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಟೀಚರ್ ಆಗಿರುತ್ತೇನೆ. ಈ ಪಾತ್ರ ಮಾಡುವುದು ನಂಗೆ ಚಾಲೆಂಜಿಂಗ್ ಆಗಿತ್ತು. ಈ ಚಿತ್ರ ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುತ್ತದೆ" ಎಂದು ಅಮೃತಾ ಹೇಳಿದ್ದಾರೆ.
ಹಿರಿಯ ನಟ ಅವಿನಾಶ್ ಮಾತನಾಡಿ "ಚಿತ್ರದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದು, ಅದ್ಭುತವಾಗಿ ಬಂದಿದೆ. ನಿರ್ದೇಶಕರು ನಂಗೆ ಕಥೆ ಹೇಳುವಾಗ ನಾನಾ ಪಾಟೇಕರ್ ತರಾ ಪಾತ್ರ ಇರುತ್ತದೆ ಎಂದು ಹೇಳಿದ್ದರು. ಈ ಪೊಲೀಸ್ ಸ್ಟೋರಿ ಸಿನಿಮಾ ಅದ್ಭುತವಾಗಿ ಬಂದಿದ್ದು, ನಾನಿಲ್ಲಿ ದಾದಾ ಪಾತ್ರ ಮಾಡಿದ್ದೇನೆ" ಎಂದಿದ್ದಾರೆ. ಎನ್ನುವರು. ನಿರ್ದೇಶಕ ವಿಜಯ್. ಎನ್ ಮಾತನಾಡಿ "ಈ ಚಿತ್ರವನ್ನು ಪೊಲೀಸ್ ಇಲಾಖೆಗೆ ಅರ್ಪಣೆ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ನಿರ್ಮಾಪಕ ಯೋಗಿ ಜಿ. ರಾಜ್ ಮಾತನಾಡಿ "ಧನು ಜೊತೆ ಸಿನಿಮಾ ಮಾಡಲು ಸಿದ್ದರಾದಾಗ ನಿರ್ದೇಶಕರು ಕಥೆ ಹೇಳಿದ್ರು. ಕಥೆ ತುಂಬಾ ಚೆನ್ನಾಗಿದೆ ಅನ್ನಿಸಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಇದೇ ಮಾರ್ಚ್ 30 ರಂದು ವಿಶ್ವಾದ್ಯಂತ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗಲಿದೆ. ಇದರಲ್ಲಿ ನಾಯಕನ ಹೆಸರು ಗುರುದೇವ ಹೊಯ್ಸಳ ಅಂತ ಇರುತ್ತದೆ. ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ" ಎಂದು ವಿವರಿಸಿದ್ದಾರೆ.


Click it and Unblock the Notifications











