ಅಭಿಮಾನಿಗಳಿಂದ ಅಂತರ ಕಾಪಾಡಿಕೊಳ್ತಿದ್ದಾರಾ ಕನ್ನಡ ಸ್ಟಾರ್ಸ್ ? ಬರ್ತ್‌ಡೇ ಸಂಭ್ರಮಕ್ಕೆ ಬ್ರೇಕ್ ಹಾಕಿದ ಡಾಲಿ ಧನಂಜಯ್
ಅಭಿಮಾನಿಗಳ ಅಭಿಮಾನದ ಪ್ರದರ್ಶನಕ್ಕೆ ಹಬ್ಬ-ಹರಿದಿನ ಬೇಕಿಲ್ಲ. ಚಿತ್ರ ಬಿಡುಗಡೆ ಆಗಲೇ ಬೇಕು ಅಂತಾನೂ ಇಲ್ಲ. ಬೇಕಿರುವುದು ಕೇವಲ ಒಂದು ದಿನವಷ್ಟೇ. ಆ ದಿನಕ್ಕೆ ಅಭಿಮಾನಿಗಳು ಅಭಿಮಾನದಿಂದ ಇಟ್ಟಿರುವ ಹೆಸರು ಹುಟ್ಟಿದ ಹಬ್ಬ. ಆದರೆ ಈಗೀಗ ಆ ಹುಟ್ಟಿದ ಹಬ್ಬದ ಸಂಭ್ರಮಾಚರಣೆ ಕೂಡ ಕಳೆಗುಂದುತ್ತಿದೆ. ಕಾರಣ ವ್ಯೆಯಕ್ತಿಕವಾದರೂ, ಈ ವ್ಯೆಯಕ್ತಿಕ ಕಾರಣ.. ಅಭಿಮಾನದ ಪರೀಕ್ಷೆಯನ್ನಂತೂ ಮಾಡುತ್ತಿದೆ. ಇದಕ್ಕೆ ಡಾಲಿ ಧನಂಜಯ್ ಅವರ ಹುಟ್ಟಿದ ಹಬ್ಬದ ಸಂಭ್ರಮ-ಸಡಗರ ಮತ್ತೊಂದು ಉದಾಹರಣೆ.
ಹೌದು, ಇನ್ನೇನು ಈ ಆಗಸ್ಟ್ 23ಕ್ಕೆ ಡಾಲಿ ಧನಂಜಯ್ 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ.. ಬರ್ತ್‌ಡೇ ನೆಪದಲ್ಲಿ ಒಂದು ಇಡೀ ದಿನ ಡಾಲಿ ಜೊತೆ ಇರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಂಭ್ರಮದಿಂದ.. ಅದ್ಧೂರಿಯಾಗಿ.. ಎಲ್ಲರೂ ಜೊತೆಯಾಗಿ ಆಚರಿಸಬೇಕೆಂದುಕೊಂಡಿದ್ದರು.

ಆದರೆ.. ಈ ಸಂಭ್ರಮಕ್ಕೆ ಖುದ್ದು ಡಾಲಿ ಧನಂಜಯ್ ಅವರೇ ಬ್ರೇಕ್ ಹಾಕಿದ್ದಾರೆ. ನಾನು ಮನೆಯಲ್ಲಿರಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡಾಲಿ ಧನಂಜಯ್ ''ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್ 23ರಂದು ನನ್ನ ಬರ್ತ್‌ಡೇ. ಪ್ರತಿ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ'' ಎಂದು ಹೇಳಿದ್ದಾರೆ. ''ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ಅದೇ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ.. ಹಾರೈಕೆ.. ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. ಲವ್ ಯೂ ಆಲ್'' ಎಂದು ಬರೆದುಕೊಂಡಿದ್ದಾರೆ.
ಸಹಜವಾಗಿ ಧನಂಜಯ್ ಬರೆದುಕೊಂಡ ಈ ಸಾಲುಗಳಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಯಾಕೆಂದರೆ.. ಧನಂಜಯ್ ತಮ್ಮ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದಂದು ಕಳೆದ ವರ್ಷ ಕೂಡ ದರ್ಶನ ನೀಡಿರಲಿಲ್ಲ. ಕಳೆದ ವರ್ಷ ಕೂಡ ನೆಪ ಹೇಳಿ ಧನಂಜಯ್ ಜಾರಿಕೊಂಡಿದ್ದರು.
ಕಳೆದ ವರ್ಷ ಇದೇ ಸಮಯದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸಿದ್ದ ಡಾಲಿ ಧನಂಜಯ್, ''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆಗಸ್ಟ್ 23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರು, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ'' ಎಂದು ಹೇಳಿದ್ದರು. ''ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ. ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ'' ಎಂದು ಹೇಳಿದ್ದರು.

ಅಂದ್ಹಾಗೇ ಕೊರೊನಾ ನಂತರದ ದಿನಗಳಲ್ಲಿ ಕನ್ನಡದ ಅನೇಕ ಸ್ಟಾರ್‌ಗಳು ಬರ್ತ್‌ಡೇ ಸಂಭ್ರಮದಿಂದ ದೂರವಾಗುತ್ತಿದ್ದಾರೆ. ವರ್ಷಾನುವರ್ಷ ಈ ಸಂಭ್ರಮಾಚರಣೆಗೆ ಒಂದಿಲ್ಲೊಂದು ಕಾರಣಗಳಿಂದ ಬ್ರೇಕ್ ಹಾಕುತ್ತಿದ್ದಾರೆ. ಹೀಗಾಗಿ ಅಭಿಮಾನದ ಜಾತ್ರೆಗೆ ಕೈಗನ್ನಡಿಯಂತೆ ಇದ್ದ ಹುಟ್ಟುಹಬ್ಬದ ಸಂಪ್ರದಾಯ ಕನ್ನಡ ಚಿತ್ರರಂಗದಿಂದ ಮರೆಯಾಗುತ್ತಿದೆ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ.
ನಿಜಾ.. ಸ್ಟಾರ್‌ಗಳು ಅಂದ್ಮೇಲೆ ಅವರಿಗೆ ಚಿತ್ರಗಳ ಚಿತ್ರೀಕರಣ ಇರುತ್ತೆ. ಕೈ ತುಂಬಾ ಕೆಲಸ ಇರುತ್ತೆ. ಹಾಗಂಥ ಬರ್ತ್‌ಡೇ ದಿನದಂದು ಅಭಿಮಾನಿಗಳಿಗೆ ಸಿಗದೇ ಇದ್ದರೆ ಹೇಗೆ ? ಈ ಮೊದಲು ಕೂಡ ಚಿತ್ರಗಳ ಚಿತ್ರೀಕರಣಗಳು ನಡೆಯುತ್ತಿದ್ದವು. ಆದರೆ ಆಗ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕೆಲಸಕ್ಕೆ ಬ್ರೇಕ್ ಹಾಕಿ ಅನೇಕರು ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದರು. ಆದರೆ ಈಗ ಕೆಲಸದ ನೆಪ ಹೇಳಿ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಹೀಗಾಗಿ ಕನ್ನಡದ ಸ್ಟಾರ್‌ಗಳು ಕೂಡ ಬಾಲಿವುಡ್ ಸ್ಟಾರ್‌ಗಳಂತೆ ಅಭಿಮಾನಿಗಳ ಪಾಲಿಗೆ ಮರಿಚೀಕೆಯಾಗುತ್ತಿದ್ದಾರಾ ? ಅಭಿಮಾನಿಗಳಿಂದ ಕನ್ನಡದ ಸ್ಟಾರ್‌ಗಳು ಕೂಡ ಅಂತರ ಕಾಪಾಡಿಕೊಳ್ಳುತ್ತಿದ್ದಾರಾ ? ಎನ್ನುವ ಪ್ರಶ್ನೆ ಕೂಡ ಈಗ ಹಲವರನ್ನು ಕಾಡುತ್ತಿದೆ.


Click it and Unblock the Notifications











