ಅವರ ಸಹೋದರನಾಗಿಯೇ ಹೇಳುತ್ತಿದ್ದೇನೆ, ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ- ಡಾಲಿ ಧನಂಜಯ್...!
ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವನ್ನೂ ನೆತ್ತಿಗೇರಿಸಿಕೊಂಡರೆ ಏನಾಗುತ್ತೆ ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರದಂತೆ ನಿಲ್ಲುವುದು ದರ್ಶನ್ ಎಂಬ ಆರಡಿ ನಾಯಕನ ಬದುಕು.
ಇಂಥ ದರ್ಶನ್ ಈಗ ಜೈಲಿನಲ್ಲಿದ್ದಾರೆ. ನಿಜಾ.. ದರ್ಶನ್ ಕೇವಲ ಆರೋಪಿ ಮಾತ್ರ, ಇನ್ನೂ ಅಪರಾಧಿ ಎಂದು ಸಾಬೀತು ಆಗಿಲ್ಲ. ಹಾಗಂಥ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿಯೇ ಇಲ್ಲ ಎಂಬ ವಾದ ಮಾಡುವಂತೆ ಇಲ್ಲ. ಯಾಕೆಂದರೆ, ರೇಣುಕಾ ಸ್ವಾಮಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದು ಇದೇ ದರ್ಶನ್ ಫರ್ಮಾನು ಹೊರಡಿಸಿದ ನಂತರವೇ.

ಆದರೆ ಈ ಕಹಿ ಸತ್ಯವನ್ನು ಕೂಡ ಒಪ್ಪಲು ಅನೇಕರು ತಯಾರಿಲ್ಲ. ಅಭಿಮಾನಿಗಳ ಕಥೆ ಬಿಡಿ, ಚಿತ್ರರಂಗದಲ್ಲಿಯೇ ದರ್ಶನ್ ಈ ಕೆಲಸವನ್ನೆಲ್ಲ ಮಾಡಲು ಸಾಧ್ಯವೇ ಇಲ್ಲ ಎಂಬ ವಾದ ಮಾಡುವ ಒಂದು ವರ್ಗ ಇದೆ. ಇದರ ನಡುವೆ ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್, ದರ್ಶನ್ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ತಮ್ಮ ನೋವು, ಹತಾಶೆ ಮತ್ತು ಸಂಕಟವನ್ನೂ ಹೊರ ಹಾಕಿದ್ದಾರೆ.
ನಮ್ಮ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಕೋಟಿ ಸಿನಿಮಾ ರಿಲೀಸ್ ಇತ್ತು ಆ ಸಮಯದಲ್ಲಿ. ಅದರ ಮಧ್ಯ ನಡೆದಂತಹ ಘಟನೆ ಇದೆ. ಅದು ಹೋಗಲಿ, ಅದನ್ನು ಬಿಟ್ಟು ಬಿಡೋಣ. ಆದರೆ ಮಾತಾಡೋಣ ಅಂದ್ರೆ ನಾವೇನು ಮಾತನಾಡೋದು ಎಂಬ ಪ್ರಶ್ನೆಯನ್ನೂ ಕೇಳಿರುವ ಡಾಲಿ, ಅಲ್ಲಿ ಒಂದು ದುರಂತ ಆಗಿದೆ, ಒಂದು ಜೀವ ಹೋಗಿದೆ, ಒಂದು ತಪ್ಪಾಗಿದೆ. ಆ ಮನುಷ್ಯನ (ರೇಣುಕಾ ಸ್ವಾಮಿ) ತಂದೆ-ತಾಯಿ ಮುಖ ನೋಡಿದಾಗ, ಆ ಮನುಷ್ಯನ ಪತ್ನಿಯ ಮುಖ ನೋಡಿದಾಗ ಖಂಡಿತಾ ಯಾರಿಗಾದರೂ ಬೇಜಾರು ಆಗಿಯೇ ಆಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಏನ್ ನ್ಯಾಯ ಸಿಗಬೇಕೋ, ಅದು ಸಿಗಲೇಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಡಾಲಿ ಧನಂಜಯ್, ಈ ಕೇಸ್‌ನಲ್ಲಿ ಸಂತ್ರಸ್ತ ನಮ್ಮನೆಯವರೋ, ನಿಮ್ಮನೆಯವರೋ ಆಗಿದ್ದರೆ ಬೇಜಾರಾಗುತ್ತದೆ. ಹಾಗೆಯೇ, ಆರೋಪ ಯಾರ ಮೇಲೆ ಬಂದಿದೆಯೋ ಅವರು ಕೂಡ ನಮ್ಮನೆಯವರಾಗಿದ್ದಾಗ ನಮಗೆ ಅಥವಾ ನಿಮಗೂ ಕೂಡ ಬೇಜಾರಾಗುತ್ತದೆ ಅಲ್ವಾ? ಎಂಬ ಮರು ಪ್ರಶ್ನೆಯನ್ನೂ ಹಾಕಿದ್ದಾರೆ. ಈ ವಿಷಯ ಗೊತ್ತಾದಾಗ ನಾನು ಕೂಡ ಎರಡು ದಿನ ತುಂಬ ಬೇಜಾರು ಮಾಡಿಕೊಂಡೆ. ಒಂದು ಕಡೆ ಆ ಜೀವಕ್ಕೆ ಸ್ಪಂದಿಸಿದರೆ, ಇನ್ನೊಂದು ಕಡೆ ನಾವು ತುಂಬ ಅಭಿಮಾನದಿಂದ ಪ್ರೀತಿಸಿದವರು. ಇಂಥ ಕೇಸ್‌ನಲ್ಲಿ ಅವರ ಹೆಸರು ಕೇಳಿದಾಗ, ಖಂಡಿತ ಬೇಜಾರು, ಕೋಪ ಎಲ್ಲವೂ ಬಂದಿರುತ್ತದೆ ಎಂದು ಕೂಡ ಹೇಳಿದ್ದಾರೆ.
ನಾನು ಎಮೋಷನಲ್ ಆಗಿಯೇ ಮಾತನಾಡುತ್ತಿದ್ದೇನೆ. ಪಟ್ಟಣಗೆರೆ ಶೆಡ್ ಅಲ್ಲಿ ಆಗಿರುವುದನ್ನು ಯಾರೂ ಸಮರ್ಥನೆ ಮಾಡಿಕೊಳ್ಳಲು ಆಗುವುದಿಲ್ಲ ಎಂದಿರುವ ಡಾಲಿ ಧನಂಜಯ್, ಕೆಲವೊಂದರ ಬಗ್ಗೆ ಏಕಾಂಗಿಯೇ ಹೋರಾಡಬೇಕು. ನಾವು ಯಾರೂ ಆ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗಿರುವ ಕೃತ್ಯವನ್ನು ಖಂಡಿಸಬಹುದಷ್ಟೇ ಎಂದಿದ್ದಾರೆ. ಇನ್ನೂ..ಇಲ್ಲಿ ಯಾವುದನ್ನೂ ಸಮರ್ಥನೆ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲದಕ್ಕೂ ಕಾನೂನಿದೆ. ಅದರ ಮೂಲಕ ಏನು ಆಗಬೇಕು, ಅದು ಆಗುತ್ತದೆ. ಅದರ ನಡುವೆ ನಾವು ಏನು ಮಾತಾಡಿದರೂ ಉಪಯೋಗ ಇಲ್ಲ ಅಂತ ಅನ್ನಿಸುತ್ತದೆ ಎಂದಿರುವ ಡಾಲಿ ಧನಂಜಯ್, ನಾವು ಯಾರೂ ಅಲ್ಲಿ ಏನಾಯ್ತು ಅನ್ನೋದನ್ನು ನೋಡಿಲ್ಲ. ಅದು ಕಾನೂನಿಗೆ ತಿಳಿದಿರುತ್ತದೆ. ಅವರ ಸಹೋದರನಾಗಿಯೇ ಹೇಳುತ್ತಿದ್ದೇನೆ, ಅವರ ಕಡೆಯಿಂದ ತಪ್ಪಾಗಿದ್ದರೆ, ಖಂಡಿತಾ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.


Click it and Unblock the Notifications











