Gurudev Hoysala Trailer: ವಿಲನ್‌ಗಳ ಪಾಲಿಗೆ ದೊಡ್ಡ ವಿಲನ್ 'ಗುರುದೇವ್ ಹೊಯ್ಸಳ': ಇಲ್ಲಿ ಇವ್ನೇ ದೊಡ್ಡವ
ನಟರಾಕ್ಷಸ ಡಾಲಿ ಧನಂಜಯ ನಟನೆಯ 'ಗುರುದೇವ್ ಹೊಯ್ಸಳ' ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೊದಲ ನೋಟದಲ್ಲೇ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುವ ನಿರೀಕ್ಷೆ ಹುಟ್ಟಾಕ್ಕಿದೆ. ನಟ ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಜೊತೆಗೆ ಜಬರ್ದಸ್ತ್ ಡೈಲಾಗ್ಸ್ ಮಿಕ್ಸ್ ಮಾಡಿ ಟ್ರೈಲರ್ ಕ್ ಮಾಡಿದೆ ಚಿತ್ರತಂಡ.
ಮೇಲ್ನೋಟಕ್ಕೆ ಇದೊಂದು ಕಳ್ಳ- ಪೊಲೀಸ್ ಡ್ರಾಮಾ ಅನ್ನಿಸಿದರೂ ಗಡಿ ವಿವಾದ, ಭಾಷಾಭಿಮಾನದ ವಿಚಾರಗಳನ್ನು ಸೇರಿಸಿ ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಟ್ಟಿರೋದು ಗೊತ್ತಾಗ್ತಿದೆ. ಅಲ್ಲಲ್ಲಿ ಕನ್ನಡ ಧ್ವಜ, ರಾಯಣ್ಣ ಪ್ರತಿಮೆ ಕಾಣಿಸುತ್ತಾ ಹೋಗುತ್ತದೆ. ವಿಲನ್‌ಗಳ ಪಾಲಿಗೆ ಖಾಕಿ ತೊಟ್ಟ ವಿಲನ್ ಆಗಿ ಧನಂಜಯ ಅಬ್ಬರಿಸಿದ್ದಾರೆ. ದುಷ್ಟರ ಆರ್ಭಟದಿಂದ ತತ್ತರಿಸಿದ ಗಡಿನಾಡಿಗೆ ಹೊಸದಾಗಿ ಹೋಗುವ ಪೊಲೀಸ್ ಆಫೀಸರ್ 'ಗುರುದೇವ್ ಹೊಯ್ಸಳ' ಹೇಗೆ ಎಲ್ಲವನ್ನು ಹತೋಟಿ ತರ್ತಾನೆ ಅನ್ನೋದನ್ನು ಚಿತ್ರದಲ್ಲಿ ವಿಜಯ್ .ಎನ್ ಹೇಳಿದ್ದಾರೆ.

ಧನಂಜಯ ಎದುರು 'KGF' ಅವಿನಾಶ್, ಪ್ರತಾಪ್ ನಾರಾಯಣ್ ಹಾಗೂ ನವೀನ್ ಶಂಕರ್ ವಿಲನ್‌ಗಳಾಗಿ ಟಕ್ಕರ್ ಕೊಟ್ಟಿದ್ದಾರೆ. 'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು ಟ್ರೈಲರ್‌ನಲ್ಲಿ ಅಷ್ಟಾಗಿ ಅವರ ದರ್ಶನ ಆಗುವುದಿಲ್ಲ. ಅಜನೀಶ್ ಲೋಕನಾಥ್ ಬಿಜಿಎಂ ಹಿನ್ನೆಲೆಯಲ್ಲಿ ಧನಂಜಯ ಆರ್ಭಟದ ದೃಶ್ಯಗಳನ್ನು ಜೋಡಿಸಿ ಟ್ರೈಲರ್ ಚೆಂದಗಾಣಿಸಿದ್ದಾರೆ. ಬಂದೂಕಿನ ಸದ್ದು ಜೋರಾಗಿದೆ. ಮಾಸ್ತಿ ಡೈಲಾಗ್ಸ್ ಮತ್ತೊಂದು ಹೈಲೆಟ್ ಎನಿಸಿದೆ. ನವೀನ್ ಶಂಕರ್ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕಾಗಿ ದೇಹ ದಂಡಿಸಿ ತಯಾರಾಗಿದ್ದಾರೆ.
ಮೃಗದಷ್ಟು ಕ್ರೂರಿಯಾದ ವಿಲನ್ ಎದುರು ಡಾಲಿ ಮತ್ತಷ್ಟು ಭಯಂಕರವಾಗಿ ಅಬ್ಬರಿಸೋದು ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ. ಟ್ರೈಲರ್ ನೋಡುತ್ತಿದ್ದರೆ ಚಿತ್ರದ ಒನ್‌ಲೈನ್ ಸ್ಟೋರಿ ಏನು ಅನ್ನೋದು ಅರ್ಥವಾಗಿಬಿಡುತ್ತದೆ. ದಾದಾ, ಬಾಲಿ, ನಾನಾ ಎನ್ನುವ ದುಷ್ಟರನ್ನು ಎದುರಾಕಿಕೊಳ್ಳುವ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳ, ಇದರಿಂದ ಆತನಿಗೆ ಎದುರಾಗುವ ಸಮಸ್ಯೆಗಳು, ಅದನ್ನೆಲ್ಲಾ ಮೀರಿ ಆತ ಹೇಗೆ ತನ್ನ ಗುರಿ ಮುಟ್ಟುತ್ತಾನೆ ಅನ್ನೋದು ಚಿತ್ರದ ಕಥೆ. ಆದರೆ ಈ ಎಳೆಯನ್ನು ಎಷ್ಟು ಪರಿಣಾಮಕಾರಿಯಾಗಿ ಹಾಗೂ ಬಿಗಿಯಾಗಿ ಹೇಳ್ತಾರೆ ಎನ್ನುವ ಕುತೂಹಲ ಟ್ರೈಲರ್ ನೋಡಿದ ಮೇಲೆ ಕೆರಳುತ್ತಿದೆ.
ಸಿನಿರಸಿಕರು ಟ್ರೈಲರ್ ನೋಡಿ ಫಸ್ಟ್ ಡೇ ಫಸ್ಟ್ ಶೋ ನೋಡೋದು ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಬಹುತೇಕ ಸಿನಿಮಾ ಉತ್ತರ ಕರ್ನಾಟಕ ಭಾಷೆಯನ್ನು ಬಳಸಿಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟನ ಚಿತ್ರವನ್ನು ಹೀಗೆ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಷೆಯಲ್ಲಿ ತರ್ತಿರೋದು ವಿಶೇಷ. ಕಾರ್ತಿಕ್.ಎಸ್ ಸಿನಿಮಾಟೋಗ್ರಫಿ, ದೀಪು ಎಸ್ ಕುಮಾರ್ ಎಡಿಟಿಂಗ್ 'ಗುರುದೇವ್ ಹೊಯ್ಸಳ' ಚಿತ್ರಕ್ಕಿದೆ. ಇನ್ನು ಅಚ್ಯುತ್ ಕುಮಾರ್, ರಾಜೇಶ್ ನಟರಾಜ್, ಅನಿರುದ್ಧ್ ಭಟ್, ಮಯೂರಿ ನಟರಾಜ್, ಪ್ರತಾಪ್ ನಾರಾಯಣ್ ತಾರಾಗಣದಲ್ಲಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ 'ಗುರುದೇವ್ ಹೊಯ್ಸಳ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟೀಸರ್, ಸಾಂಗ್ಸ್ ನಂತರ ಈಗ ಟ್ರೈಲರ್‌ನಿಂದ 'ಗುರುದೇವ್ ಹೊಯ್ಸಳ' ಸಿನಿಮಾ ಸದ್ದು ಮಾಡ್ತಿದೆ. ಮಾರ್ಚ್ 30ಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ಧನಂಜಯ ನಟನೆಯ 25ನೇ ಸಿನಿಮಾ ಆಗಿರೋದ್ರಿಂದ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ವರ್ಷ ಬಿಡುಗಡೆ ಆಗುತ್ತಿರುವ ಡಾಲಿ ಮೊದಲ ಸಿನಿಮಾ 'ಗುರುದೇವ್ ಹೊಯ್ಸಳ'. ಈ ಹಿಂದೆ 'ಸಲಗ' ಚಿತ್ರದಲ್ಲಿ ಧನು ಪೊಲೀಸ್ ಆಫೀಸರ್ ಸಾಮ್ರಾಟ್ ಪಾತ್ರದಲ್ಲಿ ಮಿಂಚಿದ್ದರು. ಅದಕ್ಕಿಂತ ಇದು ವಿಭಿನ್ನವಾದ ಪಾತ್ರ ಅನ್ನೋದು ಗೊತ್ತಾಗ್ತಿದೆ.


Click it and Unblock the Notifications











