'ದಾರಿ ತಪ್ಪಿದ ಮಗ'ನೊಂದಿಗೆ ರಾಜ್ಯೋತ್ಸವ ಆಚರಿಸಿ
'ದಾರಿ ತಪ್ಪಿದ ಮಗ' ಹೆಸರಿನಲ್ಲಿ ಡಾ.ರಾಜ್ ಕುಮಾರ್ ಮೊಮ್ಮಗ ಧೀರನ್ ರಾಮ್ ಕುಮಾರ್ ಸಿನಿಮಾ ಮಾಡುತ್ತಿದ್ದರು. ಆದರೆ, ಆ ಸಿನಿಮಾದ ಟೈಟಲ್ ಬದಲಾಗಿದೆ. ಆದರೂ, ಇದೀಗ 'ದಾರಿ ತಪ್ಪಿದ ಮಗ' ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದ್ದಾನೆ.
ಡಾ. ರಾಜ್ ಕುಮಾರ್ ಅಭಿನಯದ ಈ ಸಿನಿಮಾ ಇದೇ ತಿಂಗಳು ಮರು ಬಿಡುಗಡೆ ಆಗುತ್ತಿದೆ. ನವೆಂಬರ್ 22 ರಂದು ಸಿನಿಮಾವನ್ನು ರೀ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. 7.1 ಡಿಟಿಎಸ್ ಹಾಗೂ 2ಕೆ ರೆಸೊಲ್ಯೂಶನ್ ನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. 'ದಾರಿ ತಪ್ಪಿದ ಮಗ'ನಿಗೆ ಹೊಸ ರೂಪ ನೀಡಲು ಅಂದಾಜು 26 ಲಕ್ಷ ರೂಪಾಯಿ ಖರ್ಚಾಗಿದೆಯಂತೆ.
ಮರು ಬಿಡುಗಡೆ ಆಗುತ್ತಿದ್ದರೂ, ದೊಡ್ಡ ಮಟ್ಟದಲ್ಲಿ ಮಾಡುವ ಪ್ಲಾನ್ ಇದೆ. ಕರ್ನಾಟಕದ 120ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೂಲಕ ರಾಜ್ ಕುಮಾರ್ ಅಭಿಮಾನಿಗಳು ರಾಜ್ಯೋತ್ಸವ ಆಚರಿಸಬಹುದು.

ಅಂದಹಾಗೆ, 'ದಾರಿ ತಪ್ಪಿದ ಮಗ' 1975 ರಲ್ಲಿ ಬಿಡುಗಡೆ ಆಗಿತ್ತು. ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಕಲ್ಪನಾ, ಆರತಿ, ಮಂಜುಳಾ ನಾಯಕಿಯರಾಗಿದ್ದರು. ಪೇಕೇಟಿ ಶಿವರಾಂ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು. ಜಿಕೆ ವೆಂಕಟೇಶ್ ಸಂಗೀತ, ಚಿ ಉದಯಶಂಕರ್ ಸಾಹಿತ್ಯ ಬರೆದಿದ್ದರು. ಈ ಸಿನಿಮಾ ಆ ಕಾಲದಲ್ಲಿ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು.
ಈ ಹಿಂದೆ ರಾಜ್ ಕುಮಾರ್ ಅವರ ಅನೇಕ ಸಿನಿಮಾಗಳು ಮರು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿವೆ. 'ಕಸ್ತೂರಿ ನಿವಾಸ', 'ಬಬ್ರುವಾಹನ', 'ಗಂಧದ ಗುಡಿ' ಈ ಸಿನಿಮಾಗಳು ಅನೇಕ ಬಾರಿ ಚಿತ್ರಮಂದಿರಕ್ಕೆ ಬಂದಿವೆ.


Click it and Unblock the Notifications











