ಕೊರೊನಾದಿಂದ ನೆಲಕಚ್ಚಿರುವ ಧಾರವಾಹಿ ಉದ್ಯಮ: ದಿನಕ್ಕೆಷ್ಟು ನಷ್ಟ ಗೊತ್ತೆ?
ಕೊರೊನಾ ಭೀತಿಯಿಂದಾಗಿ ಇಡೀಯ ಚಿತ್ರರಂಗ ಬಂದ್ ಆಗಿದೆ. ಚಿತ್ರೀಕರಣ, ಹೊಸ ಸಿನಿಮಾ ಬಿಡುಗಡೆ ಯಾವುದೂ ಇಲ್ಲ. ಸ್ಟಾರ್ ನಟ-ನಟಿಯರೇನೋ ಹಾಯಾಗಿ ಮನೆಯಲ್ಲಿದ್ದಾರೆ. ಆದರೆ ನಿಜಕ್ಕೂ ಸಮಸ್ಯೆ ಆಗಿರುವುದು ದಿನಗೂಲಿ ನೌಕರರಿಗೆ ಮತ್ತು ನಿರ್ಮಾಪಕರಿಗೆ.
Recommended Video
ಸಿನಿಮಾ ಕತೆ ಒಂದೆಡೆಯಾದರೆ ದಿನದ ಲೆಕ್ಕದಲ್ಲಿಯೇ ನಡೆಯುವ ಧಾರವಾಹಿ ಉದ್ಯಮವಂತೂ ಪೂರ್ಣವಾಗಿ ನೆಲಕಚ್ಚಿದೆ. ಧಾರವಾಹಿಯ ನಿರ್ಮಾಪಕರುಗಳು, ನಟರು, ದಿನಗೂಲಿ ನೌಕರರು ಹೈರಾಣಾಗಿದ್ದಾರೆ.
ಸಿನಿಮಾಗಳು ಇಂತಿಷ್ಟು ಅವಧಿಗೆಂದು ನಡೆದರೆ, ಧಾರವಾಹಿಗಳದ್ದು ಹಾಗಲ್ಲ. ಅದರದ್ದು ದಿನದ ಲೆಕ್ಕಾಚಾರ. ಇಡೀಯ ನಟ-ನಟಿ, ನಿರ್ಮಾಪಕ, ತಂತ್ರಜ್ಞರು, ಸಹ ನಟರು, ಕಾರ್ಮಿಕರು, ತೆರೆಯ ಹಿಂದೆ ಕೆಲಸ ಮಾಡುವವರು ಎಲ್ಲರೂ ದಿನದ ಲೆಕ್ಕಾಚಾರದಲ್ಲಿಯೇ ಸಂಪಾದನೆ ಎಣಿಸುತ್ತಿರುತ್ತಾರೆ. ಆದರೆ ಈಗ ಕೊರೊನಾ ಭೀತಿಯಿಂದ ಚಿತ್ರೀಕರಣ ಬಂದ್ ಆಗಿದ್ದು ಎಲ್ಲರನ್ನೂ ಸಮಸ್ಯೆಗೆ ಸಿಲುಕಿಸಿದೆ.

ಧಾರವಾಹಿ ನಿರ್ಮಾಪಕರು ಹೇಳುವುದೇನು?
ಮಾಂಗಲ್ಯಂ ತಂತುನಾನೇನಾ ಮತ್ತು ಭೂಮಿತಾಯಾಣೆ ಧಾರವಾಹಿ ನಿರ್ಮಾಪಕ ಸೋಮಶೇಖರ್ ಹೇಳುವಂತೆ. ಧಾರವಾಹಿ ನಿರ್ಮಾಣ ಸುಲಭವಲ್ಲ, ಪ್ರತಿ ದಿನ 90 ರಿಂದ 1.50 ಲಕ್ಷದ ವರೆಗೆ ಖರ್ಚು ಬರುತ್ತದೆ. ಒಂದು ದಿನ ಶೂಟಿಂಗ್ ನಿಂತರೆ ಖರ್ಚಿಗೂ ಹೆಚ್ಚಿನ ಮೊತ್ತದ ನಷ್ಟ ನಿರ್ಮಾಪಕನಿಗೆ ಆಗುತ್ತದೆ ಎನ್ನುತ್ತಾರೆ ಅವರು.

ತಿಂಗಳಲ್ಲಿ ಎಷ್ಟು ದಿನ ಶೂಟಿಂಗ್ ಮಾಡಲಾಗುತ್ತದೆ?
ತಿಂಗಳಲ್ಲಿ ಸರಾಸರಿ 22 ರಿಂದ 25 ದಿನಗಳು ಧಾರವಾಹಿ ಚಿತ್ರೀಕರಣ ಇರುತ್ತದೆ. ನಟ-ನಟಿಯರಿಂದ ಹಿಡಿದು ಬಹುತೇಕ ಎಲ್ಲರಿಗೂ ದಿನದ ಲೆಕ್ಕದಲ್ಲಿಯೇ ಸಂಭಾವನೆಯನ್ನು ಗೊತ್ತು ಮಾಡಲಾಗಿರುತ್ತದೆ. ಆದರೆ ಪೇಮೆಂಟ್ ಮಾತ್ರ ಕೆಲವೆಡೆ ಆ ದಿನದಂದೇ ಅಥವಾ ಒಟ್ಟಾಗಿ ತಿಂಗಳಿಗೊಮ್ಮೆ ನೀಡಲಾಗುತ್ತದೆ.

ಒಂದು ಧಾರವಾಹಿ ಸೆಟ್‌ನಲ್ಲಿ ಎಷ್ಟು ಮಂದಿ ದುಡಿಯುತ್ತಾರೆ?
ಒಂದು ಧಾರವಾಹಿ ಚಿತ್ರೀಕರಣದ ಸೆಟ್‌ನಲ್ಲಿ ಸೀನ್ ಗೆ ಬೇಕಾದಷ್ಟು ಕಲಾವಿದರು, ಒಬ್ಬ ಮ್ಯಾನೆಜರ್, ಇಬ್ಬರು ಅಕೌಂಟೆಟ್, ಐದು ಮಂದಿ ಊಟದವರು, ಮೂವರು ಕ್ಯಾಮೆರಾ, ಇಬ್ಬರು ಮೆಕ್‌ಅಪ್ ಕಲಾವಿದರು, ಸಹ ನಿರ್ದೇಶಕ ಮತ್ತು ನಿರ್ದೇಶಕ ಸೇರಿ ಮೂವರು, ಏಳು ಮಂದಿ ಲೈಟ್ ಬಾಯ್ಸ್, ಸೆಟ್ ಬಾಯ್ಸ್ ಮೂವರು, ಪ್ರೊಡಕ್ಷನ್ ಬಾಯ್ಸ್ 3, ಹೇರ್ ಡ್ರೆಸ್ಸರ್ಸ್ ಒಬ್ಬರು, ಕತೆ-ಸಂಭಾಷಣೆ ಬರೆಯಲು ಮೂವರು, ಸಂಕಲನಕ್ಕೆ ಮೂವರು, ಕಾಸ್ಟ್ಯೂಮರ್ ಒಬ್ಬರು, ಗಾಡಿಗಳ ನಿರ್ವಹಣೆಗೆ ಕನಿಷ್ಟ ಮೂವರು, ಇಬ್ಬರು ಸೌಂಡ್ ರೆಕಾರ್ಡರ್ ಇರುತ್ತಾರೆ. ಒಂದು ಧಾರವಾಹಿ ಸೆಟ್‌ನಲ್ಲಿ ಕನಿಷ್ಟ 50 ಮಂದಿ ಗರಿಷ್ಟ 70 ಮಂದಿ ಇರುತ್ತಾರೆ.

ಪ್ರತಿದಿನ ಕೋಟ್ಯಂತರ ನಷ್ಟವಾಗುತ್ತಿದೆ
ರಾಜ್ಯದಲ್ಲಿರುವ ವಿವಿಧ ಕನ್ನಡ ಚಾನೆಲ್‌ಗಳು ಅದರಲ್ಲಿ ಪ್ರಸಾರವಾಗುತ್ತಿರುವ ಸಂಖ್ಯೆ ಲೆಕ್ಕ ಹಾಕಿದರೆ ಸುಮಾರು ಐವತ್ತು ದಾಟುತ್ತದೆ. ಪ್ರತಿ ಧಾರವಾಹಿಗೆ ಕನಿಷ್ಟ ಐವತ್ತು ಮಂದಿ ಪ್ರತಿದಿನ ದುಡಿಯುತ್ತಾರೆ, ನಟ, ನಿರ್ದೇಶಕ, ತಂತ್ರಜ್ಞರನ್ನು ಹೊರತುಪಡಿಸಿದರೆ ಸಣ್ಣ ಮಟ್ಟಿನ ದಿನಗೂಲಿ ಕಲಾವಿದರು, ತಂತ್ರಜ್ಞರೇ ಹೆಚ್ಚು ಇವರ ಜೀವನ ನಿರ್ವಹಣೆ ತೀವ್ರ ಸಂಕಷ್ಟದಲ್ಲಿದೆ. ಇವರ ಆದಾಯ, ಖರ್ಚು, ನಿರ್ಮಾಪಕರಿಗೆ ಬರಬೇಕಾದ ಹಣ ಲೆಕ್ಕಾ ಹಾಕಿದರೆ ಪ್ರತಿದಿನ ಕೋಟ್ಯಂತರ ಹಣ ನಷ್ಟವಾಗುತ್ತಿದೆ.

ಸಾಲದ ಮೇಲಿನ ಬಡ್ಡಿ ಏರುತ್ತಲೇ ಇದೆ
ನಿರ್ಮಾಪಕರುಗಳಂತೂ ತೀವ್ರ ಸಂಕಷ್ಟದಲ್ಲಿದ್ದಾರೆ. ಬ್ಯಾಂಕಿನಿಂದ ಪಡೆದ ಸಾಲದ ಬಡ್ಡಿಗಳು ಏರುತ್ತಲೇ ಇವೆ. ಆದರೆ ಚಾನೆಲ್‌ನಿಂದ ಹಣ ಬರುತ್ತಿಲ್ಲ. ಧಾರವಾಹಿ ಚಿತ್ರೀಕರಿಸಿ ಅದು ಪ್ರಸಾರವಾದರೆ ತಾನೇ ಹಣ ಬರುವುದು? ಮರು ಪ್ರಸಾರಗೊಂಡ ಎಪಿಸೋಡ್‌ನ ಹಣವನ್ನು ಚಾನೆಲ್‌ನರು ನೀಡುವುದಿಲ್ಲ, ಆದರೆ ಮರುಪ್ರಸಾರಕ್ಕೆ ಜಾಹೀರಾತು ಮಾತ್ರ ಹೊಸದಾಗಿಯೇ ತೆಗೆದುಕೊಳ್ಳುತ್ತಾರೆ.

ಲಾಕ್‌ಡೌನ್ ಮುಗಿಯುವ ವೇಳೆಗೆ ಆರ್ಥಿಕ ಸ್ಥಿತಿ ಗಂಭೀರ
ಧಾರವಾಹಿ, ಸಿನಿಮಾಗಳನ್ನೇ ನಂಬಿಕೊಂಡಿದ್ದ ಸಾವಿರಾರು ಮಂದಿ ದಿನಗೂಲಿ ನೌಕರರು, ಜ್ಯೂನಿಯರ್ ಆರ್ಟಿಸ್ಟ್‌ಗಳು, ಪ್ರೊಡಕ್ಷನ್ ಕೆಲಸದವರು, ಲೈಟ್ ಬಾಯ್‌ಗಳು ಜೀವನ ನಿರ್ವಹಣೆಗೆ ಆಕಾಶ ನೋಡುವಂತಾಗಿದೆ. ಕೊರೊನಾ ಲಾಕ್‌ಡೌನ್ ಮುಗಿಯುವಷ್ಟರಲ್ಲಿ ಅವರ ಆರ್ಥಿಕ ಸ್ಥಿತಿ ಪಾತಾಳ ತಲುಪಿರುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ.


Click it and Unblock the Notifications











