"ನಿನ್ನ ಹೆಸ್ರು ಕೆಡಿಸುವ ಸಂಚು ನಡೀತಿದೆ, ನಾನು ನಿನ್ನ ಜೊತೆಗಿರುತ್ತೇನೆ"; ರಕ್ಷಿತ್ ಶೆಟ್ಟಿಗೆ ದೈವ ಅಭಯ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ರಕ್ಷಿತ್ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆಯಾಗಿತ್ತು. ಸದ್ಯ 'ರಿಚರ್ಡ್ ಆಂಟನಿ' ಸಿನಿಮಾ ಕಡೆ ಮುಖ ಮಾಡಿರುವ ರಕ್ಷಿತ್ ಶೆಟ್ಟಿಗೆ ಕೊರಗಜ್ಜ ಧೈರ್ಯ ನೀಡಿದ್ದಾರೆ.
ಕೆಲವರು ನಿನ್ನ ಹೆಸರು ಕೆಡಿಸಲು ಸಂಚು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿ ಅಡಗಿಸಿಟ್ಟು ಸದಾ ನಿನ್ನ ಒಳ್ಳೆಯ ಕಾರ್ಯಗಳಿಗೆ ನಿನ್ನ ಬೆನ್ನೆಲುಬಾಗಿ ನಾನು ನಿಲ್ಲುತ್ತೇನೆ ಎಂದು ಕೊರಗಜ್ಜ ದೈವ, ರಕ್ಷಿತ್ ಶೆಟ್ಟಿಗೆ ಅಭಯ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಸಿನಿಮಾ ಕೆಲಸಗಳ ನಿಮಿತ್ತ ನಟ ರಕ್ಷಿತ್ ಶೆಟ್ಟಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ತಮ್ಮ ಹುಟ್ಟೂರಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಕರಾವಳಿ ಭಾಗದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅದರಲ್ಲೂ ದೈವದ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಾಗುತ್ತಾರೆ. ಇತ್ತೀಚೆಗೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಪಾಲ್ಗೊಂಡಿದ್ದರು.
ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ ನೇಮೋತ್ಸವದಲ್ಲಿ ಪಾಲ್ಗೊಂಡು, ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ತಮ್ಮ ಮುಂದಿನ ಯೋಜನೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ವಿಘ್ನವಾಗಿ ನಡೆಸಿಕೊಡಬೇಕು ಕೊರಗಜ್ಜ ದೈವದ ಬಳಿ ರಕ್ಷಿತ್ ಶೆಟ್ಟಿ ಕೋರಿದ್ದಾರೆ.
ಈ ವೇಳೆ ನಿನ್ನ ಕೆಲಸ ಕಾರ್ಯಗಳಲ್ಲಿ ನೀನು ಧೈರ್ಯವಾಗಿ ಮುಂದೆ ಸಾಗು. ಯಾವುದೇ ವಿಘ್ನ ಎದುರಾದಂತೆ ನೋಡಿಕೊಳ್ಳಲು ನಾನಿದ್ದೇನೆ. ಕೆಲವರು ನಿನ್ನ ಹೆಸರನ್ನು ಕೆಡಿಸಲು ಹೊಂಚು ಹಾಕುತ್ತಿದ್ದಾರೆ. ಅದು ನನಗೂ ಗೊತ್ತಾಗಿದೆ. ಅಂತಹ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಯೋಜನೆಗಳಿಗೆ ನಿನ್ನ ಬೆನ್ನೆಲುಬಾಗಿ ಜೊತೆಗಿರುತ್ತೇನೆ ಎಂದು ರಕ್ಷಿತ್ ಶೆಟ್ಟಿಗೆ ಕೊರಗಜ್ಜ ಅಭಯ ನೀಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಜೊತೆಗೆ ಇನ್ನು 4 ಸಿನಿಮಾಗಳನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಕಥೆ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಸಿನಿಮಾ ಟೈಟಲ್‌ಗಳು ಕೂಡ ಅನೌನ್ಸ್ ಆಗಿದೆ. ಕೆಲ ದಿನಗಳ ಹಿಂದೆಯೇ 'ಸಪ್ತ ಸಾಗರದಾಚೆ ಎಲ್ಲೋ' ನಂತರ ತಮ್ಮ ಸಿನಿಮಾಗಳು ಯಾವುದು ಎನ್ನುವ ಮಾತಿಹಿ ನೀಡಿದ್ದರು. ಟ್ವೀಟ್ ಮಾಡಿದ್ದ ರಕ್ಷಿತ್ ಶೆಟ್ಟಿ "RA (ರಿಚರ್ಡ್ ಆಂಟನಿ), PK- 1 (ಪುಣ್ಯಕೋಟಿ 1), PK- 2 (ಪುಣ್ಯಕೋಟಿ 2), ಮತ್ತು M2M (Midnight to Moksha).. ಈ ನಾಲ್ಕು ಚಿತ್ರಗಳು ಮಾತ್ರ ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿವೆ" ಎಂದು ಬರೆದುಕೊಂಡಿದ್ದರು.


Click it and Unblock the Notifications











