»   » ಕನಸು ಕಟ್ಟದೇ ಕನಸಿನ ಕನ್ಯೆಯಾದ ದಾಮಿನಿ

ಕನಸು ಕಟ್ಟದೇ ಕನಸಿನ ಕನ್ಯೆಯಾದ ದಾಮಿನಿ

Subscribe to Filmibeat Kannada

‘ಉಪೇಂದ್ರ’ ಸಿನಿಮಾದಿಂದ ಚಿತ್ರರಂಗ ಪ್ರವೇಶಿಸಿದ ದಾಮಿನಿ ನಟಿಯಾದದ್ದು ಒಂದು ಆಕಸ್ಮಿಕ. ಈ ವಿಷಯವನ್ನು ಮೊನ್ನೆ ಏಟ್ರಿಯಾ ಹೋಟೆಲ್‌ನಲ್ಲಿ ದಾಮಿನಿಯೇ ಹೇಳಿದರು. ಆ ಚಿತ್ರದಲ್ಲಿ ಇವರಿಗೆ ರವೀನಾ ಟಂಡನ್‌ ಹಾಗೂ ಪ್ರೇಮಾ ಅವರ ಪಾತ್ರಗಳಿಗಿಂತಲೂ ವಿಭಿನ್ನವಾದ ಪಾತ್ರ ದೊರಕಿತ್ತಂತೆ.

ದಾಮಿನಿಗೆ ಚಲನಚಿತ್ರದಲ್ಲಿ ನಟಿಸಬೇಕೆಂಬ ಆಸೆಯೂ ಇರಲಿಲ್ಲ. ತಾನು ನಟಿ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲವಂತೆ. ಎಲ್ಲ ಹುಡುಗಿಯರಂತೆ ಈಕೆಯೂ ‘ಎ’ ಚಿತ್ರದ ನಾಯಕ ಉಪೇಂದ್ರರ ಅಭಿಮಾನಿ. ಒಮ್ಮೆ ಉಪೇಂದ್ರರನ್ನು ಕಾಣುವ ಆಸೆಯಿಂದ, ಸುಂದರವಾದ ಅವರ ಫೋಟೋ ಒಂದನ್ನು ಉಪೇಂದ್ರರಿಗೆ ಕಳುಹಿಸಿದರು.

ಫೋಟೋ ನೋಡಿದ ಉಪ್ಪಿ, ತಮ್ಮ ಚಿತ್ರದಲ್ಲಿ ದಾಮಿನಿಗೆ ಒಳ್ಳೇ ಪಾತ್ರವನ್ನೇ ಕೊಟ್ಟರು. ಅನಿರೀಕ್ಷಿತವಾಗಿ ಸಿಕ್ಕ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಾಮಿನಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿಯೇ ಹೊರಹೊಮ್ಮಿದರು.

ಆದರೂ ದಾಮಿನಿಗೆ ಕನ್ನಡ ಚಿತ್ರರಂಗದಲ್ಲಿ ಸ್ಥಿರವಾಗಿ ನೆಲೆಯೂರುವಂತಹ ಉತ್ತಮವಾದ ಪಾತ್ರ ಸಿಕ್ಕೇ ಇಲ್ಲ. ವಂದೇ ಮಾತರಂ ಚಿತ್ರಕ್ಕೆ ಆಫರ್‌ ಬಂದಾಗ ತಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದು ಹಿಗ್ಗಿದ ದಾಮಿನಿಗೆ ಚಿತ್ರ ನೋಡಿದ ಮೇಲೆ ನಿರಾಶೆ ಆಗಿದ್ದು ಸಹಜವೇ. ದಾಮಿನಿ ನಟಿಸಿದ್ದ ಹಲವಾರು ದೃಶ್ಯಗಳು ಚಿತ್ರ ಬಿಡುಗಡೆ ಆದಾಗ ಕಣ್ಮರೆ , ಅಂದರೆ ಕಟ್‌ ಆಗಿದ್ದವು.

ಹೀಗಾಗೇ ದಾಮಿನಿ ಚಿತ್ರ ಒಪ್ಪಿಕೊಳ್ಳುವ ಮುನ್ನ ಚಿತ್ರದ ಬಗ್ಗೆ ಎಲ್ಲ ವಿವರ ಕೇಳಿ ತಿಳಿದುಕೊಂಡು, ಆ ನಂತರ ಒಪ್ಪಿಗೆ ಸೂಚಿಸುವ ನಿರ್ಧಾರ ಮಾಡಿದ್ದಾರೆ. ಮಿಗಿಲಾಗಿ ವಂದೇ ಮಾತರಂನಲ್ಲಿ ಫೈರ್‌ ಬ್ರಾಂಡ್‌ ವಿಜಯಶಾಂತಿ ಮುಂದೆ ದಾಮಿನಿ ಮಸುಕಾಗಿದ್ದು ಅಚ್ಚರಿಯ ವಿಷಯ ಏನಲ್ಲ. ದಾಮಿನಿಗೆ ಈಗ ಮತ್ತೂ ಒಂದು ವಿಷಯ ರಿಯಲೈಸ್‌ ಆಗಿದೆಯಂತೆ. ಅದು ಏನು ಗೊತ್ತೆ?

ಚಿತ್ರದ ಹೀರೋ ಯಾರು ಎಂಬುದು ಮುಖ್ಯ ಅಲ್ಲ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಎಷ್ಟು ಡೆಪ್ತ್‌ ಇದೆ ಅನ್ನೋದೇ ಮುಖ್ಯ ಅಂತಾರೆ ದಾಮಿನಿ. ಹಾಗಾಗಿ ದಾಮಿನಿ ತಮ್ಮ ನಟನಾ ಕೌಶಲ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸುವ ಉತ್ತಮ ಪಾತ್ರದ ಅನ್ವೇಷಣೆಯಲ್ಲಿದ್ದಾರೆ. ದಾಮಿನಿಗೆ ಟಿ.ವಿ. ಸೀರಿಯಲ್‌ಗಳಲ್ಲಿ ಬುಲಾವ್‌ ಬಂತಂತೆ. ಆದರೆ, ಏಕೋ ದಾಮಿನಿ ಒಪ್ಪಿಕೊಂಡಿಲ್ಲ. ಈ ಮದ್ಯೆ ದಾಮಿನಿ ತೆಲುಗಿನ ‘ರಾ’ ಎಂಬ ಹೆಸರಿನ ಚಿತ್ರದಲ್ಲಿ ಹುಚ್ಚಿಯಾಗಿ ನಟಿಸಿದ್ದಾರೆ.

ಈಗ ದಾಮಿನಿ ಶಿವರಾಜ್‌ ಕುಮಾರ್‌ ನಾಯಕರಾಗಿರುವ ‘ಅಸುರ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದಾಮಿನಿ ಸಕತ್‌ ಬೋಲ್ಡ್‌ಆಗಿ ನಟಿಸಿದ್ದಾರೆ ಎಂದು ಶಿವರಾಜ್‌ ಕುಮಾರರೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಈ ಚಿತ್ರದ ಹಾಡೊಂದರಲ್ಲಿ ದಾಮಿನಿ ಯರ್ರಾಬಿರ್ರಿ ಮಿಂಚಿದ್ದಾರಂತೆ. ಈ ಚಿತ್ರವಾದರೂ ದಾಮಿನಿಗೆ ಬ್ರೇಕ್‌ ನೀಡುತ್ತದೆಯೇ ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada