»   » ಬೇಡವೆಂದವರ ಕಣ್ಗೆ ನಾಯಕಿಯಂತೆ ಕಾಣಲು ತೂಕ ಹೆಚ್ಚಿಸಿಕೊಳ್ಳುವ ಸಾಹಸಕ್ಕಿಳಿದ ದಾಮಿನಿಗೆ ಅದೇ ಶಾಪವಾಗಿದೆ. ಧಾರಾನಗರಿಯ ಈ ಹುಡುಗಿ ಅಂತರಂಗವೇನು ಗೊತ್ತೆ?

ಬೇಡವೆಂದವರ ಕಣ್ಗೆ ನಾಯಕಿಯಂತೆ ಕಾಣಲು ತೂಕ ಹೆಚ್ಚಿಸಿಕೊಳ್ಳುವ ಸಾಹಸಕ್ಕಿಳಿದ ದಾಮಿನಿಗೆ ಅದೇ ಶಾಪವಾಗಿದೆ. ಧಾರಾನಗರಿಯ ಈ ಹುಡುಗಿ ಅಂತರಂಗವೇನು ಗೊತ್ತೆ?

Subscribe to Filmibeat Kannada

ಸಿನಿಮಾ ನಾಯಕಿ ಪಟ್ಟ ಈಕೆಗೆ ಬಯಸದೇ ಬಂದ ಭಾಗ್ಯ. ಡುಮ್ಮಿಯಾಗಿರುವುದು ದೌರ್ಭಾಗ್ಯ. ಕಾಲೇಜು ಮೆಟ್ಟಿಲು ಹತ್ತಿ, ಬೈ ಟು ಕಾಫಿ ನಡುವೆ ಕಾಮನಬಿಲ್ಲ ಕಟ್ಟುವ ಕನಸು ಕಾಣಬೇಕಾದ ವಯಸ್ಸಲ್ಲಿ ಹಿರಿ ಹೆಂಗಸಂತೆ ಸೊಪ್ಪು ಹಿಡಿದು ನಾಗಮ್ಮನ ಪೂಜೆ ಮಾಡುವ ದೇವಿ ಭಾಗ್ಯ. ಉಪೇಂದ್ರ ಚಿತ್ರದ ಆ ದಾಮಿನಿಯಿಂದ ಈ ದಾಮಿನಿವರೆಗೆ ಸಂಕ್ಷಿಪ್ತ ಪರಿಚಯವಿದು.

ಧಾರಾನಗರಿಯ ಈ ಹುಡುಗಿ ಅಕ್ಷರಶಃ ಕನ್ನಡದವಳು. ‘ಉಪೇಂದ್ರ’ದಲ್ಲಿ ಈಕೆಯನ್ನು ಕಂಡವರೆಲ್ಲಾ ಬ್ರೇವೋ ಅಂದರು. ಮುಗ್ಧತೆಯ ಮೊಗೆದುಕೊಂಡರು. ಆದರೆ ಮುಂದೆ....ಥಳಕು, ಬಣ್ಣಗಳ ಅಲೆಯ ನಡುವೆ ಡುಮ್ಮಿ ದಾಮಿನಿ ಮಮ್ಮಿಯಾಗಲೂ ನಾಲಾಯಕ್ಕು ಅಂತ ತೀರ್ಮಾನವಾಗಿಬಿಟ್ಟಿತು. ಮೊನ್ನೆ ತಾನೇ ಬೆಂಗಳೂರಲ್ಲಿ ತೆರೆ ಕಂಡ ಉಪ್ಪಿ ಅಭಿನಯದ ತೆಲುಗು ಚಿತ್ರ ‘ರಾ’ದಲ್ಲಿ ಇದೇ ದಾಮಿನಿ ನಾಯಕಿಯಲ್ಲ; ಪೋಷಕ ನಟಿ.


ಹಾಲು ಸಕ್ಕರೆ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದ ವೇಳೆಯಲ್ಲಿ ನಾವು ಬಲ್ಲವರೊಟ್ಟಿಗೆ ದಾಮಿನಿ ಹಂಚಿಕೊಂಡಿದ್ದ ಮಾತುಗಳನ್ನು ನೆನೆಯಲು ಇದು ಒಳ್ಳೆ ಸಮಯ.

ಉಪೇಂದ್ರ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
ಅದೊಂದು ಪ್ಲೆಸೆಂಟ್‌ ಸರ್‌ಪ್ರೆೃಸ್‌. ನಿಜವಾಗಿ ನಾನು ನಾಯಕಿ ಆಗ್ತೀನಿ ಅಂತ ಕನಸೂ ಕಂಡಿರಲಿಲ್ಲ. ನಾನು ಹಾಗೂ ನನ್ನ ಕೆಲವು ಗೆಳತಿಯರಿಗೆ, ಚಿತ್ರ ತಾರೆಗಳಿಗೆ ಕನ್ನಡದ ಸಿನಿಮಾ ಮ್ಯಾಗಜೀನ್‌ಗಳ ಮೂಲಕ ಫೋಟೋ ಹಾಗೂ ಅಡ್ರೆಸ್‌ ಕಳಿಸಿಕೊಡುವ ಹುಚ್ಚು. ಉಪೇಂದ್ರ ಅವರಿಗೂ ನನ್ನ ಫೋಟೋ ಹಾಗೂ ಅಡ್ರೆಸ್‌ ಕಳಿಸಿಕೊಟ್ಟಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಫೋನು, ಉಪೇಂದ್ರ ಅವರಿಂದ. ತಮ್ಮನ್ನು ಬಂದು ಕಾಣುವಂತೆ ಹೇಳಿದರು. ಮನೆಗೆ ಹೋಗಿ, ಅಪ್ಪ- ಅಮ್ಮನಿಗೆ ಹೇಳಿದೆ. ಆದರೆ ಅವರು ಯಾರೋ ಹುಡುಗಾಟಕ್ಕೆ ಉಪೇಂದ್ರ ಹೆಸರಿನಲ್ಲಿ ಫೋನ್‌ ಮಾಡಿದ್ದಾರೆ ಅಂದುಬಿಟ್ಟರು. ಇರಬೇಕೆಂದು ಸುಮ್ಮನಾದೆ. ಕೆಲವು ದಿನಗಳ ನಂತರ ಮತ್ತೆ ಉಪೇಂದ್ರ ಫೋನು. ಟ್ರೆೃ ಮಾಡೇ ಬಿಡೋಣ ಅಂದುಕೊಂಡು ಹೋದೆ. ಸಿನಿಮಾದಲ್ಲಿ ಛಾನ್ಸ್‌. ಆಗ ಆಕಾಶಕ್ಕೂ ನನಗೂ ಮೂರೇ ಗೇಣು!

ದೊಡ್ಡ ಬಜೆಟ್ಟಿನ, ಗೆಲ್ಲುವ ನಿರ್ದೇಶಕನೊಬ್ಬನ ಸಿನಿಮಾದಲ್ಲಿ ನಾಯಕಿ ಪಟ್ಟ. ಹೈಸ್ಕೂಲಿನ ಹುಡುಗಿಯಾಗಿದ್ದ ನಿಮಗೆ ಅದು ನುಂಗಲಾರದ ತುತ್ತಾಗಲಿಲ್ಲವೇ?
ಖಂಡಿತ ಆಯಿತು. ನಮ್ಮ ನೆಂಟರು ಇಷ್ಟರಿಗೂ ಏನೋಭಯ. ಎಂಥಾ ಪಾತ್ರವೋ ಏನೋ ಎಂಬ ಆತಂಕ. ಉಪೇಂದ್ರ ಅವರಲ್ಲಿ ಅಪ್ಪ- ಅಮ್ಮ ಕೇಳಿದಾಗ, ಅದು ನಾಯಕಿ ಪಾತ್ರ ಎಂಬುದು ಖಚಿತವಾಯಿತು. ಅದೊಂದು ಮರೆಯಲಾಗದ ಘಳಿಗೆ.

ಹೊಸಬರಾದ ನಿಮಗೆ ಪ್ರಾಮುಖ್ಯತೆ ಕೊಟ್ಟ ಬಗ್ಗೆ ಬಾಲಿವುಡ್‌ ತಾರೆ ರವೀನಾ ಟಂಡನ್‌ ಹಾಗೂ ಕನ್ನಡದ ಗೆಲುವಿನ ಕುದುರೆ ಪ್ರೇಮಾ ಪ್ರತಿಕ್ರಿಯೆ ಹೇಗಿತ್ತು?
ಸಿನಿಮಾ ಮಾಡೋಕೆ ಮುಂಚೆಯೇ ಉಪೇಂದ್ರ ಅಂದುಕೊಂಡಿದ್ದರಂತೆ- ಪ್ರೇಮಾ, ರವೀನಾ ಹಾಗೂ ದೀಪ್ತಿ ಭಟ್ನಗರ್‌ಕರ್‌ ನಾಯಕಿಯರು. ದೀಪ್ತಿ ಜಾಗೆಗೆ ನಾನು ಆಯ್ಕೆಯಾದೆ. ಪ್ರಾಮಾಣಿಕವಾಗಿ ಹೇಳ್ತೀನಿ, ನನಗೆ ರವೀನಾ ಯಾರು ಅಂತಲೇ ಗೊತ್ತಿರಲಿಲ್ಲ. ಹಿಂದಿ ಸಿನಿಮಾನೇ ನಾನು ನೋಡುತ್ತಿರಲಿಲ್ಲ. ಇನ್ನು ಅವರ ಪ್ರತಿಕ್ರಿಯೆ ಹೇಗಿತ್ತು ಅನ್ನೋದು ನನ್ನ ಅನುಭವಕ್ಕೆ ತಕ್ಷಣವೇ ನಿಲುಕಲಿಲ್ಲ. ಆದರೆ ಎಲ್ಲಾ ಪಾತ್ರಗಳಿಗೂ ಸಮಾನ ಅವಕಾಶಗಳಿದ್ದವು. ಪ್ರೇಮಾ, ರವೀನಾ, ನಾನು ಎಲ್ಲರೂ ಸಿನಿಮಾದಲ್ಲಿ ಮುಖ್ಯ. ಚಿತ್ರಕತೆಯಿಂದಾಗಿ ನನ್ನ ಪಾತ್ರ ಕೊಂಚ ಬಿಗಿಯಾಗಿತ್ತು ಅಷ್ಟೆ.

ಉಪೇಂದ್ರ ನಂತರದ ದಿನಗಳಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿಲ್ಲವಾ?
ಇಲ್ಲ. ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆದರೂ ಯಾರೂ ನನ್ನನ್ನು ಹುಡುಕಿಕೊಂಡು ಬರಲಿಲ್ಲ. ನನ್ನನ್ನು ಸಿನಿಮಾ ಮಂದಿ ಇನ್ನೂ ಚಿಕ್ಕ ಹುಡುಗಿ ಎಂದೇ ಭಾವಿಸಿದ್ದರು. ಹಿರಿಯ ನಟರಿಗೆ ಜೋಡಿಯಾಗಲು ನಾನು ನಾಲಾಯಕ್ಕು ಅಂತಾಯಿತು. ಹೀಗಾಗಿ ಅವಕಾಶಗಳು ಮನೆ ಬಾಗಿಲಿಗೆ ಬರಲಿಲ್ಲ. ಉಪೇಂದ್ರ ಚಿತ್ರದ ಆ ಪಾತ್ರ ಹೈಸ್ಕೂಲ್‌ ಹುಡುಗಿಯದ್ದೇನೂ ಆಗಿರಲಿಲ್ಲ. ನಾನು ಯೋಚಿಸಿದೆ. ಕೊಂಚ ತೂಕ ಹೆಚ್ಚಿಸಿಕೊಂಡು ನಾಯಕಿಯಾಗಿ ಮುಂದುವರೆಯಲೇಬೇಕೆಂದು ಶ್ರಮ ಪಟ್ಟೆ (ಈ ಪ್ರಯತ್ನ ಅತಿಯಾಗೇ ಅವರ ತೂಕ ಹೆಚ್ಚಾಗಿರಬಹುದು).

ಈಗ ಐದಾರು ಸಿನಿಮಾಗಳು ನಿಮ್ಮ ಕೈಲಿವೆ. ನಿಮ್ಮ ಜೊತೆ ನಟಿಸುವವರ ಪ್ರಕಾರ ಇವತ್ತೂ ನೀವು ‘ಪುಟ್ಟಿ’ಯೇ?
ಹಾಗೇನೂ ಇಲ್ಲ (ನಗು). ಅದೃಷ್ಟ ಮತ್ತೆ ನನ್ನ ಕಡೆಗೆ ಬಂದಿತೋ ಏನೋ, ಒಂದೂವರೆ ವರ್ಷದಲ್ಲೇ ಅನಂತನಾಗ್‌, ಗಿರೀಶ್‌ ಕಾರ್ನಾಡ್‌, ಅಂಬರೀಶ್‌, ಶಿವರಾಜ ಕುಮಾರ್‌, ರಾಮ್‌ ಕುಮಾರ್‌, ಜಗ್ಗೇಶ್‌, ದೇವರಾಜ್‌, ಪ್ರೇಮಾ ಸುಹಾಸಿನಿ ಅಂತವರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಹ್ಞಾಂ, ಉಪೇಂದ್ರ ಕೂಡ ನನ್ನನ್ನು ಮರೆತಿಲ್ಲ (ನಾಯಕಿಯಾಗಂತೂ ಮರೆತಿದ್ದಾರಲ್ಲಾ!).

ನೀವು ಓದನ್ನು ಮೊಟಕುಗೊಳಿಸಿದ್ದೀರಿ ಅಂತ ಕೇಳಿದ್ದೇವೆ. ಅದಕ್ಕೆ ನಿಮಗೆ ಬೇಸರವಿಲ್ಲವಾ?
ಸಿನಿಮಾದಲ್ಲಿ ಪಾತ್ರ ಮಾಡೋದೇ ನನ್ನ ಹಣೇಲಿ ಬರೆದಿದೆ ಅಂತ ಕಾಣುತ್ತೆ. ಉಪೇಂದ್ರ ಆದ ಮೇಲೆ ಎಸ್ಸೆಸ್ಸೆಲ್ಸಿ ಮುಗಿಸಿದೆ. ಕಾಲೇಜು ಮೆಟ್ಟಿಲು ಹತ್ತಲಿಲ್ಲ. ಏನು ಮಾಡೋಕಾಗುತ್ತೆ ಹೇಳಿ; ಒಂದನ್ನ ಪಡೆಯೋದಕ್ಕೆ ಮತ್ತೊಂದನ್ನ ಕಳಕೊಳ್ಳಲೇಬೇಕು. ಹಾಗಂತ ಈಗಲೂ ನಾನು ವಿದ್ಯಾರ್ಥಿನಿ ಅಲ್ಲ ಎಂದು ಹೇಳಲಾಗದು. ಯಾವುದೇ ಕ್ಷೇತ್ರದಲ್ಲಿ ಯಾರೇ ಆಗಲಿ, ಕಲಿಯೋದು ಇದ್ದೇ ಇರುತ್ತೆ. ನನ್ನ ದೃಷ್ಟಿಯಲ್ಲಿ ಶಿಕ್ಷಣ ಅನ್ನುವುದು ನಿರಂತರ.

ಹೌದು, ದಾಮಿನಿ ಮಾತು ನಿಜ. ಆಕೆ ಈಗಲೂ ಕಲಿಯುತ್ತಲೇ ಇದ್ದಾರೆ. ಕಲಿಯಲೇ ಬೇಕು ಕೂಡ. ಕುಣಿಯುವುದು, ಕುಣಿಸುವುದು, ತೆಳ್ಳಗಾಗುವುದು, ಬಳುಕುವುದು. ಅಸುರ ಚಿತ್ರದ ವೈಫಲ್ಯ ಅವರಿಗೆ ಇವೆಲ್ಲಾ ಕಲಿಸಿರಬಹುದೇ?!

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada