»   » ದಂಡಪಿಂಡಗಳಿಗೆ ಮಂಗಳ ಹಾಡಲಾಗಿದೆ...

ದಂಡಪಿಂಡಗಳಿಗೆ ಮಂಗಳ ಹಾಡಲಾಗಿದೆ...

Posted By: Staff
Subscribe to Filmibeat Kannada
serial dandapindagalu
ಬಿ.ಎ, ಬಿಎಸ್ಸಿ, ಬಿಕಾಂ ಮಾಡಿ, ಕೆಲಸವೆ ಸಿಗದೆ ಬರಿ ಅಲೆದಾಡಿ, ಎಲ್ಲರ ಕೈಲೂ ಉಗಿಸಿಕೊಳ್ಳುವ ವೇಸ್ಟು ಬಾಡಿಗಳು.. ದಂಡಪಿಂಡಗಳು, ಇವರು.... ಎಂದು ಪ್ರತಿದಿನ ರಾತ್ರಿ 7.30ಕ್ಕೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಫಣಿ ರಾಮಚಂದ್ರ ನಿರ್ದೇಶನದ ಮೆಗಾ ಧಾರಾವಾಹಿ ಅಕ್ಟೋಬರ್‌ 3ರಂದು ಮುಕ್ತಾಯಗೊಂಡಿತು.

ಸೋಮಾರಿ ಕಟ್ಟೆಯಿಂದ ಆರಂಭವಾದ ಧಾರಾವಾಹಿ, ಅದೇ ಕಟ್ಟೆಯಲ್ಲೇ ಕೊನೆಗೊಂಡಿತು. ಆತ್ಮಸ್ಥೈರ್ಯ, ಛಲದಿಂದ ಮುನ್ನುಗ್ಗಿದರೆ, ನಿರುದ್ಯೋಗವನ್ನು ಮೆಟ್ಟಿನಿಂತು, ಕೋಟ್ಯಧಿಪತಿಗಳಾಗಬಹುದು ಎಂಬ ಸಂದೇಶದೊಂದಿಗೆ ಧಾರಾವಾಹಿಗೆ ಮಂಗಳ.


ಧಾರಾವಾಹಿ ಮುಗಿದ ಬಳಿಕ ಎಂದಿನಂತೆ ಪುಟ್ಟದೊಂದು ಉಪನ್ಯಾಸ ನೀಡಿದ ಫಣಿ ರಾಮಚಂದ್ರ, ತಮ್ಮ ಧಾರಾವಾಹಿಯ ಹಿಂದಿರುವ ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದೆ, ಧಾರಾವಾಹಿ ವಿರುದ್ಧ ಕಿಡಿಕಾರಿದ್ದ ಪತ್ರಿಕೆಗಳನ್ನು ತರಾಟೆಗೆ ತೆಗೆದುಕೊಂಡರು.

ಅರ್ಧಂಬರ್ಧ ತಿಳಿದ ವ್ಯಕ್ತಿಗಳು ಇನ್ನೇನು ಹೇಳಲು ಸಾಧ್ಯ ಎಂದರು. ಈ ಎಲ್ಲ ಟೀಕೆಗಳನ್ನು ಮೆಟ್ಟಿ ತಮ್ಮ ಧಾರಾವಾಹಿ ಮಾಡಿದ ಸಾಧನೆ ವಿವರಿಸಿದರು. ದಂಡಪಿಂಡ ಧಾರಾವಾಹಿಯಿಂದ ಪ್ರೇರಿತರಾಗಿ ಹಲವರು ಕೀಳರಿಮೆ ತೊರೆದರು, ಮತ್ತೆ ಕೆಲವರು ಸ್ವಉದ್ಯೋಗಿಗಳಾದರು, ಇನ್ನು ಹಲವರು ತಮ್ಮ ವಿಳಾಸ ಪತ್ತೆ ಹಚ್ಚಿ ಪತ್ರ ಬರೆದರು, ಮತ್ತೆ ಕೆಲವರು ತಮ್ಮ ಧಾರಾವಾಹಿಯ ಷೂಟಿಂಗ್‌ ನಡೆವ ಸ್ಥಳ ಪತ್ತೆ ಹಚ್ಚಿ ಅಲ್ಲಿಗೆ ಬಂದು ಅಭಿನಂದಿಸಿದರು ಎಂದರು.

ಒಟ್ಟಾರೆ, ಕೆಲವರಿಗೆ ಇಷ್ಟವಾಗದಿದ್ದರೂ, ಹಲವರಿಗೆ ಹಿಡಿಸಿದ ಈ ಧಾರಾವಾಹಿ ಕೊನೆಗೊಂಡಿದೆ. ದಂಡ ಪಿಂಡ ಎನಿಸಿಕೊಂಡಿದ್ದ ವೇಸ್ಟ್‌ ಬಾಡಿಗಳ ಪೈಕಿ ವೇಸ್ಟ್‌ ವೆಂಕಟೇಶ - ಕೋಟ್ಯಂತರ ರುಪಾಯಿ ಲಾಭದ ಕಂಪನಿ ಮೇನೇಜಿಂಗ್‌ ಡೈರೆಕ್ಟರಾಗಿ, ದೊಡ್ಡ ಮನೆ ಮಾಲಿಕನಾದರೆ, ಕಳ್ಳ ಮಂಜ ಮಿನಿಸ್ಟ್ರೇ ಆದ, ಇನ್ನು ರಮೇಶ ಶತದಿನ ಆಚರಿಸಿದ 'ಅವಮಾನ" ಚಿತ್ರದ ನಿರ್ದೇಶಕನಾಗಿ ಕೋಟ್ಯಂತರ ರುಪಾಯಿ ಗಳಿಸಿ, ದಾನ ಮಾಡಿ ಕೆಟ್ಟವರಿಲ್ಲ ಎಂಬ ನೀತಿ ಸಾರಿದ.

ಹೀಗೆ ಎಲ್ಲರ ಕೈಲೂ ಬೈಸಿಕೊಳ್ಳುತ್ತಿದ್ದ ವೇಸ್ಟ್‌ ಬಾಡಿಗಳನ್ನು ಸರ್ವರಿಂದಲೂ ಹೊಗಳಿಸಿಕೊಳ್ಳುವಂತೆ ಮಾಡಿ ಧಾರಾವಾಹಿಯನ್ನು ಅಂತ್ಯಗೊಳಿಸಿದ ಫಣಿ ಮಾತ್ರ ಕೊನೆಯಲ್ಲಿ ಕೆಲವು ಪತ್ರಿಕೆಗಳನ್ನು ಬೈಯುವುದರೊಂದಿಗೇ ತಮ್ಮ ಧಾರಾವಾಹಿಗೆ ಮಂಗಳ ಹಾಡಿದ್ದಾರೆ.

ಅ.4 ಮತ್ತು 5ರಂದೂ ಈ ಧಾರಾವಾಹಿಯ ಎರಡು ಹಳೆ ಕಂತುಗಳು ಪ್ರಸಾರವಾಗಲಿವೆ. 5ರಂದು ನೂರನೇ ಸೀರಿಯಲ್‌ ಅನ್ನು ಮರು ಪ್ರಸಾರ ಮಾಡಿ, ಈ ಧಾರಾವಾಹಿಗೆ ಅಧಿಕೃತವಾಗಿ ಸಂಪೂರ್ಣ ಮಂಗಳ ಹಾಡುವುದಾಗಿ ಫಣಿ ಪ್ರಕಟಿಸಿದ್ದಾರೆ. ಅಂದಹಾಗೆ ಶುಕ್ರವಾರ ರಾತ್ರಿ ಧಾರಾವಾಹಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಅರಿಯಲು ವಿಳಾಸನೂ ಕೊಡ್ತಾರಂತೆ.

ಬಾಲಂಗೋಸಿ: ಧಾರಾವಾಹಿ ಮುಗೀತು ಎಂಬ ಸುದ್ದಿ ಕೇಳಿ ಸಂಪ್ರದಾಯಸ್ಥ ಬ್ರಾಹ್ಮಣರೊಬ್ಬರು ಹೇಳಿದ್ದು. ಸದ್ಯ ಇನ್ನು ಮುಂದೆ ದೀಪ ಹಚ್ಚೋ ಹೊತ್ತಲ್ಲಿ, ಪಿಂಡ... ಗಿಂಡ ಅನ್ನೋದು ನಿಲ್ಲತ್ತಪ್ಪ.....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada