ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಬಳಿಕ ದಂಡುಪಾಳ್ಯಂ-4 ದಾಖಲೆ
ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಅಂತಹ ಮೆಗಾ ಕನ್ನಡದ ಚಿತ್ರಗಳ ಬಳಿಕ ದಂಡುಪಾಳ್ಯಂ 4 ಸಿನಿಮಾ ಮಹತ್ವದ ದಾಖಲೆ ಮಾಡುತ್ತಿದೆ. ದಂಡುಪಾಳ್ಯಂ 4 ಚಿತ್ರದ ಬಿಡುಗಡೆಯ ವಿಶೇಷತೆ ನೋಡಿ ಇಡೀ ಗಾಂಧಿನಗರ ಬೆಚ್ಚಿಬಿದ್ದಿದೆ.
ಹೌದು, ಕನ್ನಡ ಸಿನಿಮಾಗಳು 3 ಭಾಷೆ, 4 ಭಾಷೆ, 5 ಭಾಷೆಗಳಲ್ಲಿ ತೆರೆಕಂಡು ದಾಖಲೆ ನಿರ್ಮಿಸಿರುವುದು ಗೊತ್ತಿದೆ. ಇದೀಗ, ದಂಡುಪಾಳ್ಯಂ 4 ಸಿನಿಮಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ 10 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ನವೆಂಬರ್ 1 ರಂದು ತೆಲುಗಿನಲ್ಲಿ 400 ಚಿತ್ರಮಂದಿರಗಳು ಹಾಗೂ ಕನ್ನಡದಲ್ಲಿ ಗರಿಷ್ಠ 300 ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ಆಂಧ್ರ-ತೆಲಂಗಾಣದಲ್ಲಿ ಇದುವರೆಗೂ 400 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡ ಸಿನಿಮಾ ದಂಡುಪಾಳ್ಯಂ 4 ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ನವೆಂಬರ್ ಕೊನೆಯಲ್ಲಿ ತಮಿಳುನಾಡಿನ 300ಕ್ಕೂ ಅಧಿಕ ಚಿತ್ರಮಂದಿರ ಹಾಗೂ ಕೇರಳದ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ದಂಡುಪಾಳ್ಯಂ 4 ಎಂಟ್ರಿಯಾಗಲಿದ್ದು, ಪ್ರತಿಷ್ಠಿತ ವಿತರಕರು ತಯಾರಿ ನಡೆಸುತ್ತಿದ್ದಾರೆ.
ಇನ್ನು ಜನವರಿ ತಿಂಗಳಲ್ಲಿ ಹಿಂದಿ, ಬೋಜ್ ಪುರಿ, ಮರಾಠಿ, ಛತ್ತೀಸ್ ಗಡ್, ಗುಜರಾತಿ, ಬೆಂಗಾಳಿ ಭಾಷೆಯಗಳಲ್ಲಿ ಏಕಕಾಲದಲ್ಲಿ 1000 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯೋಜನೆ ಸಿದ್ಧಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಒಂದೇ ಬಾರಿ ಎಲ್ಲ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡರೆ, ಅಲ್ಲಿನ ಪರಿಸ್ಥಿತಿ ನಮಗೆ ಅನುಕೂಲಕರವಾಗಿಲ್ಲದಿದ್ದರಿಂದ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಕೇವಲ ಬೆನ್ನು ತಟ್ಟಿಕೊಳ್ಳುವ ಕೆಲಸವಾಗುತ್ತದೆಯಂದು, ಹಂತ ಹಂತವಾಗಿ ರೂಪಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಅಂದ್ಹಾಗೆ, ದಂಡುಪಾಳ್ಯಂ 4 ಸಿನಿಮಾ ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಭಾರತದ ಇತಿಹಾಸದಲ್ಲಿ ಇದೊಂದು ಮಾಸ್ಟರ್ ಪೀಸ್ ಆಗಬಲ್ಲದು ಎಂಬ ಅಭಿಪ್ರಾಯವಿದೆ. ದಂಡುಪಾಳ್ಯಂ 4 ಚಿತ್ರದ ಟ್ರೈಲರ್ ಇದೇ ಶುಕ್ರವಾರ ಬರ್ತಿದೆ. ಉಳಿದಂತೆ ಸುಮನ ರಂಗನಾಥ್, ಮುಮೈತ್ ಖಾನ್ ಸೇರಿದಂತೆ ಹಲವರು ನಟಿಸಿದ್ದು, ಕೆಟಿ ನಾಯಕ್ ನಿರ್ದೇಶಿಸಿದ್ದಾರೆ. ವೆಂಕಟ್ ನಿರ್ಮಿಸಿದ್ದಾರೆ.


Click it and Unblock the Notifications











