ಒಟಿಟಿ ಬಿಟ್ಟು ಚಿತ್ರಮಂದಿರದ ಕಡೆ ಮುಖ ಮಾಡಿದ ದಾನಿಶ್ ಸೇಠ್
ಬಹುಮುಖ ಪ್ರತಿಭೆ ದಾನಿಶ್ ಸೇಠ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರತ್ಯೇಕ ಗುರುತು ಮೂಡಿಸಿಕೊಳ್ಳಲು ಯತ್ನ ಮಾಡುತ್ತಲೇ ಇದ್ದಾರೆ.
ತಮ್ಮ ಪ್ರಾಂಕ್ ಕಾಲ್ಸ್‌ಗಳಿಂದ ಕರ್ನಾಟಕ ಮಾತ್ರವಲ್ಲ ದೇಶದ ಜನತೆಗೆ ಪರಿಚಯವಾಗಿದ್ದ ದಾನಿಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪಾತ್ರಗಳನ್ನು ಸೃಷ್ಟಿಸಿ ಸಂದೇಶ ಪೂರ್ವಕ ಹಾಸ್ಯದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. ಅದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಕೆಲವು ವರ್ಷಗಳಿಂದ ಇದ್ದು ಐಪಿಎಲ್‌ನ ಭಾಗವಾಗಿರುವ ದಾನಿಶ್ ಮಿಸ್ಟರ್ ನ್ಯಾಗ್ಸ್ ಪಾತ್ರದ ಮೂಲಕ ದೇಶ-ವಿದೇಶಗಳಲ್ಲಿಯೂ ಜನಪ್ರಿಯರಾಗಿದ್ದಾರೆ.
ಇದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿಯೂ ದಾನಿಶ್ ಸಕ್ರಿಯರಾಗಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ದಾನಿಶ್ ಸೇಠ್ ಆ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತಾವು ಕೇವಲ ಸೀಸನಲ್ ನಟನಲ್ಲ ಇಲ್ಲಿಯೇ ನೆಲೆಸಲು ಬಂದಿದ್ದೇನೆ ಎಂಬುದನ್ನು ನಿರೂಪಿಸಿದ್ದಾರೆ.

ಒಟಿಟಿಗಳಲ್ಲಿ ಬಿಡುಗಡೆ ಆಗಿತ್ತು
'ಹಂಬಲ್ ಪೊಲಿಟೀಶಿಯನ್ ನೊಗ್‌ರಾಜ್' ಬಳಿಕ ಪಿಆರ್‌ಕೆ ಪ್ರೊಡಕ್ಷನ್ಸ್‌ನ 'ಫ್ರೆಂಚ್ ಬಿರಿಯಾನಿ', ಬಳಿಕ ಪಿಆರ್‌ಕೆ ಅವರದ್ದೇ ಪ್ರೊಡಕ್ಷನ್‌ನಲ್ಲಿ 'ಒನ್ ಕಟ್ ಟು ಕಟ್' ಸಿನಿಮಾಗಳಲ್ಲಿ ನಟಿಸಿ ಆ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇದೀಗ ಇನ್ನೊಂದು ಸಿನಿಮಾದಿಂದ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ ದಾನಿಶ್. 'ಒನ್ ಕಟ್ ಟು ಕಟ್' ಸಿನಿಮಾ ಬಿಡುಗಡೆ ಸಮಯದಲ್ಲಿ ಮಾತನಾಡಿದ್ದ ದಾನಿಶ್, ನನ್ನನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರ್ತಾರೆ ಎಂಬ ನಂಬಿಕೆ ಇಲ್ಲ ಎಂದಿದ್ದರು, ಆದರೆ ಈಗ ಅವರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಮಾರ್ಚ್ ತಿಂಗಳಲ್ಲಿ ಸಿನಿಮಾ ಬಿಡುಗಡೆ
ದಾನಿಶ್ ಸೇಠ್ ನಟನೆಯ 'ಸೋಲ್ಡ್' ಸಿನಿಮಾ ಮಾರ್ಚ್ 04ನೇ ತಾರೀಖಿನಂದು ಬಿಡುಗಡೆ ಆಗುತ್ತಿದ್ದು, ಇಷ್ಟು ದಿನ ಒಟಿಟಿ ಸ್ಟಾರ್ ಎನಿಸಿಕೊಂಡಿದ್ದ ದಾನಿಶ್ ಸೇಠ್ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ದಾನಿಶ್‌ರ ಮೊದಲ ಸಿನಿಮಾ 'ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್' ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಬಂದ 'ಫ್ರೆಂಚ್ ಬಿರಿಯಾನಿ', 'ಒನ್ ಕಟ್ ಟು ಕಟ್' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದರೆ, 'ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್' ವೆಬ್ ಸರಣಿ ಜೀ5 ನಲ್ಲಿ ಪ್ರಸಾರವಾಗುತ್ತಿದೆ.

ಪೊಲೀಸ್ ಅಧಿಕಾರಿಯಾಗಿ ದಾನಿಶ್ ಸೇಠ್
'ಸೋಲ್ಡ್' ಸಿನಿಮಾದಲ್ಲಿ ದಾನಿಶ್ ಸೇಠ್ ಜೊತೆಗೆ ಕಾವ್ಯಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದು ಈ ಸಿನಿಮಾ ಒಂದು ಕ್ರೈಂ ಥ್ರಿಲ್ಲರ್ ಕತೆಯಾಗಿದೆ. ಇಷ್ಟು ವರ್ಷ ಕೇವಲ ಹಾಸ್ಯ ಪಾತ್ರಗಳನ್ನಷ್ಟೆ ಮಾಡಿಕೊಂಡು ಬಂದಿರುವ ದಾನಿಶ್ ಸೇಠ್ ಇದೇ ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. 'ಸೋಲ್ಡ್' ಸಿನಿಮಾದಲ್ಲಿ ದಾನಿಶ್ ಸೇಠ್‌ರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಕಾವ್ಯಾ ಶೆಟ್ಟಿಯದ್ದು ಪತ್ರಕರ್ತೆಯ ಪಾತ್ರ. ಸಿನಿಮಾವು ಮಾನವ ಕಳ್ಳ ಸಾಗಣಿಕೆ ಕುರಿತಾದ ಕತೆಯನ್ನು ಹೊಂದಿದೆ.

ನಿರ್ಮಾಪಕ ದೀಪಮ್ ಕೊಹ್ಲಿ
ಸಿನಿಮಾವನ್ನು ಪ್ರೇರಣಾ ಅಗರ್ವಾಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರಿವುದು ದೀಪಮ್ ಕೊಹ್ಲಿ. ಸಿನಿಮಾಕ್ಕೆ ಸಂಗೀತ ನೀಡಿರುವುದು ಜೀತ್ ಸಿಂಗ್ ಕ್ಯಾಮೆರಾ ಕೆಲಸ ಸಮೀರ್ ದೇಶ್‌ಪಾಂಡೆ. ನಿರ್ಮಾಪಕ ದೀಪಮ್ ಬಂಡವಾಳ ಹೂಡಿರುವ ಜೊತೆಗೆ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಭರತ್ ಜೆಬಿ, ಸಿದ್ಧಾರ್ಥ್ ಮಾಧ್ಯಮಿಕ, ಭವಾನಿ ಪ್ರಕಾಶ್ ಇತರೆ ನಟ-ನಟಿಯರು ಸಿನಿಮಾದಲ್ಲಿದ್ದಾರೆ.


Click it and Unblock the Notifications











